23/04/2026

Law Guide Kannada

Online Guide

ಲೈಂಗಿಕ ಸಂಬಂಧ ಹೊಂದಿ ಮದುವೆ ಭರವಸೆ ಈಡೇರಿಸದಿದ್ದರೇ ಅದು ಅತ್ಯಾಚಾರವಲ್ಲ- ಹೈಕೋರ್ಟ್

ಲಖನೌ: ಲೈಂಗಿಕ ಸಂಬಂಧ ಹೊಂದಿ ನಂತರ ಮದುವೆಯಾಗದಿರುವುದನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಅವಿನಾಶ್ ಸಕ್ಷೇನಾ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ. ಅಜಯ್ ಸೈನಿ ಎಂಬಾತ ತನಗೆ ಮತ್ತು ಬರುವ ಪಾನೀಯವನ್ನು ನೀಡಿ, ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಮೂರು ವರ್ಷ ಲೈಂಗಿಕ ಶೋಷಣೆ ಮುಂದುವರಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದರು.

ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಲೈಂಗಿಕ ಸಂಬಂಧವನ್ನು ಹೊಂದಿದ ಬಳಿಕ, ಮದುವೆಯಾಗುವ ಭರವಸೆಯನ್ನು ಈಡೇರಿಸದೇ ಹೋದಲ್ಲಿ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

*ಅತ್ಯಾಚಾರ ಎಂಬುದು ಅತ್ಯಂತ ಗಂಭೀರ ಸ್ವರೂಪದ ಅಪರಾಧ. ಬಲವಂತವಾಗಿ ಲೈಂಗಿಕ ಹಿಂಸೆ ನೀಡುವ ಸಂದರ್ಭಗಳಲ್ಲಿ ಮಾತ್ರವೇ ಅದು ಅತ್ಯಾಚಾರ ಎಂದು ಆರೋಪಿಸಬಹುದು. ಸಂಬಂಧ ಹಾಳಾದ ಮಾತ್ರಕ್ಕೆ ಅತ್ಯಾಚಾರದ ಆರೋಪ ಹೊರಿಸುವುದು ಆ ಅಪರಾಧದ ಗಂಭೀರತೆಯನ್ನು ಕಡಿಮೆ ಮಾಡುತ್ತದೆ. ಆರೋಪಿಗೆ ಇದರಿಂದ ಗಂಭೀರ ಕಳಂಕ ತರುತ್ತದೆ. ಈ ವಿಷಯದಲ್ಲಿ ಕ್ರಿಮಿನಲ್ ಕಾನೂನಿನ ಬಳಕೆಯು ಖಂಡನೆಗೆ ಅರ್ಹವಾಗಿದೆ ಎಂದು ನ್ಯಾಯಪೀಠ ಹೇಳಿದೆ.

‘ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿದ ನಂತರ ಓಡಿಹೋದ ಪ್ರಕರಣ ಇದಲ್ಲ. ಇವರ ಸಂಬಂಧವು ಮೂರು ವರ್ಷ ಮುಂದುವರಿದಿದೆ. ಇದು ದೀರ್ಘ ಅವಧಿಯೇ ಆಗಿದೆ. ಮದುವೆಯಾಗಿಲ್ಲ ಎಂಬ ಕಾರಣಕ್ಕೆ, ಇಬ್ಬರೂ ಭಾವನಾತ್ಮಕ ಸಂಬಂಧ ಹೊಂದಿದ್ದ ಸಮಯದಲ್ಲಿ ನಡೆದ ಲೈಂಗಿಕ ಸಂಬಂಧವು ಅತ್ಯಾಚಾರವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.