23/04/2026

Law Guide Kannada

Online Guide

ಭೂ ದಾಖಲೆ ಪಡೆಯಲು ಹೊಸ ರೂಲ್ಸ್: ಇನ್ಮುಂದೆ ಎಲ್ಲವೂ ಡಿಜಿಟಲ್ ಮಯ

ಬೆಂಗಳೂರು: ಕಂದಾಯ ಇಲಾಖೆ ಕೈಬರಹದ ಭೂದಾಖಲೆ ನೀಡುವ ವ್ಯವಸ್ಥೆಗೆ ತಿಲಾಂಜಲಿ ನೀಡಿದ್ದು, ಡಿಜಿಟಲ್ ರೂಪದಲ್ಲೇ ದಾಖಲೆಗಳ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಭೂ ದಾಖಲೆ ಪಡೆಯಲು ಹೊಸ ನಿಯಮ ಜಾರಿಯಾಗಿದ್ದು ಇನ್ಮುಂದೆ ಎಲ್ಲವೂ ಡಿಜಿಟಲ್ ಮಯವಾಗಲಿದೆ.

ಹೌದು ಕೈಬರಹದ ಭೂ ದಾಖಲೆಗೆ ವಿದಾಯ ಹೇಳಲಾಗಿದ್ದು, ಇನ್ನು ಮುಂದೆ, ಭೂ ದಾಖಲೆಗಳ ದೃಢೀಕೃತ ನಕಲು ನಿಮಗೆ ಸಿಗುವುದಿಲ್ಲ. ಭೂ ದಾಖಲೆ ಪಡೆಯಲು ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಡಿಜಿಟಲ್ ರೂಪದಲ್ಲೇ ಭೂ ದಾಖಲೆಗಳ ವಿತರಣೆ ಪ್ರಕ್ರಿಯೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಈಗಾಗಲೇ ಶುರುವಾಗಿದೆ.

ಇನ್ನು ಮುಂದೆ ಎ ಹಾಗೂ ಬಿ ವರ್ಗದ ಭೂ ದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ಮೂಲಕ ನೀಡುವ ಬದಲಾಗಿ ಡಿಜಿಟಲ್ ರೂಪದಲ್ಲಿಯೇ ನೀಡಲಿದೆ. ಸದ್ಯ ರಾಜ್ಯದ ಎಲ್ಲ 240 ತಹಶೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್ ದಾಖಲೆಗಳನ್ನು ನೀಡಲಾಗುತ್ತಿದೆ.

ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲೂ ಆನ್ ಲೈನ್ನಲ್ಲಿ ಭೂ ದಾಖಲೆ ಲಭ್ಯ
ಇನ್ನು ಈ ಸೇವೆಯನ್ನು ರಾಜ್ಯದಲ್ಲಿ ಇರುವ 700 ಅಟಲ್ ಜನಸ್ನೇಹಿ ಕೇಂದ್ರ (ನಾಡ ಕಚೇರಿ)ಗಳಿಗೆ ವಿಸ್ತರಿಸಲು ಕಂದಾಯ ಇಲಾಖೆ ಮುಂದಾಗಿದೆ. ಹೌದು, ಜುಲೈ 1ರಿಂದ ಕೈಬರಹದ ಭೂದಾಖಲೆ ಪ್ರತಿ ಬದಲಿಗೆ ಡಿಜಿಟಲ್ ರೂಪದ ಭೂದಾಖಲೆ ವಿತರಣೆ ಕಡ್ಡಾಯಗೊಳಿಸಿರುವ ಕಂದಾಯ ಇಲಾಖೆಯು ರಾಜ್ಯದ ಎಲ್ಲಾ ಅಟಲ್ಜೀ ಜನಸ್ನೇಹಿ ಕೇಂದ್ರಗಳಿಗೂ (ನಾಡ ಕಚೇರಿ) ಆನ್ಲೈನ್ ಸೇವೆ ವಿಸ್ತರಿಸಿದೆ. ಅರ್ಜಿದಾರರು ಕೋರುವ ಭೂ ದಾಖಲೆಗಳು ಒಂದೇ ಸ್ಕ್ಯಾನ್ ಆಗಿ ದೃಢೀಕರಣಗೊಂಡಿದ್ದರೆ ಒಂದೇ ದಿನದಲ್ಲಿ ಡಿಜಿಟಲ್ ದಾಖಲೆ ವಿತರಣೆಯಾಗಲಿದೆ.

