10/09/2026

Law Guide Kannada

Online Guide

ಮೃತ ವ್ಯಕ್ತಿಯ ಹೆಸರಿನಲ್ಲಿ ಅರ್ಜಿ: ಅಚ್ಚರಿ ವ್ಯಕ್ತಪಡಿಸಿ ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಮೃತಪಟ್ಟಿ ಐದು ವರ್ಷಗಳಾಗಿರುವ ವ್ಯಕ್ತಿಯ ಹೆಸರಿನಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದ ವಿಚಾರ ಬೆಳಕಿಗೆ ಬಂದಿದ್ದು ಇದಕ್ಕೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿದೆ.

ವ್ಯಕ್ತಿಯೊಬ್ಬರು ಮೃತಪಟ್ಟ ಐದು ವರ್ಷಗಳ ಬಳಿಕ ಅವರ ಹೆಸರಿನಲ್ಲಿಯೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ವಿಚಾರ ಬಹಿರಂಗವಾಗಿದ್ದು, ಇದೊಂದು ವಿಚಿತ್ರ ಪ್ರಕರಣ ಎಂದು ಹೈಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ. ಅಲ್ಲದೆ ಅಕ್ರಮವಾಗಿ ಅರ್ಜಿ ಸಲ್ಲಿಸಿ, ನ್ಯಾಯಾಲಯದಿಂದ ತೀರ್ಪು ಪಡೆದುಕೊಳ್ಳಲಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಏನಿದು ವಿವಾದ…?
ಈ ವಿವಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿ ಗ್ರಾಮದ 4.21 ಎಕರೆ ಜಮೀನಿಗೆ ಸಂಬಂಧಿಸಿದ್ದಾಗಿದೆ. ಈ ಜಮೀನಿನ ಸ್ವಾಧೀನಾನುಭವ ಪತ್ರವನ್ನು (ಒ.ಸಿ) 1981ರಲ್ಲಿ ಸಿ. ನಿಂಗಮ್ಮ ಎಂಬುವರಿಗೆ ನೀಡಿ ಭೂ ನ್ಯಾಯಮಂಡಳಿ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಿ. ಮರಿಯಪ್ಪ ಎಂಬುವರ ಹೆಸರಿನಲ್ಲಿ, ಅವರ ಪವರ್ ಆಫ್ ಅಟರ್ನಿ ಹೊಂದಿರುವ ವ್ಯಕ್ತಿಯು 1993ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 2001ರಲ್ಲಿ ಪುರಸ್ಕರಿಸಿದ್ದ ಹೈಕೋರ್ಟ್, ಪ್ರಕರಣವನ್ನು ಮರುಪರಿಶೀಲನೆಗಾಗಿ ಭೂ ನ್ಯಾಯಮಂಡಳಿಗೆ ಹಿಂತಿರುಗಿಸಿತ್ತು. ಆದರೆ, ಅಲ್ಲಿಯೂ ಅರ್ಜಿದಾರರಿಗೆ ಹಿನ್ನಡೆಯಾಗಿತ್ತು.

ಆದ್ದರಿಂದ ಮರಿಯಪ್ಪ ಅವರ ವಾರಸುದಾರರು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ 1993ರಲ್ಲಿ ಅರ್ಜಿ ಸಲ್ಲಿಸುವ ವೇಳೆಗಾಗಲೇ ಮರಿಯಪ್ಪ ಮೃತಪಟ್ಟು ಐದು ವರ್ಷಗಳು ಕಳೆದಿದ್ದವು ಎಂಬ ವಿಚಾರ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯದ ಗಮನಕ್ಕೆ ಬಂದಿದ್ದು ಈ ಸಂಬಂಧ ಇದೀಗ ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.