23/04/2026

Law Guide Kannada

Online Guide

ಮದುವೆ ನಂತರ ಅನೈತಿಕ ಸಂಬಂಧವಿಟ್ಟುಕೊಳ್ಳುವುದು ಅಪರಾಧವೇ..? ಕಾನೂನು ಏನು ಹೇಳುತ್ತೆ..? ಸ್ಪಷ್ಟ ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧದಿಂದ ಸಾಕಷ್ಟು ಕುಟುಂಬಗಳು ಹಾಳಾಗುತ್ತಿದ್ದು ಗಂಡ ಹೆಂಡತಿಯ ನಡುವಿನ ಸಂಬಂಧಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ವಿವಾಹಿತ ಪುರುಷರಾಗಲಿ, ಮಹಿಳೆಯರಾಗಲಿ ವಿವಾಹೇತರ ಸಂಬಂಧಗಳನ್ನಿಟ್ಟುಕೊಳ್ಳುವುದು ಸಮಾಜದಲ್ಲಿ ತಲೆತಗ್ಗಿಸುವ ವಿಚಾರವೆಂಬ ಭಾವನೆ ಇದೆ. ಅನೈತಿಕ ಸಂಬಂಧದಿಂದಾಗಿ ಪವಿತ್ರ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ.

ವಿವಾಹಿತ ಪುರುಷ ಅಥವಾ ಮಹಿಳೆ ತಮ್ಮ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ಹಾಗಾದರೇ ಈ ರೀತಿ ವಿವಾಹೇತರ ಸಂಬಂಧ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವೇ? ಇದಕ್ಕೆ ಶಿಕ್ಷೆ ಇದೆಯೇ? ಕಾನೂನು ಏನು ಹೇಳುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲಿದೆ ನೋಡಿ.

ಐಪಿಸಿ ಸೆಕ್ಷನ್ 497 ರ ಪ್ರಕಾರ, ಹಿಂದೆ, ವಿವಾಹಿತ ಪುರುಷ ಅಥವಾ ಮಹಿಳೆ ವಿವಾಹೇತರ ಸಂಬಂಧವನ್ನು ಹೊಂದಿದ್ದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತಿತ್ತು. ಜೊತೆಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿತ್ತು. ಆದರೆ 2018ರ ನಂತರ ಈ ಕಾನೂನಿನಲ್ಲಿ ಒಂದಷ್ಟು ಬದಲಾವಣೆಗಳಾಗಿ ವಿವಾಹೇತರ ಸಂಬಂಧ ಹೊಂದುವುದು ಅಪರಾಧವಲ್ಲ ಎಂಬ ತೀರ್ಪು ಸುಪ್ರೀಂಕೋರ್ಟ್ ನಲ್ಲಿ ಹೊರಬಿದ್ದಿತು.

ಸೆಪ್ಟೆಂಬರ್ 2018 ರಲ್ಲಿ, ವಿವಾಹೇತರ ಸಂಬಂಧಗಳ ವಿಷಯದ ಕುರಿತು ಒಂದು ಮಹತ್ವದ ತೀರ್ಪನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್, ವಿವಾಹೇತರ ಸಂಬಂಧವಿಟ್ಟುಕೊಳ್ಳುವುದು ಅಪರಾಧವಲ್ಲ ಎಂದಿತು. ಜೋಸೆಫ್ ಶೈನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497 ಅನ್ನು ಅಸಂವಿಧಾನಿಕ ಎಂದು ಘೋಷಿಸಿತು. ಮತ್ತು ಸಂಬಂಧ ಹೊಂದುವುದು ವೈಯಕ್ತಿಕ ಆಯ್ಕೆಯ ವಿಷಯವಾಗಿರುವುದರಿಂದ ವಿವಾಹೇತರ ಸಂಬಂಧ ಹೊಂದುವುದು ಕ್ರಿಮಿನಲ್ ಅಪರಾಧವಲ್ಲ ಎಂದು ತೀರ್ಪು ಪ್ರಕಟಿಸಿತು.

ಅನೈತಿಕ ಸಂಬಂಧವನ್ನ ಅಪರಾಧವೆಂದು ಪರಿಗಣಿಸದಿದ್ದರೂ, ಇದು ಗಂಭೀರ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಯಾಗಿ ಪರಿಣಾಮಗಳನ್ನು ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಗಂಡ ಅಥವಾ ಹೆಂಡತಿಯ ವಿವಾಹೇತರ ಸಂಬಂಧದ ಬಗ್ಗೆ ಗೊತ್ತಾದರೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಅಂಶವನ್ನು ವಿಚ್ಛೇದನಕ್ಕೆ ಮಾನ್ಯ ಎಂದು ಪರಿಗಣಿಸಲಾಗಿದೆ. ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 (1) (i) ಅಡಿಯಲ್ಲಿ, ಪತಿ ಅಥವಾ ಪತ್ನಿ ವಿವಾಹೇತರ ಸಂಬಂಧಗಳ ಆಧಾರದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಪತಿ ಅಥವಾ ಪತ್ನಿಯ ವಿವಾಹೇತರ ಸಂಬಂಧದಿಂದ ಹಾನಿಗೊಳಗಾದ ಸಂಗಾತಿಗಳು ನ್ಯಾಯಾಲಯದಲ್ಲಿ ಪರಿಹಾರವನ್ನು ಕೋರಬಹುದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಇದರರ್ಥ ಒಬ್ಬ ಸಂಗಾತಿಯು ತನ್ನ ಗಂಡ/ಹೆಂಡತಿಯ ವಿವಾಹೇತರ ಸಂಬಂಧದ ಕಾರಣದಿಂದಾಗಿ ಮಾನಸಿಕ ಅಥವಾ ಸಾಮಾಜಿಕ ಹಾನಿಯನ್ನು ಅನುಭವಿಸಿದರೆ, ಅವರು ಆರ್ಥಿಕ ಪರಿಹಾರವನ್ನು ಪಡೆಯಬಹುದು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.