07/03/2026

Law Guide Kannada

Online Guide

ನಿರ್ದಿಷ್ಟವಾಗಿ ಉಲ್ಲೇಖಿಸದ ಹೊರತು ಕೋರ್ಟ್ ತೀರ್ಪುಗಳು ಸದಾ ಪೂರ್ವಾನ್ವಯ- ಸುಪ್ರೀಂ ಕೋರ್ಟ್

ನವದೆಹಲಿ: ಸ್ಪಷ್ಟವಾಗಿ ಬೇರೆ ರೀತಿಯಲ್ಲಿ ಉಲ್ಲೇಖಿಸದಿದ್ದಾಗ ತೀರ್ಪುಗಳು ಪೂರ್ವಾನ್ವಯವಾಗುತ್ತವೆ ಎಂದು ಭಾವಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಅಹ್ವಾನುದ್ದೀನ್ ಅಮಾನುಲ್ಲ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ನ್ಯಾಯಾಲಯದ ತೀರ್ಪುಗಳು ಯಾವತ್ತೂ ಪೂರ್ವಾನ್ವಯವಾಗಿರುತ್ತವೆ.

ಭವಿಷ್ಯಕ್ಕೆ ಮಾತ್ರ ಅನ್ವಯ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದರೆ ಮಾತ್ರ ಆ ತೀರ್ಪುಗಳು ಇದಕ್ಕಿಂತ ಹೊರತಾಗಿರುತ್ತದೆ. ಇಲ್ಲದೇ ಹೋದರೆ, ನ್ಯಾಯಾಲಯಗಳು ಹೊರಡಿಸುವ ಎಲ್ಲ ತೀರ್ಪುಗಳು ಯಾವತ್ತೂ ಪೂರ್ವಾನ್ವಯವಾಗಿಯೇ ಇರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಶಾಸಕಾಂಗ ಜಾರಿಗೆ ತರುವ ಕಾಯಿದೆಗಳು ಸಾಮಾನ್ಯವಾಗಿ ಭವಿಷ್ಯವರ್ತಿಯಾಗಿ ಅನ್ವಯವಾಗುತ್ತವೆಯಾದರೂ ತೀರ್ಪೊಂದು ಭವಿಷ್ಯಕ್ಕೆ ಮಾತ್ರ ಅನ್ವಯ ಎಂದು ನ್ಯಾಯಾಂಗ ವ್ಯಾಖ್ಯಾನಗಳು ಮತ್ತು ಸಾಂವಿಧಾನಿಕ ನ್ಯಾಯಾಲಯದ ತೀರ್ಪುಗಳು ಹೇಳದೇ ಇದ್ದಾಗ ಆ ತೀರ್ಪು ನಿರ್ದಿಷ್ಟವಾಗಿ ಭವಿಷ್ಯವರ್ತಿಯಾಗುತ್ತದೆ ಎಂದು ಹೇಳಲಾಗದು ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.

ಪ್ರಿಯಾಂಕಾ ಶ್ರೀವಾಸ್ತವ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೇಳಿರುವಂತೆ ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 156(3) ರ ಅಡಿಯಲ್ಲಿ ದೂರುಗಳೊಂದಿಗೆ ಅಫಿಡವಿಟ್ ಸಲ್ಲಿಸುವ ಅವಶ್ಯಕತೆ ಭವಿಷ್ಯವರ್ತಿಯಾಗಿ ಮಾತ್ರ ಅನ್ವಯಿಸುತ್ತದೆ ವಿನಾ ತೀರ್ಪಿಗೂ ಮೊದಲು ಸಲ್ಲಿಸಲಾದ ದೂರುಗಳಿಗೆ ಅಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.