16/08/2026

Law Guide Kannada

Online Guide

ಲಂಚ ಪ್ರಕರಣ: ದೂರುದಾರರ ‘ಟ್ರ್ಯಾಪ್ ಹಣ’ ಶೀಘ್ರ ಹಿಂದಿರುಗಿಸಬೇಕು – ಹೈಕೋರ್ಟ್ ಸೂಚನೆ

ಬೆಂಗಳೂರು: ಲಂಚ ಪ್ರಕರಣಗಳಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುವ ಆರೋಪಿಯಿಂದ ವಶಪಡಿಸಿಕೊಂಡ ‘ಟ್ರ್ಯಾಪ್ ಹಣ’ವನ್ನು ವಿಚಾರಣಾ ನ್ಯಾಯಾಲಯದ ತೀರ್ಪು ನೀಡುವವರೆಗೆ ಕೋರ್ಟ್ ವಶದಲ್ಲೇ ಉಳಿಸಿಕೊಳ್ಳಬಾರದು ಆ ಹಣವನ್ನು ಸರಕಾರ ಬೊಕ್ಕಸದಿಂದ ದೂರುದಾರನಿಗೆ ಆದಷ್ಟು ಶೀಘ್ರ ಹಿಂದಿರುಗಿಸಬೇಕು ಎಂದು ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

ಲಂಚ ಪ್ರಕರಣ ಸಂಬಂಧ ನೈಜ ದೂರುದಾರರಿಂದ ವಶಪಡಿಸಿಕೊಂಡ 80 ಸಾವಿರ ರೂ. ‘ಟ್ರ್ಯಾಪ್ ಹಣ’ವನ್ನು ಬಡ್ಡಿ ಸಹಿತ ಬಿಡುಗಡೆ ಮಾಡಲು ಸಿಬಿಐಗೆ ನಿರ್ದೇಶಿಸಬೇಕೆಂದು ಕೋರಿ ಬಳ್ಳಾರಿಯ ಗುತ್ತಿಗೆದಾರ ಜಿ.ಈಶ್ವರಯ್ಯ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ”ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ (BNSS) ಕಲಂ 497 ಮತ್ತು 503ರಡಿ ದೂರುದಾರರು ಸೂಕ್ತ ಅರ್ಜಿ ಸಲ್ಲಿಸುವ ಮೂಲಕ ತಾನು ವ್ಯವಸ್ಥೆಗೊಳಿಸಿದ್ದ ‘ಟ್ರ್ಯಾಪ್ ಹಣ’ಕ್ಕೆ ಸಮಾನವಾದ ಮೊತ್ತ ಬಿಡುಗಡೆ ಮಾಡುವಂತೆ ಕೋರಬಹುದಾಗಿದೆ. ಅಂತಹ ಅರ್ಜಿ ಸಲ್ಲಿಸಿದಾಗ, ವಿಶೇಷ ನ್ಯಾಯಾಲಯ ತೀರ್ಪಿನಲ್ಲಿ ನೀಡಲಾಗಿರುವ ಅವಲೋಕನಗಳನ್ನು ಗಮನದಲ್ಲಿರಿಸಿಕೊಂಡು ಪರಿಶೀಲಿಸಿ ವಿಲೇವಾರಿ ಮಾಡಬೇಕು,” ಎಂದು ನಿರ್ದೇಶಿಸಿದೆ. ಹಾಲಿ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ನಾಲ್ಕು ವಾರಗಳಲ್ಲಿ ಮುಕ್ತಾಯಗೊಳಿಸಬೇಕು ಎಂದೂ ನ್ಯಾಯಾಲಯ ಗಡುವು ವಿಧಿಸಿದೆ.

‘ಶೋಧ ಮತ್ತು ಜಪ್ತಿ ಪ್ರಕ್ರಿಯೆಗಳನ್ವಯ ತನಿಖೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳ ಸ್ವಾಧೀನ, ಸಂರಕ್ಷಣೆ ಮತ್ತು ಅಂತಿಮ ಬಿಡುಗಡೆಗೆ ಸಂಬಂಧಿಸಿದ ತತ್ವಗಳನ್ನು ಸುಪ್ರೀಂಕೋರ್ಟ್ ಮತ್ತು ಒಡಿಶಾ ಹೈಕೋರ್ಟ್ ಅಧಿಕೃತವಾಗಿ ವಿವರಿಸಿವೆ,” ಎಂದು ಉಲ್ಲೇಖಿಸಿದ ನ್ಯಾಯಪೀಠ, ”ಪ್ರಾಸಿಕ್ಯೂಷನ್ಗೆ ನೆರವಾದ ಕಾರಣಕ್ಕಾಗಿ ದೂರುದಾರರು ತಮ್ಮ ಆಸ್ತಿ ಮರಳಿ ಪಡೆಯಲು ವರ್ಷಗಟ್ಟಲೆ ಕಾಯುವಂತೆ ಒತ್ತಾಯಿಸುವುದು ಶಿಕ್ಷೆಯನ್ನಾಗಿ ಪರಿವರ್ತಿಸಿದಂತಾಗುತ್ತದೆ,” ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ
ಈಶ್ವರಯ್ಯ ಎಂಬುವವರು ಜಿಎಸ್ಟಿ ಬಾಕಿ ಚುಕ್ತಾ ಸಂಬಂಧ ಬಳ್ಳಾರಿಯ ಕೇಂದ್ರ ತೆರಿಗೆ (GST) ವಿಭಾಗದಲ್ಲಿಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೆ. ಮಧುಸೂದನ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮಧುಸೂದನ ಅವರು ಈಶ್ವರಯ್ಯ ಅವರಿಂದ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅದನ್ನು 80 ಸಾವಿರಕ್ಕೆ ಇಳಿಸಿದ್ದರು. ಈ ಸಂಬಂಧ ಈಶ್ವರಯ್ಯ 2022ರ ಜೂನ್ 5ರಂದು ದೂರು ನೀಡಿದ್ದರು. ಈ ಮಧ್ಯೆ ಲಂಚದ ಹಣ ಪಡೆಯುತ್ತಿದ್ದಾಗ ಮಧುಸೂದನ ರೆಡ್ ಹ್ಯಾಂಡ್ ಆಗಿ ಸಿಬಿಐ ಬಲೆಗೆ ಸಿಕ್ಕಿಬಿದ್ದಿದ್ದರು

ಪ್ರಕರಣ ವಿಚಾರಣಾ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದೇ ಇರುವ ಕಾರಣಕ್ಕೆ ಈಶ್ವರಯ್ಯ, ”ನಾನು ಕಷ್ಟಪಟ್ಟು ದುಡಿದು ಸಂಪಾದಿಸಿದ 80 ಸಾವಿರ ರೂ. ನನಗೆ ಇನ್ನೂ ಮರಳಿ ಕೈಸೇರಿಲ್ಲ. ನ್ಯಾಯಾಲಯದ ವಶದಲ್ಲಿಯೇ ಇದೆ. ಅಂತೆಯೇ, ಜಪ್ತಿ ಮಾಡಲಾದ ಹಣ ಬಿಡುಗಡೆ ಕುರಿತು ಎಸ್ಒಪಿ ರೂಪಿಸಬೇಕು,” ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.