ನನ್ನನ್ನು ಬೆದರಿಸಲು ನನ್ನ ಕುಟುಂಬದ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು – ನಿವೃತ್ತ CGI ಎನ್.ವಿ ರಮಣ
ಅಮರಾವತಿ: ನನ್ನ ಮೇಲೆ ಒತ್ತಡ ತರಲು ನನ್ನನ್ನು ಬೆದರಿಸಲು ನನ್ನ ಕುಟುಂಬಸ್ಥರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿದ ನ್ಯಾಯಾಂಗ ಸದಸ್ಯರು ಸಹ ಒತ್ತಡ ಮತ್ತು ಕಿರುಕುಳವನ್ನು ಎದುರಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಆತಂಕ ವ್ಯಕ್ತಪಡಿಸಿದರು.
ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿದ್ದ ಅಮರಾವತಿಯನ್ನು ರದ್ದುಗೊಳಿಸಿದ್ದಕ್ಕಾಗಿ ಮತ್ತು ವಿಶಾಖಪಟ್ಟಣವನ್ನು ಆಡಳಿತಾತ್ಮಕ ರಾಜಧಾನಿ, ಅಮರಾವತಿ ಶಾಸಕಾಂಗದ ರಾಜಧಾನಿ, ಕರ್ನೂಲ್ ಅನ್ನು ನ್ಯಾಯಾಂಗದ ರಾಜಧಾನಿಯಾಗಿ ಮಾಡುವ ‘ಮೂರು ರಾಜಧಾನಿ’ಗಳ ಸೂತ್ರವನ್ನು ಪ್ರತಿಪಾದಿಸಿದ್ದಕ್ಕಾಗಿ ಅಂದಿನ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದನ್ನು ಎನ್.ವಿ. ರಮಣ ಉಲ್ಲೇಖಿಸಿದರು.
ವಿಐಟಿ-ಎಪಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ಎನ್.ವಿ. ರಮಣ ಅವರು, ‘ನನ್ನ ಮೇಲೆ ಒತ್ತಡ ತರುವ ಉದ್ದೇಶದಿಂದ ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ನನ್ನ ಬೆದರಿಸುವ ಉದ್ದೇಶದಿಂದಲೇ ನನ್ನ ಕುಟುಂಬದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರ ಬಗ್ಗೆ ನೀವೆಲ್ಲರೂ ಬಲ್ಲಿರಿ. ಆದರೆ, ನಾನು ಒಬ್ಬಂಟಿಯಾಗಿರಲಿಲ್ಲ. ಆ ಕಠಿಣ ರೈತರ ಬಗ್ಗೆ ಸಹಾನುಭೂತಿ ಹೊಂದಿದ್ದ ಎಲ್ಲರೂ ಈ ಬೆದರಿಕೆ ಹಾಗೂ ಬಲವಂತವನ್ನು ಎದುರಿಸಿದರು’ ಎಂದು ಹೇಳಿದರು.
‘ಸಾಂವಿಧಾನಿಕ ತತ್ವಗಳನ್ನು ಪಾಲಿಸಿದ ನ್ಯಾಯಾಂಗ ಸದಸ್ಯರ ಮೇಲೆ ಒತ್ತಡ ಹೇರಲು ಕಿರುಕುಳ ನೀಡಲಾಗಿತ್ತು. ಯಾವುದೇ ಪಾತ್ರವಿಲ್ಲದ ನ್ಯಾಯಾಧೀಶರ ಕುಟುಂಬಗಳು ರಾಜಕೀಯ ಪಕ್ಷಗಳ ಪಿತೂರಿಗೆ ಬಲಿಯಾದವು. ಸ್ವಾತಂತ್ರ್ಯ ಹೋರಾಟದ ನಂತರ ದಕ್ಷಿಣ ಭಾರತದಲ್ಲಿ ನಡೆದ ಸುದೀರ್ಘ ಹೋರಾಟವಿದು. ಸರ್ಕಾರದಿಂದ ಒತ್ತಡ ಬಂದರೂ ಹಿಂದೆ ಸರಿಯದ ಅಮರಾವತಿ ರೈತರ ಧೈರ್ಯಕ್ಕೆ ಸೆಲ್ಯೂಟ್. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟ ಅವರಿಗೆ ಕೃತಜ್ಞತೆಗಳು’ ಎಂದು ಎನ್ ವಿ ರಮಣ ಮೆಚ್ಚುಗೆ ವ್ಯಕ್ತಪಡಿಸಿದರು.
‘ಸರ್ಕಾರಗಳು ಬದಲಾಗಬಹುದು. ಆದರೆ, ನ್ಯಾಯಾಲಯಗಳು ಹಾಗೂ ಕಾನೂನಿನ ನಿಯಮಗಳು ಸ್ಥಿರತೆಯ ಆಧಾರಸ್ತಂಭಗಳಾಗಿ ಉಳಿಯುತ್ತವೆ. ಜನರು ಅದರಲ್ಲಿ ನಂಬಿಕೆ ಇರಿಸಿದಾಗ ಹಾಗೂ ಅನುಕೂಲಕ್ಕಾಗಿ ತಮ್ಮ ಸಮಗ್ರತೆಯನ್ನು ತ್ಯಜಿಸಲು ನಿರಾಕರಿಸಿದಾಗ ಮಾತ್ರ ಕಾನೂನಿನ ನಿಯಮಗಳು ಉಳಿಯುತ್ತವೆ’ ಎಂದು ಹೇಳಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
