ಉದ್ಯೋಗಿ ಮೃತಪಟ್ಟ ನಂತರ ಆತನ ಪಿಎಫ್ ಹಣ ತಾಯಿಗೋ? ಪತ್ನಿಗೋ? ಯಾರಿಗೆ ಸೇರುತ್ತೆ ಗೊತ್ತೆ..?
ನವದೆಹಲಿ: ಉದ್ಯೋಗಿಯೊಬ್ಬ ಮೃತಪಟ್ಟ ಬಳಿಕ ಆತನ ಆತನ ಸಾಮಾನ್ಯ ಭವಿಷ್ಯ ನಿಧಿಯಲ್ಲಿರುವ (ಜಿಪಿಎಫ್) ಹಣವನ್ನು, ಪಿಎಫ್ ಹಣದ ಮೊತ್ತವನ್ನು ಪತ್ನಿ ಹಾಗೂ ಆತನ ತಾಯಿ ಇಬ್ಬರಿಗೂ ಸಮಾನವಾಗಿ ಹಂಚಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಇತ್ತೀಚೆಗೆ, ಸುಪ್ರೀಂ ಕೋರ್ಟ್ ಮುಂದೆ ಬಂದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಂಜಯ್ ಕಾರಜೋಳ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಈ ತೀರ್ಪನ್ನು ನೀಡಿದೆ. ಪತಿಯು ತನ್ನ ತಾಯಿಗೆ ಮಾತ್ರ ನಾಮಿನಿ ಮಾಡಿದ್ದರೂ ಆತನ ಪತ್ನಿಯು ಆತನ ಕುಟುಂಬಕ್ಕೇ ಸೇರಿದವಳಾಗಿರುವುದರಿಂದ ಪಿಎಫ್ ಹಣದಲ್ಲಿ ಆಕೆಗೂ ಪಾಲು ಕೊಡಬೇಕು. ಇಂಥ ಪ್ರಕರಣಗಳಲ್ಲಿ ನಾಮಿನೇಷನ್ ಇಲ್ಲಿ ಅಮಾನ್ಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ತೀರ್ಪಿನಿಂದಾಗಿ, ಮರಣ ಹೊಂದಿದ ಸರ್ಕಾರಿ ನೌಕರನ ಜಿಪಿಎಫ್ ಹಣವನ್ನು ಪತ್ನಿ ಮತ್ತು ತಾಯಿ ಇಬ್ಬರೂ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಸರ್ಕಾರಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು 2003ರಲ್ಲಿ ಮದುವೆಯಾಗಿದ್ದು, ಮದುವೆಯಾದ ನಂತರ ಆತ ತನ್ನ ಬ್ಯಾಂಕ್ ಖಾತೆಗಳು, ಪಾಲಿಸಿಗಳು ಎಲ್ಲೆಡೆ ನಾಮಿನಿಯಾಗಿ ತನ್ನ ಪತ್ನಿಯ ಹೆಸರನ್ನು ಸೇರಿಸಿದ್ದರು. ಆದರೆ, ತನ್ನ ಜಿಪಿಎಫ್ ಖಾತೆಗೆ ಮಾತ್ರ ತಾಯಿ ಹೆಸರನ್ನು ನೀಡಿದ್ದರು. ಈ ಮಧ್ಯೆ ಉದ್ಯೋಗಿ 2021ರಲ್ಲಿ ಮೃತಪಟ್ಟಿದ್ದು, ಸರ್ಕಾರಿ ನಿಯಮಗಳಂತೆ ಆತನ ಮರಣದಿಂದ ಪಡೆಯಬೇಕಾದ ಎಲ್ಲಾ ಹಣವನ್ನು ಪತ್ನಿ ಪಡೆದಿದ್ದಳು. ಆದರೆ, ಪಿಎಫ್ ಹಣವನ್ನು ಮಾತ್ರ ಆಕೆಗೆ ಕೊಡಲು ಪಿಎಫ್ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದರು. ಪಿಎಫ್ ನಾಮಿನಿಯಲ್ಲಿ ವ್ಯಕ್ತಿಯು ತನ್ನ ತಾಯಿಯ ಹೆಸರು ಉಲ್ಲೇಖ ಮಾಡಿದ್ದರಿಂದ ಪತ್ನಿಗೆ ಕೊಡಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮೃತ ನೌಕರನ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದು, ಮೊದಲು ಅವರು ಕೇಂದ್ರ ಆಡಳಿತ ನ್ಯಾಯಮಂಡಳಿಗೆ (CAT) ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಸಿಎಟಿ ನ್ಯಾಯಾಲಯವು, ಜಿಪಿಎಫ್ ಹಣವನ್ನು ತಾಯಿ ಮತ್ತು ಪತ್ನಿ ಇಬ್ಬರಿಗೂ ಸಮಾನವಾಗಿ ಹಂಚಬೇಕು ಎಂದು ತೀರ್ಪು ಪ್ರಕಟಿಸಿತು. ಆದರೆ, ನಂತರ ಬಾಂಬೆ ಹೈಕೋರ್ಟ್ CAT ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಇದರಿಂದ ಬಾಧಿತರಾದ ಆಕೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು.
ಈ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠವು, “2003ರಲ್ಲಿ ವಿವಾಹವಾದಾಗಿನಿಂದ 2021ರಲ್ಲಿ ಮರಣ ಹೊಂದುವವರೆಗೂ, ಪತಿಗೆ ಜಿಪಿಎಫ್ ನಾಮಿನೇಷನ್ ಅನ್ನು ಬದಲಾಯಿಸಲು ಅವಕಾಶವಿತ್ತು, ಆದರೆ ಅವನು ಹಾಗೆ ಮಾಡಲಿಲ್ಲ. ಪತ್ನಿ ಬಂದ ನಂತರ, ತಾಯಿಯ ಹೆಸರಿನಲ್ಲಿ ಮಾಡಿದ್ದ ನಾಮಿನೇಷನ್ ಅಮಾನ್ಯವಾಗುತ್ತದೆ. ಆದ್ದರಿಂದ, 2003 ರಲ್ಲಿಯೇ ಅದು ಅಮಾನ್ಯವಾಗಿದೆ ಎಂದು ನ್ಯಾಯಪೀಠ ಸ್ಪಷ್ಟನೆ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
