23/04/2026

Law Guide Kannada

Online Guide

ಪತ್ನಿಯಿಂದ ಮುಕ್ತ ಮುಕ್ತ..! ಡಿವೋರ್ಸ್ ಸಿಕ್ಕ ಬೆನ್ನಲ್ಲೆ 40 ಲೀಟರ್ ಹಾಲಿನಲ್ಲೇ ಸ್ನಾನ ಮಾಡಿದ ಪತಿ

ದಿಸ್ಪುರ: ಇತ್ತೀಚಿನ ಪತಿ ಪತ್ನಿಯ ಸಂಬಂಧಗಳು ಕಣ್ಣು ಬಿಡುವುದರಲ್ಲೇ ಬಿರುಕು ಬಿಡುತ್ತಿವೆ. ಮದುವೆಯಾದ ಮಾರನೇ ದಿನವೇ ಡಿವೊರ್ಸ್ ಕೇಳುವಂತಹದ್ದು, ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧದಂತಹ ಘಟನೆಗಳಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಈ ಮಧ್ಯೆ ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಗೆ ವಿಚ್ಚೇದನ ನೀಡಿದ ಖುಷಿಯಲ್ಲಿ 40 ಲೀಟರ್ ಹಾಲು ತಂದು ಸ್ನಾನ ಮಾಡಿ ಸಂಭ್ರಮಿಸಿದ್ದಾನಂತೆ.

ಹೌದು, ಪತ್ನಿಯಿಂದ ವಿಚ್ಛೇದನ ಪಡೆದ ಪತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್ನಲ್ಲಿ ನಡೆದಿದೆ. ಮಾಣಿಕ್ ಅಲಿ ಹಾಲಿನಿಂದ ಸ್ನಾನ ಮಾಡಿದ ವ್ಯಕ್ತಿ. ಸ್ನಾನದ ವಿಡಿಯೋ ಮಾಡಿಕೊಳ್ಳುತ್ತಾ, ʻನಾನು ಈಗ ಸ್ವತಂತ್ರʼ ಎಂದು ಹೇಳಿಕೊಂಡಿದ್ದಾನೆ. ಕಾನೂನಿನ ಮೂಲಕ ಪತ್ನಿಯಿಂದ ವಿಚ್ಛೇದನ ಪಡೆದಿರುವೆ. ನಾನು ಇಂದಿನಿಂದ ನಾನು ಸ್ವತಂತ್ರ. ಶುದ್ಧೀಕರಣ ಮತ್ತು ಬಿಡುಗಡೆಯ ಸಾಂಕೇತಿಕವಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾನೆ.

ವಿಚ್ಛೇದನದ ಪ್ರಕ್ರಿಯೆ ಮುಗಿದ ಬೆನ್ನಲ್ಲೆ ಮಾಣಿಕ್ ಅಲಿ ಅಂಗಡಿಯಿಂದ ನಾಲ್ಕು ಬಕೆಟ್ (ಸುಮಾರು 40 ಲೀಟರ್) ಹಾಲು ತಂದು ಸ್ನಾನ ಮಾಡಿದ್ದಾನೆ. ಸ್ನಾನ ಮಾಡುತ್ತಲೇ ವಿಡಿಯೋ ಕೂಡ ಮಾಡಿದ್ದಾನೆ. “ಇಂದಿನಿಂದ, ನಾನು ಸ್ವತಂತ್ರ… ನನಗೆ ಎಲ್ಲವೂ ಹೊರೆಯಾಗಿತ್ತು… ಈಗ ನಾನು ಅದನ್ನೆಲ್ಲಾ ತೊಳೆದುಕೊಂಡಿದ್ದೇನೆ” ಎಂದು ವಿಡಿಯೋದಲ್ಲಿ ಆತ ಹೇಳಿಕೊಂಡಿದ್ದಾನೆ.

