03/10/2026

Law Guide Kannada

Online Guide

ಬ್ಯಾಂಕ್ ವಿಲೀನವಾದ್ರೂ ಮೂಲ ಬ್ಯಾಂಕ್ ಚೆಕ್ ಸಿಂಧುವೋ..? ಅಥವಾ ಅಸಿಂಧುವೋ..? ಮಹತ್ವದ ತೀರ್ಪು ಕೊಟ್ಟ ಹೈಕೋರ್ಟ್

ಬೆಂಗಳೂರು: ಬ್ಯಾಂಕ್ವೊಂದು ಮತ್ತೊಂದು ಬ್ಯಾಂಕ್ ನೊಂದಿಗೆ ವಿಲೀನ ಗೊಂಡರೇ ಮೂಲ ಬ್ಯಾಂಕ್ ಹೆಸರಿನಲ್ಲಿ ನೀಡಲಾದ ಚೆಕ್ ಅಸಿಂಧುವಾಗುತ್ತದೆಯೋ ಅಥವಾ ಇಲ್ಲವೋ ಎಂಬ ಗೊಂದಲಕ್ಕೆ ಚೆಕ್ ಬೌನ್ಸ್ ವೊಂದರ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದೆ.

ಬೆಂಗಳೂರಿನ ಗೌಡನಪಾಳ್ಯ ನಿವಾಸಿ ಭದ್ರಮ್ಮ ಎಂಬುವರು ತಮ್ಮ ವಿರುದ್ಧದ ದಾಖಲಾಗಿರುವ ಚೆಕ್ಬೌನ್ಸ್ ಪ್ರಕರಣ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಬ್ಯಾಂಕ್ವೊಂದು ಮತ್ತೊಂದು ಬ್ಯಾಂಕ್ ನೊಂದಿಗೆ ವಿಲೀನ ಗೊಂಡರೇ ಮೂಲ ಬ್ಯಾಂಕ್ ಹೆಸರಿನಲ್ಲಿ ನೀಡಲಾದ ಚೆಕ್ ಅಸಿಂಧುವಲ್ಲ ಹಾಗೂ ಚೆಕ್ ನೀಡಿದ ವ್ಯಕ್ತಿ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅರ್ಜಿದಾರ ಭದ್ರಮ್ಮ ಅವರು ಲೀಲಾವತಿ ವೆಂಕಟೇಶ್ ಎಂಬುವರಿಗೆ ನೀಡಿದ್ದ ವಿಜಯಾ ಬ್ಯಾಂಕ್ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಲೀಲಾವತಿ ಅವರು ಭದ್ರಮ್ಮಗೆ ನೋಟಿಸ್ ಜಾರಿ ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೀಲಾವತಿ ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನಂತರ ಭದ್ರಮ್ಮಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಭದ್ರಮ್ಮ ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ವಾದ ಮಂಡಿಸಿದ ಭದ್ರಮ್ಮ ಪರ ವಕೀಲರು, ವಿಜಯಾ ಖಾತೆಯ ಅರ್ಜಿದಾರರು ಬ್ಯಾಂಕ್ನಲ್ಲಿರುವ ಚೆಕ್ ನ್ನು ದೂರುದಾರರಿಗೆ ನೀಡಿರಲಿಲ್ಲ. ಆದರೆ, ಚೆಕ್ ಕಳೆದು ಹೋಗಿದ್ದು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಳೆದು ಹೋಗಿದ್ದ ಚೆಕ್ ಅನ್ನು ಪಡೆದುಕೊಂಡಿರುವ ದೂರುದಾರರು, ಅದನ್ನು ದುರುಪಯೋಗ ಪಡಿಸಿಕೊಂಡು, ಬ್ಯಾಂಕ್ ಗೆ ಹಾಕಿದ್ದಾರೆ. ಅಲ್ಲದೆ, ವಿಜಯಬ್ಯಾಂಕ್ 2019ರಲ್ಲಿ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಂಡಿದೆ. ಬ್ಯಾಂಕ್ ಸ್ವತಃ ಹಿಂಬರಹ ನೀಡಿದ್ದು, ಅಂತಹ ಬ್ಯಾಂಕ್ ಅಸ್ತಿತ್ವದಲ್ಲಿಲ್ಲ ಎಂಬುದಾಗಿ ತಿಳಿಸಿದೆ. ಹೀಗಾಗಿ ಅರ್ಜಿದಾರರ ಯಾವುದೇ ಅಪರಾಧ ಕೃತ್ಯವೆಸಗಿಲ್ಲ ಆದ್ದರಿಂದ ಪ್ರಕರಣ ರದ್ದುಮಾಡವಂತೆ ಮನವಿ ಮಾಡಿದ್ದರು. ಆದರೆ ಹೈಕೋರ್ಟ್ ನ್ಯಾಯಪೀಠವು ಅರ್ಜಿ ವಜಾಗೊಳಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.