ಪ್ರಾಪ್ತ ವಯಸ್ಕ ಮಗಳ ಶಿಕ್ಷಣದ ವೆಚ್ಚಕ್ಕೂ ಪರಿಹಾರ: ಇದು ತಂದೆಯ ಕಾನೂನುಬದ್ಧ ಕರ್ತವ್ಯ – ಹೈಕೋರ್ಟ್
ಬೆಂಗಳೂರು: ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಪುತ್ರಿಯ ಶಿಕ್ಷಣ ವೆಚ್ಚಕ್ಕೂ ಹಣಕಾಸಿನ ಪರಿಹಾರ ದೊರೆಯುತ್ತದೆ. ಪುತ್ರಿಯು ಪದವಿ ಶಿಕ್ಷಣ ಪಡೆಯುತ್ತಿರಲಿ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರಲಿ. ಆಕೆಯ ಶಿಕ್ಷಣ ವೆಚ್ಚವನ್ನು ಭರಿಸುವುದು ತಂದೆಯ ಕಾನೂನುಬದ್ಧ ಕರ್ತವ್ಯವಾಗಿದೆ.” ಎಂದು ಹೈಕೋರ್ಟ್ ತೀರ್ಪು ನೀಡಿದೆ.
ತಂದೆಯು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು (Criminal Revision Petition) ವಜಾಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ. ತನ್ನ ಪುತ್ರಿಯ ಎಂ.ಡಿ. ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಮೊದಲ ವರ್ಷದ ಶುಲ್ಕ ಹಾಗೂ ಸಂಬಂಧಿತ ಶಿಕ್ಷಣ ವೆಚ್ಚಕ್ಕಾಗಿ ₹16 ಲಕ್ಷ ಪಾವತಿಸಬೇಕು ಎಂಬ ವಿಚಾರಣಾ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಾಲಯದ ಆದೇಶಗಳನ್ನು ಎತ್ತಿಹಿಡಿದಿದೆ.
ಪುತ್ರಿ ಪ್ರಾಪ್ತವಯಸ್ಕಳಾದಳು ಎಂಬ ಕಾರಣಕ್ಕೆ ತಂದೆ ಶಿಕ್ಷಣ ವೆಚ್ಚ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಗೃಹ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, (Domestic Voilence Act) 2005ರ ಸೆಕ್ಷನ್ 20ರಡಿ ನೀಡಬಹುದಾದ ಹಣಕಾಸಿನ ಪರಿಹಾರ (Monetary Relief)ವು ಪುತ್ರಿಯ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದ ವೆಚ್ಚವನ್ನೂ ಒಳಗೊಂಡಿರುತ್ತದೆ. ಪುತ್ರಿ ಪ್ರಾಪ್ತವಯಸ್ಕಳಾಗಿದ್ದಾಳೆ ಎಂಬ ಕಾರಣಕ್ಕೆ ತಂದೆಯು ಆಕೆಯ ಶಿಕ್ಷಣ ವೆಚ್ಚವನ್ನು ಭರಿಸಲು ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ.
ಪ್ರಕರಣದ ವಿವರ
ಪುತ್ರಿಯು ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20(d) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತನ್ನ ಎಂ.ಡಿ. (ಡರ್ಮಟಾಲಜಿ) ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಮೊದಲ ವರ್ಷದ ಶುಲ್ಕ ಮತ್ತು ಇತರ ಶಿಕ್ಷಣ ವೆಚ್ಚಗಳಿಗಾಗಿ ₹16 ಲಕ್ಷ ನೀಡುವಂತೆ ಮನವಿ ಮಾಡಿದ್ದರು.