ವಿಚ್ಚೇದನಕ್ಕೆ ಕಾರಣವೇನು..?
ತಾನು ಹೆಂಡತಿಯಿಂದ ದೂರಾಗಲು ವಿಚ್ಚೇದನ ಪಡೆಯಲು ಕಾರಣ ತಿಳಿಸಿರುವ ಮಾಣಿಕ್ ಅಲಿ, “ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎರಡು ಬಾರಿ ಓಡಿಹೋಗಿದ್ದಳು. ಆದರೂ ನಾನು ಎರಡೂ ಬಾರಿ ಅವಳನ್ನು ಕ್ಷಮಿಸಿದೆ. ನಮ್ಮ ಮಗಳ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಅವಳು ಅದೇ ತಪ್ಪನ್ನು ಪುನರಾವರ್ತಿಸುತ್ತಲೇ ಇದ್ದಳು. ನಾನು ಅದನ್ನು ಸಹಿಸಲಾಗಲಿಲ್ಲ. ಅಂತಿಮವಾಗಿ ಪರಸ್ಪರ ಕಾನೂನುಬದ್ಧವಾಗಿ ಬೇರೆ ಬೇರೆ ಆಗುವ ಮಾರ್ಗ ಆರಿಸಿಕೊಳ್ಳಬೇಕಾಯಿತು” ಎಂದು ಮಾಣಿಕ್ ಅಲಿ ಹೇಳಿಕೊಂಡಿದ್ದಾನೆ.

“ಮಗುವಿನ ಸಲುವಾಗಿ ಪತ್ನಿಯನ್ನು ಉಳಿಸಿಕೊಳ್ಳಲು ನಾನು ಸಾಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ, ಪತ್ನಿ ತನ್ನ ವಿವಾಹೇತರ ಸಂಬಂಧವನ್ನು ಮತ್ತೆ ಮತ್ತೆ ಮುಂದುವರೆಸಿದ್ದರಿಂದ ವಿಚ್ಛೇದನ ಒಪ್ಪಿಕೊಳ್ಳದೇ ಬೇರೆ ದಾರಿ ಇರಲಿಲ್ಲ. ಈ ಮುನ್ನ ಹೀಗೆ ಮಾಡಿದಾಗ ಸಾಕಷ್ಟು ತಿಳಿವಳಿಕೆ ಹೇಳಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಹಿರಿಯರ ಸಮ್ಮುಖದಲ್ಲಿ ರಾಜಿ ಕೂಡ ಮಾಡಿಕೊಳ್ಳಲಾಗಿತ್ತು. ಅದರ ಹೊರತು ನಮ್ಮನ್ನು ತೊರೆದು ಹೋಗಿದ್ದಳು. ಈ ಬಾರಿ ಮಗುವಿನೊಂದಿಗೆ ಮನೆ ತೊರೆದಿದ್ದರಿಂದ ಇದ್ದ ಆಸೆಗಳೆಲ್ಲ ಕಮರಿದ್ದವು. ಕೊನೆಗೆ, ಕಾನೂನಿನ ಮೂಲಕ ಪರಸ್ಪರ ವಿಚ್ಛೇದನ ಆರಿಸಿಕೊಳ್ಳಬೇಕಾಯಿತು. ಈಗ ನಾನು ಸಂಸಾರದಿಂದ ಮುಕ್ತಿ ಪಡೆದ ಸ್ವತಂತ್ರ ಹಕ್ಕಿ” ಎಂದು ಮಾಣಿಕ್ ಅಲಿ ಎಂದು ಸಂಭ್ರಮಿಸಿದ್ದಾನೆ. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಅದೇನೇ ಇರಲಿ. ಗಂಡ ಹೆಂಡತಿ ನಡುವೆ ಬಾಂಧವ್ಯ ಉತ್ತಮವಾಗಿದ್ದರೆ, ಹೊಂದಾಣಿಕೆಯ ಗುಣವಿದ್ದು ಸತಿಗೆ ಪತಿ, ಪತಿಗೆ ಸತಿ ಕಷ್ಟಸುಖಗಳಿಗೆ ಸ್ಪಂದಿಸುವ ಗುಣಗಳಿದ್ದರೆ ಮಾತ್ರ ಸಂಸಾರ ಚೆನ್ನಾಗಿರುತ್ತದೆ. ಇಲ್ಲದಿದ್ದರೇ ಈ ರೀತಿ ಹಳ್ಳ ಹಿಡಿಯುತ್ತದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.