14/05/2026

Law Guide Kannada

Online Guide

ಪತ್ನಿಗೆ ಜೀವನಾಂಶ ಕೊಡದಿದ್ರೆ ಬಂಧನ ವಾರೆಂಟ್: ಹೈಕೋರ್ಟ್ ಮೆಟ್ಟಿಲೇರಿದ್ದ ಪತಿಗೆ ಮಹತ್ವದ ತೀರ್ಪಿನ ಶಾಕ್

ಬೆಂಗಳೂರು : ಪತ್ನಿಗೆ ಜೀವನಾಂಶ ಬಾಕಿ ಉಳಿಸಿಕೊಂಡಿದ್ದಕ್ಕೆ ಬಂಧನ ವಾರೆಂಟ್ ಜಾರಿ ಮಾಡಿದ್ದನ್ನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿಗೆ ಇದೀಗ ಉಚ್ಚ ನ್ಯಾಯಾಲಯವೂ ಕೂಡ ಶಾಕ್ ನೀಡಿದೆ.

ನ್ಯಾಯಾಲಯ ನಿಗದಿಪಡಿಸಿದ ಜೀವಾನಾಂಶವನ್ನು ಪತ್ನಿಗೆ ಪಾವತಿ ಮಾಡದ ಪತಿ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಬಹುದಾಗಿದೆ ಎಂದು ಹೇಳಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪತ್ನಿಗೆ ಜೀವನಾಂಶ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸೈಲೇಶ್ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಕೆ.ಮನ್ಮಥ ರಾವ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶದ ಹಣವನ್ನು ಪತ್ನಿಗೆ ಪಾವತಿಸಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಅರ್ಜಿದಾರರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ನ್ಯಾಯಾಲಯದ ಆದೇಶ ಪಾಲಿಸದೆ ಇರುವ ಪತಿಯ ವರ್ತನೆ ಉದ್ದೇಶಪೂರ್ವಕ ಅವಿಧೇಯತೆ ಎಂದು ಅಭಿಪ್ರಾಯ ಪಟ್ಟು ಅರ್ಜಿದಾರರ ವಿರುದ್ಧ ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್ ನ್ನು ಎತ್ತಿಹಿಡಿದಿತು.

ಅರ್ಜಿದಾರ ಪತಿಗೆ ಪ್ರಕರಣ ಸಂಬಂಧ ಕಾರಣ ತಿಳಿಸಲು ಸೂಕ್ತ ಕಾಲಾವಕಾಶ ನೀಡಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯದ ಆದೇಶ ಪಾಲಿಸದೆ, ಜೀವನಾಂಶ ನೀಡದಿರುವುದಕ್ಕೆ ಸೂಕ್ತ ಕಾರಣ ನೀಡಲು ಅವರು ವಿಫಲವಾಗಿದ್ದಾರೆ. ಈ ಅಂಶ ಹಾಗೂ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಕೌಟುಂಬಿಕ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಇದನ್ನು ಸಂವಿಧಾನದ ಪರಿಚ್ಚೇದ 21ರ (ಜೀವಿಸುವ ಮತ್ತು ವೈಯಕ್ತಿಕ ಜೀವನದ ಹಕ್ಕು) ಉಲ್ಲಂಘನೆ ಎನ್ನಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ…
ಮಂಗಳೂರು ಮೂಲದ ಸೈಲೇಶ್ ಕುಮಾರ್ ಮತ್ತು ನಿಶಾ ಎಸ್. ಕುಮಾರ್ 1998ರಲ್ಲಿ ಮದುವೆಯಾಗಿದ್ದು ದಂಪತಿಗೆ 2000ರಲ್ಲಿ ಗಂಡು ಮಗು ಜನಿಸಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಿಶಾ ಅವರು 2014ರಲ್ಲಿ ಮಾಸಿಕ ಐದು ಲಕ್ಷ ರೂ. ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾಸಿಕ 12,750 ರು. ಪಾವತಿಸಲು ಮಧ್ಯಂತರ ಆದೇಶ ನೀಡಿತ್ತು.

ನಂತರ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿ ಮತ್ತು ಮಗನಿಗೆ ವಿವಿಧ ಅವಧಿಗಳಿಗೆ ಅನ್ವಯವಾಗುವಂತೆ ಮಾಸಿಕ 1.80 ಲಕ್ಷದಿಂದ 2.80 ಲಕ್ಷ ರೂ.ವರೆಗೆ ಜೀವನಾಂಶ ಪಾವತಿಸಲು ಹಾಗೂ ಬಾಕಿ ಮೊತ್ತಕ್ಕೆ ಶೇ.7.5ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಸೈಲೇಶ್ ಕುಮಾರ್ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ವಿಚಾರಣಾ ಹಂತದಲ್ಲಿದೆ. ಜೊತೆಗೆ, ಪತ್ನಿ ಕೌಟುಂಬಿಕ ನ್ಯಾಯಾಲಯದ ಆದೇಶ ಪಾಲಿಸಲು ಪತಿಗೆ ನಿರ್ದೇಶಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಲಯ ಶೇ.50ರಷ್ಟು ಪರಿಹಾರ ಠೇವಣಿ ಇಡಬೇಕು ಎಂದು ಸೂಚನೆ ನೀಡಿತ್ತು.

ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯವು ಪತಿ ಸೈಲೇಶ್ ಕುಮಾರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸೈಲೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ಮಾಸಿಕ ಆದಾಯ ಕೇವಲ 42,000 ರು. ಆಗಿದೆ. ಲಕ್ಷಾಂತರ/ ಕೋಟ್ಯಂತರ ರೂಪಾಯಿ ಜೀವನಾಂಶ ನೀಡಲು ಸಾಧ್ಯವಿಲ್ಲ. ಹೊರಡಿಸಿರುವ ಬಂಧನ ವಾರಂಟ್ ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.