07/03/2026

Law Guide Kannada

Online Guide

ಆರೋಪಿಗಳ ಜೊತೆ ವಕೀಲರ ಸಂವಹನಕ್ಕೆ ಕಾನೂನು ರಕ್ಷಣೆ: ಬಹಿರಂಗಪಡಿಸಲು ಒತ್ತಾಯಿಸುವಂತಿಲ್ಲ- ಹೈಕೋರ್ಟ್

ರಾಂಚಿ: ಆರೋಪಿಗಳ ಜೊತೆ ವಕೀಲರು ನಡೆಸುವ ಮಾತುಕತೆ, ಚರ್ಚೆ ಸಂವಹನಕ್ಕೆ ಕಾನೂನು ರಕ್ಷಣೆ ಇದೆ. ಹೀಗಾಗಿ ಇದನ್ನು ಬಹಿರಂಗಪಡಿಸುವಂತೆ ಒತ್ತಾಯಿಸುವಂತಿಲ್ಲಎಂದು ಹೈಕೋರ್ಟ್ ತೀರ್ಪು ನೀಡಿದೆ.

ಪ್ರಕರಣವೊಂದರಲ್ಲಿ ಆರೋಪಿಗಳ ಪರ ವಕಾಲತ್ತು ಮಾಡಿದ್ದ ವಕೀಲರಿಗೆ ರೈಲ್ವೆ ಪೊಲೀಸರು ಸಮನ್ಸ್ ನೀಡಿರುವ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವಕೀಲರು ತಮ್ಮ ಕಕ್ಷಿದಾರರೊಂದಿಗೆ ನಡೆಸುವ ಮಾತುಕತೆ ಮತ್ತು ಚರ್ಚೆಯನ್ನು ಬಹಿರಂಗಪಡಿಸುವಂತಿಲ್ಲ. ಅದಕ್ಕೆ ಕಾನೂನಿನ ರಕ್ಷಣೆ ಇದೆ ಎಂದಿದೆ.

ಅಗ್ನಿವ ಸರ್ಕಾರ್ ವಿರುದ್ಧ ಭಾರತ ಸರ್ಕಾರ ಮತ್ತಿತರರು ನಡುವಿನ ಪ್ರಕರಣ ಇದಾಗಿದ್ದು, ಈ ಕೇಸ್ ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ಸೇನ್ ಅವರಿದ್ದ ನ್ಯಾಯಪೀಠವು, ವಕೀಲರು ತಮ್ಮ ಕಕ್ಷಿದಾರರ ಜೊತೆಗೆ ಸಂವಹನ ನಡೆಸುವ ಸವಲತ್ತು ಪಡೆದುಕೊಂಡಿದ್ದಾರೆ. ಈ ಸಂವಹನ, ಮಾಹಿತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸುವಂತಿಲ್ಲ. ಅದರ ಗೌಪ್ಯತೆಗೆ ಕಾನೂನು ರಕ್ಷಣೆ ಇದೆ ಎಂದು ಸ್ಪಷ್ಟಪಡಿಸಿದೆ.

ಈ ಘಟನೆ ದುರದೃಷ್ಟಕರ ಮತ್ತು ಕಳವಳಕಾರಿ ಎಂದು ಪೊಲೀಸರ ಕ್ರಮದಿಂದ ನಾವು ವಿಚಲಿತರಾಗಿದ್ದೇವೆ ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿತು. ಕಕ್ಷಿದಾರರ ಸ್ಥಿತಿ ಏನೇ ಇರಲಿ, ವಕೀಲರು ಮತ್ತು ಕಕ್ಷಿದಾರರ ನಡುವಿನ ಮಾತುಕತೆ ವಿಶೇಷ ಸಂವಹನವಾಗಿದ್ದು. ಆರೋಪಿಯೊಂದಿಗೆ ತಾವು ಏನು ಸಂವಹನ ನಡೆಸಿದ್ದೇವೆ ಎಂಬುದನ್ನು ವಕೀಲರಿಗೆ ಯಾವುದೇ ತನಿಖಾಧಿಕಾರಿ ತನ್ನ ಮುಂದೆ ಬಹಿರಂಗಪಡಿಸುವಂತೆ ಒತ್ತಾಯಿಸುವಂತಿಲ್ಲ ಎಂದು ನ್ಯಾಯಪೀಠ ಪೊಲೀಸರಿಗೆ ಸೂಚಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.