30/08/2026

Law Guide Kannada

Online Guide

ಐತಿಹಾಸಿಕ ಬೆಳವಣಿಗೆ: ವಕೀಲರ ಸಂಘದ 162 ವರ್ಷಗಳಲ್ಲೇ ಮೊದಲ ಬಾರಿಗೆ ಮಹಿಳೆಗೆ ಅಧ್ಯಕ್ಷ ಸ್ಥಾನ

ಬಾಂಬೆ: ದೇಶದಲ್ಲಿ ಲಿಂಗ ಸಮಾನತೆ ಮತ್ತು ನಾಯಕತ್ವದಲ್ಲಿ ಮಹಿಳಾ ಪ್ರಾತಿನಿಧ್ಯದ ಕುರಿತು ನಿರಂತರ ಚರ್ಚೆಗಳು ನಡೆಯುತ್ತಿವೆ. ಎಲ್ಲಾ ಕ್ಷೇತ್ರದಲ್ಲೂ ಇದೀಗ ಮಹಿಳೆಯರ ಪ್ರಾತಿನಿಧ್ಯ ಹೆಚ್ಚುತ್ತಿದ್ದು ಈ ಮಧ್ಯೆ ಇದೇ ವೇಳೆ ಬಾಂಬೆ ಹೈಕೋರ್ಟ್ ನಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ.

ಹೌದು. ಬಾಂಬೆ ಹೈಕೋರ್ಟ್ನ ಪ್ರಭಾವಿ ವಕೀಲರ ಸಂಘ ‘ಅಸೋಸಿಯೇಷನ್ ಆಫ್ ಅಡ್ವೊಕೇಟ್ಸ್ ಆಫ್ ವೆಸ್ಟರ್ನ್ ಇಂಡಿಯಾ’ಗೆ (ಎಎಡಬ್ಲ್ಯೂಐ) ಬರೋಬ್ಬರಿ 162 ವರ್ಷಗಳ ನಂತರ ಮಹಿಳಾ ವಕೀಲರೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲು ಸಂಘ ತೀರ್ಮಾನಿಸಿದೆ. ಎಎಡಬ್ಲ್ಯೂಐ ಸಂಘವು 1864ರಲ್ಲಿ ಸ್ಥಾಪನೆಯಾಗಿತ್ತು. ಅಂದಿನಿಂದ ಈವರೆಗೆ ಈ ವಕೀಲರ ಸಂಘವನ್ನು ಯಾವುದೇ ಮಹಿಳೆ ಮುನ್ನಡೆಸಿರಲಿಲ್ಲ. ಇದೀಗ, ಮುಂಬರುವ ಚುನಾವಣೆಯಿಂದಲೇ ಅಧ್ಯಕ್ಷ ಹುದ್ದೆಯನ್ನು ಮಹಿಳಾ ಸದಸ್ಯರಿಗೆ ಮೀಸಲಿಡಲು ಎಎಡಬ್ಲ್ಯೂಐ ಸರ್ವಾನುಮತದ ನಿರ್ಧಾರ ತೆಗೆದುಕೊಂಡಿದೆ

ಈ ಸಂಬಂಧ ಸಂಘದ ಸಂವಿಧಾನಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಪ್ರಶಾಂತ್ ರೇಲೇಕರ್ , “ಮುಂದಿನ ಅವಧಿಯಿಂದ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಲಿದೆ. ತದನಂತರ ಪ್ರತಿ ಮೂರು ಅವಧಿಗೊಮ್ಮೆ ಮಹಿಳಾ ವಕೀಲರಿಗೆ ಸಂಘದ ಚುಕ್ಕಾಣಿ ಹಿಡಿಯುವ ಅವಕಾಶ ಸಿಗಲಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ಅಗತ್ಯ ಬದಲಾವಣೆಗೆ ಕಾಲಕೂಡಿಬಂದಿದೆ” ಎಂದು ತಿಳಿಸಿದ್ದಾರೆ.

ನ್ಯಾಯಾಂಗ ವಲಯದಲ್ಲಿ ಮೆಚ್ಚುಗೆ
ಇನ್ನು ಸಂಘದ ಈ ನಿರ್ಧಾರಕ್ಕೆ ನ್ಯಾಯಾಂಗ ವಲಯದಲ್ಲಿ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ವಕೀಲೆ ದೀಪಾ ಚವಾಣ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಸಂಘದ ಒಟ್ಟು ಸದಸ್ಯರಲ್ಲಿ ಮಹಿಳೆಯರ ಸಂಖ್ಯೆ ಇನ್ನೂ ಕಡಿಮೆಯಿದೆ. ಆದರೂ, ನಾಯಕತ್ವದ ಅತ್ಯುನ್ನತ ಮಟ್ಟದಲ್ಲೇ ಅವಕಾಶ ಕಲ್ಪಿಸಿರುವುದು ಸಮಾನತೆಯತ್ತ ಇಟ್ಟ ದೊಡ್ಡ ಹೆಜ್ಜೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಐತಿಹಾಸಿಕ ತೀರ್ಮಾನವಾಗಿದ್ದೇಗೆ…?
ಇನ್ನು ಅಸೋಸಿಯೇಷನ್ ಆಫ್ ಅಡ್ವೊಕೇಟ್ಸ್ ಆಫ್ ವೆಸ್ಟರ್ನ್ ಇಂಡಿಯಾ’ಗೆ ಮಹಿಳಾ ಅಧ್ಯಕ್ಷರನ್ನ ಆಯ್ಕೆ ಮಾಡುವ ವಿಚಾರ ತಟ್ಟನೆ ಆದ ನಿರ್ಧಾರವಲ್ಲ. ಬದಲಿಗೆ ಸಂಘಟನೆಯ ನಾಯಕತ್ವದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ವರ್ಷಗಳಿಂದ ನಡೆಸಿದ ಪ್ರಯತ್ನದ ಫಲವಾಗಿದೆ. 2014ರಲ್ಲೇ ಉಪಾಧ್ಯಕ್ಷ ಸ್ಥಾನ ಮತ್ತು ಕಾರ್ಯಕಾರಿ ಮಂಡಳಿಯ ಇಬ್ಬರು ಸದಸ್ಯರ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಟ್ಟು, ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಇತ್ತೀಚೆಗೆ ಆಗಸ್ಟ್ 9ರಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸಂಘದ ಸಂವಿಧಾನ ತಿದ್ದುಪಡಿಗೆ ವಿಶೇಷ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಅಧ್ಯಕ್ಷ ಸ್ಥಾನದ ಜೊತೆಗೆ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಮಂಡಳಿಯ ಹುದ್ದೆಗಳಲ್ಲೂ ಮಹಿಳಾ ಮೀಸಲಾತಿಗೆ ಶಿಫಾರಸು ಮಾಡಿದೆ. ಎಲ್ಲ ಹಂತಗಳಲ್ಲೂ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಕಲ್ಪಿಸಲು ಸಂಘ ಮುಂದಾಗಿದೆ” ಎಂದು ಸಂಘದ ಅಧ್ಯಕ್ಷ ಪ್ರಶಾಂತ್ ರೇಲೇಕರ್ ತಿಳಿಸಿದ್ದಾರೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.