ಪತ್ನಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್
ಚಾಮರಾಜನಗರ,ಜುಲೈ,29,2025 (www.justkannada.in): ಶೀಲ ಶಂಕಿಸಿ ಪತ್ನಿಯನ್ನ ಕೊಲೆ ಮಾಡಿದ್ದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ತೀರ್ಪು ಪ್ರಕಟಿಸಿದ್ದಾರೆ. ಮುಡಿಗುಂಡ ಗ್ರಾಮದ ಕುಮಾರ್ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ. ಸುಮಾರು 10ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಬೈರಸ್ವಾಮಿ ಎಂಬವವರ ಅಕ್ಕ ಚಿನ್ನಮ್ಮಳನ್ನು ಆರೋಪಿ ಕುಮಾರ್ ಮದುವೆಯಾಗಿದ್ದು ಒಬ್ಬ ಮಗನಿದ್ದನು. ಈ ಮಧ್ಯೆ ಅರೋಪಿ ಕುಮಾರ್ ತನ್ನ ಹೆಂಡತಿ ಚಿನ್ನಮ್ಮಳ ಶೀಲ ಶಂಕಿಸಿ ದೈಹಿಕ ಮಾನಸಿಕ ಕಿರುಕುಳ ನೀಡುತ್ತಿದ್ದನು ಇದರಿಂದ ಬೇಸತ್ತ ಚಿನ್ನಮ್ಮ ಮುಳ್ಳೂರಿಗೆ ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದರು.
ಈ ಮಧ್ಯೆ ಆರೋಪಿ 31/3/2022ರಂದು ಮುಳ್ಳೂರಿಗೆ ಹೋಗಿ ತನ್ನ ಹೆಂಡತಿ ಚಿನ್ನಮ್ಮ ಮತ್ತು ಪುತ್ರ ದರ್ಶನ್ ನನ್ನ ಮನೆಗೆ ವಾಪಸ್ ಕರೆತಂದಿದ್ದನು. ಆದರೆ ತನ್ನ ಹಳೆಯ ಚಾಳಿ ಬಿಡದ ಆರೋಪಿ ಕುಮಾರ್ ಮತ್ತೆ1/4/2022ರಂದು ಶೀಲ ಶಂಕಿಸಿ ಪತ್ನಿ ಚಿನ್ನಮ್ಮಳ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದನು.
ಈ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಕೊಳ್ಳೇಗಾಲ ಪಟ್ಟಣ ಪೋಲಿಸ್ ಠಾಣೆ ಪಿಐ ಶಿವರಾಜ್ ಅರ್ ಮುಧೋಳ್ ಅವರು ತನಿಖೆ ನಡೆಸಿ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿ, ನ್ಯಾಯಾಲಯವು ಈ ಪ್ರಕರಣದಲ್ಲಿ ಆರೋಪಿ ಕುಮಾರ್ ಬಿಗೆ ಐಪಿಸಿ ಕಾಯ್ದೆ ಕಲಂ 498(ಎ) ರಡಿ 1 ವರ್ಷ ಸೆರೆವಾಸ 1 ಸಾವಿರ ರೂ ದಂಡ, ಐಪಿಸಿ ಕಲಂ: 302ರಡಿ ಜೀವಾವಧಿ ಸೆರೆವಾಸ & ಮತ್ತು ರೂ.5,000/-ದಂಡ ವಿಧಿಸಿ ನ್ಯಾಯಾಧೀಶ ಟಿ.ಸಿ ಶ್ರೀಕಾಂತ್ ಆದೇಶಿಸಿದ್ದಾರೆ. ಮಗ ದರ್ಶನ್ ಮೈನರ್ ಆಗಿದ್ದು, ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಸೂಕ್ತ ಪರಿಹಾರಕ್ಕೆ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ಮತ್ತು. ಸಿ.ಬಿ ಗಿರೀಶ್ ಅವರು ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
