ಪತ್ನಿ ಜೀವನಾಂಶ ಮೊತ್ತ ದುಪ್ಪಟ್ಟು ಮಾಡಿ ಹೈಕೋರ್ಟ್ ಆದೇಶ
ಬೆಂಗಳೂರು: ಬದಲಾಗುತ್ತಿರುವ ಕಾಲಘಟ್ಟ ಹಾಗೂ ಏರುತ್ತಿರುವ ಜೀವನ ವೆಚ್ಚಗಳನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ಪತಿಯು ಪತ್ನಿಗೆ ನೀಡುತ್ತಿದ್ದ ಜೀವನಾಂಶ ಮೊತ್ತವನ್ನು 10 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಹೆಚ್ಚಿಸಿ ತೀರ್ಪು ನೀಡಿದೆ.
ಜೀವನಾಂಶ ಹೆಚ್ಚಿಸುವಂತೆ ಕೋರಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಪತ್ನಿಯ ಜೀವನಾಶ ಮೊತ್ತವನ್ನ ಏರಿಕೆ ಮಾಡಿ ಆದೇಶಿಸಿದೆ.
ವಿಶೇಷ ಮದುವೆ ಕಾಯಿದೆ ಸೆಕ್ಷನ್ 37ರಡಿ ಜೀವನಾಂಶ ಹೆಚ್ಚಳ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹಾಗೆಯೇ, ಪತಿ ಚೆನ್ನಾಗಿ ಆದಾಯ ಗಳಿಸಿದ್ದಾರೆಂಬ ಕಾರಣಕ್ಕೆ ಹೆಚ್ಚಿನ ಜೀವನಾಂಶ ನೀಡಬೇಕೆಂಬ ವಾದ ತಿರಸ್ಕರಿಸಿದ್ದ ಕೌಟುಂಬಿಕ ಅಭಿಪ್ರಾಯವನ್ನೂ ಹೈಕೋರ್ಟ್ ತಿರಸ್ಕರಿಸಿದೆ.
ಬದಲಾಗುತ್ತಿರುವ ಸನ್ನಿವೇಶದಲ್ಲಿ ಪತ್ನಿ ತಾವು ಬದುಕುತ್ತಿರುವ ರೀತಿ, ಏರಿಕೆಯಾಗುತ್ತಿರುವ ಜೀವನ ವೆಚ್ಚ ಮತ್ತಿತರ ವಿವರಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಕೊಡಬೇಕಿದೆ. ಈ ಅಂಶಗಳನ್ನು ಪರಿಗಣಿಸಿ ಜೀವನಾಂಶ ಮೊತ್ತ ಹೆಚ್ಚಳ ಮಾಡುವ ಬಗ್ಗೆ ಕೋರ್ಟ್ಗಳು ತೀರ್ಮಾನಿಸಬೇಕು. “ರೀಮಾ ಸಲ್ಮನ್ ವಿರುದ್ಧ ಸುಮೇರ್ ಸಿಂಗ್ ಸಲ್ಮನ್” ಪ್ರಕರಣದಲ್ಲಿ ಸಿಆರ್ಪಿಸಿ ಸೆಕ್ಷನ್ 125ರಡಿ ಒಮ್ಮೆ ಜೀವನಾಂಶ ನಿಗದಿಪಡಿಸಿದ ನಂತರವೂ ಕೋರ್ಟ್ಗಳು ಜೀವನ ವೆಚ್ಚ ಏರಿಕೆ ಮಾಡಬಹುದು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಈ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ಪತಿಯ ಆದಾಯವು ತಿಂಗಳಿಗೆ 1.5 ಲಕ್ಷದಿಂದ 2 ಲಕ್ಷ ರೂಪಾಯಿ ವರೆಗೆ ಇದೆ. ಆದರೂ, ಕೌಟುಂಬಿಕ ನ್ಯಾಯಾಲಯ ಜೀವನಾಂಶ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂಬುದು ಸಮರ್ಥನೀಯವಲ್ಲ. ಜೀವನ ವೆಚ್ಚ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಸರಿಯಲ್ಲ ಮತ್ತು ಅದು ಸಮಂಜಸವೂ ಅಲ್ಲ ಎಂದು ನ್ಯಾಯಪೀಠ ಹೇಳಿದೆ.
ಜೀವನ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಜೀವನಾಂಶ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಏನಿದು ಪ್ರಕರಣ…
ಅರ್ಜಿದಾರ ಮಹಿಳೆ 2010 ರಲ್ಲಿ ವಿವಾಹವಾಗಿದ್ದು, ತಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆ – 1954″ರ ಅಡಿ ನೋಂದಾಯಿಸಿದ್ದರು. ದಂಪತಿ ನಡುವೆ ಕಲಹ ಏರ್ಪಟ್ಟಿದ್ದರಿಂದ 2012 ರಲ್ಲಿ ಪ್ರಕರಣ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವೇಳೆ ಪತಿ ವಿವಾಹ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಪತ್ನಿಗೆ ತಿಂಗಳಿಗೆ 10 ಸಾವಿರ ಜೀವನಾಂಶ ನಿಗದಿ ಮಾಡಿತ್ತು.
ಆ ಬಳಿಕ ಪತ್ನಿ ಜೀವನಾಂಶ ಹೆಚ್ಚಳ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೀವನ ವೆಚ್ಚ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯ ಮಾಸಿಕ 10 ಸಾವಿರ ಜೀವನಾಂಶ ನಿಗದಿಪಡಿಸಿರುವುದು ಸಮರ್ಪಕವಾಗಿಲ್ಲ. ಆದ್ದರಿಂದ ಮಾಸಿಕ 25 ಸಾವಿರ ಜೀವನಾಂಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಇದೀಗ ಮನವಿಯನ್ನ ಪುರಸ್ಕರಿಸಿದ ನ್ಯಾಯಪೀಠ ಜೀವನಾಂಶ ಹೆಚ್ಚಿಸಿ ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