ಒಂದೊಮ್ಮೆ ಸ್ಕ್ಯಾನಿಂಗ್ ಪ್ರಕ್ರಿಯೆ ಆಗಿರದಿದ್ದರೆ ಅದನ್ನು ಏಳು ದಿನದೊಳಗೆ ಡಿಜಿಟಲ್ ದಾಖಲೆಯಾಗಿ ವಿತರಿಸುವ ಕಾರ್ಯವನ್ನು ಮಾಡಲಾಗುತ್ತದೆ. ಅರ್ಜಿದಾರರು ಕೋರುವ ಭೂ ದಾಖಲೆಗಳು ಈಗಾಗಲೇ ಸ್ಕ್ಯಾನ್ ಆಗಿದ್ದರೆ ಅದನ್ನು ಒಂದೇ ದಿನದಲ್ಲಿ ಡಿಜಿಟಲ್ ದಾಖಲೆ ವಿತರಣೆ ಮಾಡಲಾಗುವುದು. ಒಂದೊಮ್ಮೆ ಸ್ಕ್ಯಾನಿಂಗ್ ಪ್ರಕ್ರಿಯೆಯು ಆಗಿರದಿದ್ದರೆ, ಅದನ್ನು ಏಳು ದಿನದೊಳಗೆ ಡಿಜಿಟಲ್ ದಾಖಲೆ ವಿತರಣೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಕಂದಾಯ ಇಲಾಖೆ ಹೇಳಿದೆ. ಇದರಿಂದ ಭೂ ದಾಖಲೆಗಳನ್ನು ಯಾವುದೇ ಅಡಚಣೆ ಹಾಗೂ ವಿಳಂಬ ಇಲ್ಲದೆ ಪಡೆಯಲು ಅನುಕೂಲವಾಗಲಿದೆ.

ಕಂದಾಯ ಇಲಾಖೆಯ ಆಯುಕ್ತಸುನಿಲ್ ಕುಮಾರ್ ಪೊಮ್ಮಲ ಮಾತನಾಡಿ, ಜನ ಬಯಸುವ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ವಿತರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಸುರಕ್ಷಿತವಾಗಿ ಸಂರಕ್ಷಿಸಿದ ಭೂ ದಾಖಲೆಗಳನ್ನು ಖಾಸಗಿ ಆಸ್ತಿದಾರರು ಪಾರದರ್ಶಕ ವಿಧಾನದಡಿ ಪಡೆಯಬಹುದು. ಹಾಗೆಯೇ ದೀರ್ಘಕಾಲದ ಬಾಕಿ ಇರುವ ಬಗರ್ ಹುಕುಂ ದರ್ಖಾಸ್ತು ಪೋಡಿ ಇತರೆ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

ಡಿಜಿಟಲ್ ರೂಪದಲ್ಲೇ ಭೂ ದಾಖಲೆಗಳ ವಿತರಣೆಯಿಂದಾಗುವ ಅನುಕೂಲಗಳು ಹೀಗಿವೆ ನೋಡಿ
ಭೂ ದಾಖಲೆ ದೃಢೀಕೃತ ಪ್ರತಿಗಾಗಿ ಅನಗತ್ಯ ಕಾಯಬೇಕಾಗಿಲ್ಲ, ವಿಳಂಬ ತಪ್ಪಿಸಬಹುದು. ದಾಖಲೆಗಳು ಶಿಥಿಲವಾಗಿ ಹಾಳಾಗುವುದನ್ನು ತಡೆಯಬಹುದು. ಭೂ ದಾಖಲೆಗಳನ್ನು ತಿರುಚಲು ಅವಕಾಶ ಇರುವುದಿಲ್ಲ. ತಾವು ಇರುವಲ್ಲೇ ಭೂ ದಾಖಲೆ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹಾಗೆಯೇ ಅರ್ಧಕ್ಕೆ ನಿಂತ ಹಳೆಯ ಬಗರ್ ಹುಕುಂ ಅರ್ಜಿ ವಿಲೇವಾರಿಗೂ ಅನುಕೂಲವಾಗಲಿದೆ. ಪಾರದರ್ಶಕವಾಗಿ ಕಾಲಮಿತಿಯಲ್ಲಿ ಡಿಜಿಟಲ್ ಭೂ ದಾಖಲೆಗಳು ಲಭ್ಯವಾಗಲಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.