05/11/2026

Law Guide Kannada

Online Guide

ಪಿಡಿಒಗೆ 50 ಸಾವಿರ ರೂ. ದಂಡ: ತಮ್ಮ ಸ್ವಂತ ಜೇಬಿನಿಂದಲೇ ಪಾವತಿಸಿ ಎಂದು ನಿರ್ದೇಶಿಸಿದ ಹೈಕೋರ್ಟ್: ಕಾರಣ…?

ಬೆಂಗಳೂರು : ಅಂಗಡಿಯೊಂದರ ತೆರವು ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) 50 ಸಾವಿರ ರೂ. ದಂಡ ವಿಧಿಸಿರುವ ಕರ್ನಾಟಕ ಹೈಕೋರ್ಟ್ ದಂಡವನ್ನ ತನ್ನ ಸ್ವಂತ ಜೇಬಿನಿಂದ ನಾಲ್ಕು ವಾರಗಳಲ್ಲಿ ಸಂತ್ರಸ್ತರಿಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಂಗಳೂರು ಗ್ರಾಮ ಪಂಚಾಯತ್ನು ಪಿಡಿಒ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ತೀರ್ಪು ನೀಡಿದೆ.

ಕೆಡವಲಾದ ಆಸ್ತಿಯ ಭಾಗಕ್ಕೆ ಸಂಬಂಧಿಸಿದಂತೆ ಸ್ವಾಧೀನ ಪ್ರಕ್ರಿಯೆ ಆರಂಭಿಸಿ, ಪರಿಹಾರ ನಿರ್ಧರಿಸಿ ಪಾವತಿಸಬೇಕೆಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ನ್ಯಾಯಪೀಠವು, ರಸ್ತೆ ವಿಸ್ತರಣೆಯಂತಹ ಸಾರ್ವಜನಿಕ ಕಾಮಗಾರಿಗಳಿಗಾಗಿ ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ಪರಿಹಾರವನ್ನೂ ನೀಡದೆ ನಾಗರಿಕರ ಆಸ್ತಿ ತೆರವುಗೊಳಿಸುವುದು ಸಂವಿಧಾನದ ಪರಿಚ್ಛೇದ 300ಎ ಅಡಿಯ ಆಸ್ತಿ ಹಕ್ಕಿನ ಉಲ್ಲಂಘನೆಯಾಗಿದೆ. ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ಆಸ್ತಿ ಕೆಡವಿರುವ ಪ್ರಕರಣದಲ್ಲಿ ಪರಿಹಾರ ಪಾವತಿಗೆ ನಿರ್ದೇಶಿಸುವುದರಿಂದ ಮಾತ್ರ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಸಂದಂತೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪಿಡಿಒ ಅವರ ನಡವಳಿಕೆ, ನಾಗರಿಕರ ಆಸ್ತಿಗೆ ಉಂಟಾದ ಹಾನಿ ಹಾಗೂ ನ್ಯಾಯಾಲಯ ನಿರ್ದೇಶಿಸಿದ್ದ ಜಂಟಿ ಸರ್ವೆಗೂ ಕಾಯದೆ ತೆರವುಗೊಳಿರುವುದನ್ನು ಪರಿಗಣಿಸಿದ ನ್ಯಾಯಪೀಠವು ಪಿಡಿಒಗೆ 50 ಸಾವಿರ ರೂ. ದಂಡ ವಿಧಿಸಿ ಮೇಲ್ಮನವಿ ವಜಾಗೊಳಿಸಿತು. ಹಾಗೆಯೇ ದಂಡದ ಮೊತ್ತವನ್ನು ಪಂಚಾಯತ್ ನಿಧಿಯಿಂದಲ್ಲ, ಪಿಡಿಒ ತಮ್ಮ ಸ್ವಂತ ಜೇಬಿನಿಂದ ನಾಲ್ಕು ವಾರಗಳಲ್ಲಿ ಸಂತ್ರಸ್ತರಿಗೆ ಪರಿಹಾರವಾಗಿ ಪಾವತಿಸಬೇಕು ಎಂದು ಖಡಕ್ ಆದೇಶ ಹೊರಡಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.