ಆಕೆ NEET ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ತಂದೆ, ಪುತ್ರಿಯ MBBS ಶಿಕ್ಷಣವನ್ನು ಈಗಾಗಲೇ ತಾನೇ ಪೂರ್ಣಗೊಳಿಸಿದ್ದೇನೆ. ಆಕೆ ಈಗ ಪ್ರಾಪ್ತವಯಸ್ಕಳಾಗಿದ್ದಾಳೆ, ಸ್ನಾತಕೋತ್ತರ ಶಿಕ್ಷಣದ ವೇಳೆ ಸೈಪೆಂಡ್ ಪಡೆಯುತ್ತಿದ್ದಾಳೆ. ಆದ್ದರಿಂದ ಗೃಹ ಹಿಂಸಾಚಾರ ಕಾಯ್ದೆಯಡಿ ಇಂತಹ ಪರಿಹಾರವನ್ನು ಕೇಳಲು ಸಾಧ್ಯವಿಲ್ಲ. ಅಗತ್ಯವಿದ್ದರೆ ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು ಎಂದು ವಾದ ಮಂಡಿಸಿದ್ದರು.
ಈ ವೇಳೆ ನ್ಯಾಯಪೀಠವು “ಅವಿವಾಹಿತ ಪ್ರಾಪ್ತವಯಸ್ಕ ಪುತ್ರಿಯು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಹಣಕಾಸಿನ ಪರಿಹಾರವನ್ನು ಕೇಳಬಹುದೇ?” ಎಂಬ ಪ್ರಶ್ನೆಯನ್ನು ವಿವಾದಾಂಶವನ್ನಾಗಿ ಪರಿಗಣಿಸಿತು.
ಪುತ್ರಿಯು MBBS ಪೂರ್ಣಗೊಳಿಸಿ, ಅಖಿಲ ಭಾರತ ಶ್ರೇಯಾಂಕ ಪಡೆದು, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ಹಾಗೂ ಗಣನೀಯ ಶುಲ್ಕವನ್ನು ಪಾವತಿಸಿರುವ ದಾಖಲೆಗಳನ್ನು ನ್ಯಾಯಾಲಯ ಗಮನಿಸಿತು.
“ಪುತ್ರಿಯು ಸ್ವಂತ ಆದಾಯ ಹೊಂದಿಲ್ಲ. ಆಕೆ ನಿರಂತರವಾಗಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಳೆ. ಈ ಸಂಗತಿಯನ್ನು ನ್ಯಾಯಾಲಯ ಪರಿಗಣಿಸಲೇಬೇಕು.” ಎಂದು ಹೇಳಿತು.
“ಪುತ್ರಿಯು ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು” ಎಂಬ ತಂದೆಯ ವಾದವನ್ನು ಹೈಕೋರ್ಟ್ ನ್ಯಾಯಪೀಠವು ತಿರಸ್ಕರಿಸಿತು.
ತಂದೆಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿದ ನ್ಯಾಯಾಲಯ, ಅವರು ವ್ಯವಹಾರ ನಡೆಸುತ್ತಿದ್ದು. ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಸಾಮರ್ಥ್ಯ ಹೊಂದಿದ್ದು, ಸಾಲ ಪಡೆಯುವ ಮತ್ತು ಮರುಪಾವತಿಸುವ ಆರ್ಥಿಕ ಶಕ್ತಿ ಹೊಂದಿದ್ದಾರೆ. ಆದ್ದರಿಂದ, “ಪುತ್ರಿಯು ಪ್ರಾಪ್ತವಯಸ್ಕಳಾದ ನಂತರ ತಂದೆಗೆ ಶಿಕ್ಷಣ ವೆಚ್ಚ ಭರಿಸುವ ಜವಾಬ್ದಾರಿ ಇಲ್ಲ ಎಂಬ ವಾದದಲ್ಲಿ ಯಾವುದೇ ಬಲವಿಲ್ಲ.” ಎಂದು ನ್ಯಾಯಾಲಯ ತೀರ್ಮಾನಿಸಿತು.
ತಂದೆಯ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ , ತಂದೆ ಪುತ್ರಿಯ ಎಂ.ಡಿ. ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣದ ವೆಚ್ಚಕ್ಕಾಗಿ ₹16 ಲಕ್ಷ ಪಾವತಿಸಬೇಕು ಎಂಬ ಕೆಳಹಂತದ ನ್ಯಾಯಾಲಯಗಳ ಅದೇಶವನ್ನು ಎತ್ತಿಹಿಡಿದಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
