ಮೃತಗಂಡನ ಕೆಲಸ ಪಡೆದು ತವರು ಸೇರಿದ ಸೊಸೆ: ಮಾವನಿಗೆ ಎದುರಾಯ್ತು ಆರ್ಥಿಕ ಸಂಕಷ್ಟ: ನ್ಯಾಯಯುತ ತೀರ್ಪು ನೀಡಿದ ಹೈಕೋರ್ಟ್
ಜೋಧ್ ಪುರ: ಸರ್ಕಾರಿ ಉದ್ಯೋಗದಲ್ಲಿದ್ದ ಪತಿಯ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದ ಮಹಿಳೆಯೊಬ್ಬರು ನಂತರ ತಮ್ಮ ಮಾವನಿಗೆ ಆರ್ಥಿಕವಾಗಿ ಸಹಾಯ ಮಾಡದೇ ತವರು ಮನೆ ಸೇರಿದ್ದು ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದ ಮಾವನಿಗೆ ಪ್ರತಿ ತಿಂಗಳು 20 ಸಾವಿರ ರೂ. ಮಾಸಿಕ ಪಾಲು ನೀಡುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಖೇರ್ಲಿ ಪ್ರದೇಶದ ಭಗವಾನ್ ಸಿಂಗ್ ಸೈನಿ ಅವರ ಮಗ ರಾಜೇಶ್ ಕುಮಾರ್ ಅಜ್ಮೀರ್ ಡಿಸ್ಕಾಮ್ನಲ್ಲಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. 2015ರ ಸೆಪ್ಟೆಂಬರ್ 15ರಂದು ಕರ್ತವ್ಯದ ಸಮಯದಲ್ಲಿ ರಾಜೇಶ್ ಕುಮಾರ್ ನಿಧನರಾದರು. ಮಗನ ಸಾವಿನ ನಂತರ ಭಗವಾನ್ ಸಿಂಗ್ ಅವರಿಗೆ ಅನುಕಂಪದ ನೇಮಕಾತಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರು ತಮ್ಮ ಔದಾರ್ಯದಿಂದ ಈ ಅವಕಾಶವನ್ನು ಸೊಸೆ ಶಶಿ ಕುಮಾರಿ ಅವರಿಗೆ ಬಿಟ್ಟುಕೊಟ್ಟರು. ಇದರಿಂದ ಶಶಿ ಕುಮಾರಿ 2016ರ ಮಾರ್ಚ್ 11ರಂದು ಎಲ್ಡಿಸಿ ಹುದ್ದೆಗೆ ನೇಮಕಗೊಂಡರು.
ಶಶಿಕುಮಾರಿ ನೇಮಕಾತಿಯ ವೇಳೆ, ಅಫಿಡವಿಟ್ ಸಲ್ಲಿಸಿದ್ದರು. ಇದರಲ್ಲಿ ಮೃತ ಪತಿಯ ಪೋಷಕರೊಂದಿಗೆ ವಾಸಿಸುವುದು. ಅವರ ಕಲ್ಯಾಣಕ್ಕೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದು. ಮರುಮದುವೆಯಾಗದಿರುವುದು. ಹೀಗೆ ಮೂರು ಪ್ರಮುಖ ಭರವಸೆಗಳನ್ನು ನೀಡಿದ್ದರು. ಆದರೆ ನಂತರ ಶಶಿ ಕುಮಾರಿ ಈ ಭರವಸೆಗಳನ್ನು ಉಲ್ಲಂಘಿಸಿ, ಪತಿಯ ಸಾವಿನ 18 ದಿನಗಳಲ್ಲೇ ತವರು ಮನೆಗೆ ಹೋಗಿ ಸೇರಿದ್ದಾರೆ . ಇದಲ್ಲದೇ ಅವರು ಮರುಮದುವೆಯನ್ನೂ ಆಗಿದ್ದಾರೆ. ಜೊತೆಗೆ ಮಾವಂದಿರಿಗೆ ಯಾವುದೇ ಆರ್ಥಿಕ ಸಹಾಯ ನೀಡದೇ ಇದ್ದರು.
