SIR : ತಾರ್ಕಿಕ ವ್ಯತ್ಯಾಸವೇನು ಸ್ಪಷ್ಟಪಡಿಸಿ: ಚು.ಆಯೋಗಕ್ಕೆ ಸುಪ್ರೀಂ ಸೂಚನೆ
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಆಗುತ್ತಿರುವ (ಎಸ್ಐಆರ್) ‘ತಾರ್ಕಿಕ ವ್ಯತ್ಯಾಸ’ದ ಬಗ್ಗೆ ಸ್ಪಷ್ಟಪಡಿಸಿ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ದೆಹಲಿಯಲ್ಲಿನ ಎಸ್ಐಆರ್ ಪ್ರಕ್ರಿಯೆಗಳ ಕೆಲ ಅಂಶಗಳನ್ನು ಪ್ರಶ್ನಿಸಿ ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೋಹಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ಜಾಯ್ಮಾಲ್ಯಾ ಬಾಗ್ನಿ, ಮತ್ತು ವಿ. ಮೋಹನಾ ಅವರ ಪೀಠವು, ಸಂಬಂಧಿಸಿದವರಿಗೆ ನೋಟಿಸ್ ಜಾರಿಗೊಳಿಸಿದೆ.
ದೆಹಲಿಯಲ್ಲಿ ನಡೆಸುತ್ತಿರುವ ಎಸ್ಐಆರ್ ನಲ್ಲಿ ತಾರ್ಕಿಕ ವ್ಯತ್ಯಾಸದ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಅಂತಹ ವ್ಯತ್ಯಾಸವನ್ನು ಸರಿಪಡಿಸಲು ಅಗತ್ಯವಿರುವ ದಾಖಲೆಗಳ ಕುರಿತು ನಿರ್ದಿಷ್ಟ ಮಾರ್ಗದರ್ಶನವನ್ನೂ ಆಯೋಗ ನೀಡಬೇಕು ಎಂದು ಪೀಠ ಹೇಳಿದೆ.
ಮತದಾರರಿಗೆ ವೈಯಕ್ತಿಕವಾಗಿ ಹಾಜರಾಗುವಂತೆ ಒತ್ತಾಯಿಸುವ ಬದಲು ವಾಟ್ಸ್ ಆ್ಯಪ್ ಅಥವಾ ಇಮೇಲ್ ಮೂಲಕ ದಾಖಲೆಗಳನ್ನು ಸಲ್ಲಿಸುವ ಆಯ್ಕೆಗಳನ್ನು ನೀಡಬೇಕು ಎಂದೂ ಪೀಠ ಸೂಚಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ನೇಹಾ ರಾಠಿ, ವ್ಯಕ್ತಿಯ ಮತದಾನದ ಅರ್ಹತೆಗೆ ಯಾವುದೇ ತಾರ್ಕಿಕ ಸಂಬಂಧವಿಲ್ಲದ ಕಾರಣಗಳಿಗೂ ನೋಟಿಸ್ ನೀಡಲಾಗುತ್ತಿದೆ. ಪೋಷಕರೊಂದಿಗೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂತರ, ಅಜ್ಜ-ಅಜ್ಜಿಯರೊಂದಿಗೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಂತರ ಅಥವಾ ಒಡಹುಟ್ಟಿದವರ ನಡುವೆ ಒಂಬತ್ತು ತಿಂಗಳೊಳಗಿನ ಅಂತರದಂತಹ ತಾರ್ಕಿಕ ವ್ಯತ್ಯಾಸಗಳಿಗೆ ನೋಟಿಸ್ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅಲ್ಲದೆ, ಆಪಾದಿತ ವ್ಯತ್ಯಾಸಗಳ ನಿಖರ ಸ್ವರೂಪವನ್ನು ನೋಟಿಸ್ನಲ್ಲಿ ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಅವುಗಳನ್ನು ಹೇಗೆ ಸರಿಪಡಿಸಬಹುದು ಎಂಬುದರ ಮಾರ್ಗದರ್ಶನವೂ ಅಲ್ಲಿಲ್ಲ. ನಿವಾಸಗಳನ್ನು ಬದಲಿಸಿದ ಮತದಾರರಿಗೆ ಅರ್ಜಿ ನಮೂನೆ-6 ಅನ್ನು ಭರ್ತಿ ಮಾಡಲು ಹೇಳಲಾಗುತ್ತಿದೆ, ಆದರೆ ಅದು ಹೊಸ ಮಾತದಾರರಿಗೆ ಮಾತ್ರ ಅನ್ವಯ ಎಂದು ವಾದ ಮಂಡಿಸಿದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
