ಪ್ಯಾರಾಲಿಂಪಿಕ್ ಪಟುಗೆ ಬಹುಮಾನ ನೀಡದ ಸರ್ಕಾರಕ್ಕೆ 2 ಲಕ್ಷ ರೂ. ದಂಡ
ಬೆಂಗಳೂರು: ಕೈಗಳಿಲ್ಲದೆ ಅಂತಾರಾಷ್ಟ್ರೀಯ ಪ್ಯಾರಾ-ಈಜು ಸ್ಪರ್ಧೆಯಲ್ಲಿ ಯಶಸ್ಸು ಗಳಿಸಿದ ಪ್ಯಾರಾಲಿಂಪಿಕ್ ಪಟು ವಿಶ್ವಾಸ್ ಗೆ ಬಹುಮಾನ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ 2 ಲಕ್ಷ ರೂ ದಂಡ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಹೌದು, ರಾಷ್ಟ್ರೀಯ ಮಟ್ಟದ ಪ್ಯಾರಾ ಒಲಿಂಪಿಕ್ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದ ನಗರದ ಪ್ಯಾರಾ ಒಲಿಂಪಿಕ್ ಪಟು ಕೆ.ಎಸ್.ವಿಶ್ವಾಸ್ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಾದ 6 ಲಕ್ಷ ರೂ. ನಗದು ಬಹುಮಾನದಲ್ಲಿ ಬಾಕಿ 1.26 ಲಕ್ಷ ಪಾವತಿಸದೆ ಅಲೆದಾಡಿಸುತ್ತಿರುವ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, 2 ಲಕ್ಷ ರೂ. ದಂಡ ವಿಧಿಸಿದೆ.
ಕೆ.ಎಸ್.ವಿಶ್ವಾಸ್ ಸಲ್ಲಿಸಿದ್ದ ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ‘ದಂಡದ ಮೊತ್ತವನ್ನು ದಾವೆಯ ಖರ್ಚಿನ ರೂಪದಲ್ಲಿಅರ್ಜಿದಾರರಿಗೆ ಎರಡು ವಾರಗಳಲ್ಲಿ ಪಾವತಿಸಬೇಕು’ ಎಂದು ಸರಕಾರಕ್ಕೆ ತಾಕೀತು ಮಾಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘‘ಜೀವನದ ಭಾರಿ ಅಡೆತಡೆಗಳ ವಿರುದ್ಧ ಈಜಿ ಜಯ ಗಳಿಸಿದ ವ್ಯಕ್ತಿಯ ಅಪರೂಪದ ಸಾಧನೆಗೆ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ಕೈಗಳಿಲ್ಲದೆ ಅಂತಾರಾಷ್ಟ್ರೀಯ ಪ್ಯಾರಾ-ಈಜು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಿದ ವಿಶ್ವಾಸ್ ಕೆ ಎಸ್ ಅವರ ಮನೋಭಾವವನ್ನು ರಾಜ್ಯ ಸರ್ಕಾರ ಅಡ್ಡಿಪಡಿಸದೆ ಗೌರವಿಸಬೇಕಿತ್ತು. ಕೈಗಳಿಲ್ಲದೆ ಒಬ್ಬ ವ್ಯಕ್ತಿ ಈಜುಕೊಳಗಳಿಗೆ ಧುಮುಕಿ ವಿಜಯಶಾಲಿಯಾಗಿ ಹೊರಹೊಮ್ಮುವುದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದಾಗ, ರಾಜ್ಯ ಸರ್ಕಾರವು ಅವರನ್ನು ಗೌರವಿಸಬೇಕು. ಅದು ಬಿಟ್ಟು ಅವರ ಹಕ್ಕುಗಳನ್ನು ಹತ್ತಿಕ್ಕಬಾರದು ಎಂದು ನ್ಯಾಯಪೀಠ ಚಾಟಿ ಬೀಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