ಈ ಸಂಬಂಧ ಖೇರ್ಲಿ ಖತುಮಾರ್ ಪುರಸಭೆಯ ಅಧ್ಯಕ್ಷರು ನಡೆಸಿದ ತನಿಖೆಯಲ್ಲಿ ಶಶಿ ಕುಮಾರಿ ಅವರು ತಮ್ಮ ಅತ್ತೆಯ ಮನೆಯನ್ನು ತೊರೆದು ತವರು ಮನೆಯಲ್ಲಿ ವಾಸಿಸುತ್ತಿರುವುದು ದೃಢಪಟ್ಟಿತು. ಭಗವಾನ್ ಸಿಂಗ್ ಅವರು ವಯೋವೃದ್ಧರಾಗಿದ್ದು, ಯಾವುದೇ ಆದಾಯ ಮೂಲವಿಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕುಪಿತರಾದ ಭಗವಾನ್ ಸಿಂಗ್ 2017ರ ಜೂನ್ 3ರಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಗೆ ದೂರು ಸಲ್ಲಿಸಿದರು. ಡಿಸೆಂಬರ್ 7, 2017ರಂದು ನೋಂದಾಯಿತ ನೋಟಿಸ್ ಕಳುಹಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಕಾರಣ 2018ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಯಿತು. ಮೊದಲು ಸಂಬಳದ 50 ಪ್ರತಿಶತವನ್ನು ಕೋರಲಾಗಿದ್ದರೂ ನಂತರ ಅದನ್ನು 20,000 ರೂಪಾಯಿಗಳಿಗೆ ಮಿತಿಗೊಳಿಸಲಾಯಿತು.
ನ್ಯಾಯಮೂರ್ತಿ ಫರ್ಜಾಂದ್ ಅಲಿ ಅವರ ನೇತೃತ್ವದ ಪೀಠವು ಅನುಕಂಪ ನೇಮಕಾತಿಯು ಕಲ್ಯಾಣ ಕ್ರಮವೇ ಹೊರತು ಉದ್ಯೋಗದ ವಿಧಾನವಲ್ಲ ಎಂದು ಸ್ಪಷ್ಟಪಡಿಸಿತು. ಇದು ಮೃತ ಉದ್ಯೋಗಿಯ ಕುಟುಂಬದ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಮಾಡುವ ಕೃಪೆಯ ಕಾರ್ಯವಾಗಿದೆ. ಶಶಿ ಕುಮಾರಿ ಅವರ ನೇಮಕಾತಿಯು ಅವರ ವೈಯಕ್ತಿಕ ಅರ್ಹತೆಯ ಆಧಾರದಲ್ಲ, ಬದಲಿಗೆ ಮೃತ ಪತಿಯ ಕುಟುಂಬದ ಪ್ರತಿನಿಧಿಯಾಗಿ ಆಗಿದೆ. ಆದ್ದರಿಂದ ಉಳಿದ ಅವಲಂಬಿತರಾದ ಮಾವಂದಿರ ಹಿತಾಸಕ್ತಿಯನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ನ್ಯಾಯಾಲಯ ತಿಳಿಸಿತು.
ಶಶಿ ಕುಮಾರಿ ಅವರು ಪತಿಯ ಮರಣದ ನಂತರ ಭವಿಷ್ಯ ನಿಧಿ ಮತ್ತು ಪರಿಹಾರದ ಸುಮಾರು 70 ಪ್ರತಿಶತವನ್ನು ಪಡೆದಿದ್ದರು. ಆದರೂ ಮಾವಂದಿರನ್ನು ತ್ಯಜಿಸಿ ಮರುಮದುವೆಯಾಗಿದ್ದಾರೆ. ಇದರಿಂದ ಅವರ ನಿರ್ವಹಣೆಯ ಕಾನೂನುಬದ್ಧ ಕರ್ತವ್ಯ ನಿಂತುಹೋಗಿದೆ ಎಂದು ಅವರ ವಕೀಲರು ವಾದಿಸಿದರು. ಆದರೆ ನ್ಯಾಯಾಲಯ ಈ ವಾದವನ್ನು ಪರಿಗಣಿಸಿ, ಭಗವಾನ್ ಸಿಂಗ್ ಅವರ ವಯಸ್ಸು, ಆರೋಗ್ಯ ಸ್ಥಿತಿ, ಆದಾಯ ಮೂಲಗಳ ಕೊರತೆ ಮತ್ತು ಅಫಿಡವಿಟ್ನ ನೈತಿಕ ಬಾಧ್ಯತೆಯನ್ನು ಆಧರಿಸಿ 20,000 ರೂಪಾಯಿಗಳ ಮಾಸಿಕ ಪಾಲು ನೀಡುವಂತೆ ಆದೇಶಿಸಿತು.
ನ್ಯಾಯಪೀಠವು ಸೊಸೆಯ ವೇತನದಿಂದ ಪ್ರತಿ ತಿಂಗಳು 20,000 ರೂಪಾಯಿಗಳನ್ನು ಕಡಿತಗೊಳಿಸಿ ಮಾವನ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ನಿರ್ದೇಶಿಸಿದೆ. ಈ ಆದೇಶವು ನವೆಂಬರ್ 1, 2025 ರಿಂದ ಜಾರಿಗೆ ಬರುತ್ತದೆ ಮತ್ತು ಮಾವ ಬದುಕಿರುವವರೆಗೂ ಮುಂದುವರಿಯುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
