28/05/2026

Law Guide Kannada

Online Guide

ಕ್ರೀಡಾಕೂಟದ ವೇಳೆ ಸರ್ಕಾರಿ ನೌಕರನ ದುರಂತ ಸಾವು: ಸಾವಿಗೆ ಕಾರಣವಾಯ್ತಾ ವಿವಾದಿತ ನಿರ್ಣಯ?

ಬೆಂಗಳೂರು: ಬೆಂಗಳೂರು ನೌಕರರ ಕ್ರೀಡಾಕೂಟ ದುರಂತ ಘಟನೆಯೊಂದು ನಡೆದಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದು ನೌಕರ ಸಮುದಾಯವನ್ನು ತೀವ್ರ ದುಃಖದ ಮಡುವಿಗೆ ತಳ್ಳಿದ್ದು, ಸ್ಪರ್ಧಾಳುಗಳ ಅರ್ಹತೆಯ ಕುರಿತು ಸಂಘವು ತೆಗೆದುಕೊಂಡ ವಿವಾದಾತ್ಮಕ ನಿರ್ಣಯವೇ ಈ ಸಾವಿಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಈ ಬಗ್ಗೆ ಸಮಗ್ರ ತನಿಖೆಗೆ ನೌಕರರು ಆಗ್ರಹಿಸಿದ್ದಾರೆ.

ದಿನಾಂಕ 24.05.2026 ರಂದು ಈ ದುರ್ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ 55 ವರ್ಷ ಪ್ರಾಯದ ದಿಲೀಪ್ ಬಿರಾದಾರ ಎಂಬುವವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ಧೆಯ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಾಮಾನ್ಯ ಸರಕಾರಿ ನೌಕರರಿಗಾಗಿ ರೂಪಿಸಲಾದ ಕ್ರೀಡಾಕೂಟಗಳಲ್ಲಿ ವೃತ್ತಿಪರ ದೈಹಿಕ ಶಿಕ್ಷಣ (PE) ಶಿಕ್ಷಕರು ಹಾಗೂ ಸಮವಸ್ತ್ರಧಾರಿ ಸಿಬ್ಬಂದಿಯನ್ನು ಸೇರಿಸಿರುವ ಸಂಘದ ಇತ್ತೀಚಿನ ವಿವಾದಾತ್ಮಕ ನೀತಿಯೇ ಈ ದುರಂತಕ್ಕೆ ಕಾರಣವಾಗಿರುವುದು ಎಂಬ ಆರೋಪ ಕೇಳಿ ಬಂದಿದೆ.

ಗೋಲ್ಡನ್ ಅವರ್ ನಲ್ಲಿ ಸಿಗಲಿಲ್ಲ ನೆರವು ..!
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯಂತೆ, ದೈಹಿಕವಾಗಿ ಹೆಚ್ಚು ಕ್ಷಮತೆಯುಳ್ಳ, ಯುವ ಹಾಗೂ ವೃತ್ತಿಪರ ತರಬೇತಿ ಪಡೆದ ಸ್ಪರ್ಧಿಗಳೊಂದಿಗೆ ಸ್ಪರ್ಧಾತ್ಮಕವಾಗಿ ಉಳಿಯಬೇಕೆಂಬ ಒತ್ತಡದಿಂದ ದಿಲೀಪ್ ಬಿರಾದಾರ ಅವರು ತಮ್ಮ ದೈಹಿಕ ಮಿತಿಯನ್ನು ಮೀರಿಸಿ ಪ್ರಯತ್ನಿಸಿದ್ದರು. ಹೀಗಾಗಿ ಸ್ಪರ್ಧೆಯ ಮಧ್ಯದಲ್ಲೇ ಅವರಿಗೆ ತೀವು ಹೃದಯಾಘಾತವಾಗಿತ್ತು. ಆದರೆ ಕ್ರೀಡಾಂಗಣದಲ್ಲಿ ತುರ್ತು ವೈದ್ಯಕೀಯ ಸೌಲಭ್ಯಗಳಾಗಲಿ, ತಕ್ಷಣದ ಪ್ರಧಮ ಚಿಕಿತ್ಸೆ ವ್ಯವಸ್ಥೆಯಾಗಲಿ ಲಭ್ಯವಿರಲಿಲ್ಲ. ಜೀವ ರಕ್ಷಕ “ಗೋಲ್ಡನ್ ಅವರ್* ಸಮಯದಲ್ಲಿ ಅಗತ್ಯ ಚಿಕಿತ್ಸೆ ದೊರೆಯದ ಕಾರಣ ಈ ಹಿರಿಯ ಶಿಕ್ಷಕರ ಜೀವ ಉಳಿಯಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಅಸಮಾನ ಸ್ಪರ್ಧೆಗೆ ತೀವ್ರ ಖಂಡನೆ
ಕಳೆದ ಎರಡು ವರ್ಷಗಳಿಂದ ಸಾಮಾನ್ಯ ಸರಕಾರಿ ನೌಕರರು ಕೆಳಕಂಡ ವರ್ಗಗಳನ್ನು ಕ್ರೀಡಾಕೂಟದಲ್ಲಿ ಸೇರಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು.
ಅರಣ್ಯ ಅಬಕಾರಿ ಹಾಗೂ ಕಾರಾಗೃಹ ಇಲಾಖೆಗಳ ಸಿಬ್ಬಂದಿ, ಇವರು ಕಡ್ಡಾಯ ದೈಹಿಕ ಕ್ಷಮತಾ ಪರೀಕ್ಷೆ ಮತ್ತು ಕಠಿಣ ತರಬೇತಿಯನ್ನು ಪಡೆದಿರುತ್ತಾರೆ. ಹಾಗೆಯೇ ದೈಹಿಕ ಶಿಕ್ಷಣ ಶಿಕ್ಷಕರು: ವೃತ್ತಿಪರ ಕ್ರೀಡಾಪಟುಗಳು, ತರಬೇತುದಾರರು ಮತ್ತು ಕೋಚ್ಗಳು.

ಸಾಮಾನ್ಯ ಲಿಪಿತ ಸಿಬ್ಬಂದಿ, ಇಲಾಖಾ ನೌಕರರು ಹಾಗೂ ಶಿಕ್ಷಕರು ಇಂತಹ ವೃತ್ತಿಪರ ತರಬೇತಿ ಪಡೆದವರೊಂದಿಗೆ ಸಮಾನವಾಗಿ ಸ್ಪರ್ಧಿಸಲು ಸಾಧ್ಯವಿಲ್ಲ. ಸಂಘದ ಈ ನೀತಿಯಿಂದ ಸಾಮಾನ್ಯ ನೌಕರರು ವಿಜೇತರಾಗುವ ಅವಕಾಶದಿಂದ ವಂಚಿತರಾಗಿದ್ದಾರೆ. ಇಲಾಖೆಯ ಗೌರವ ಉಳಿಸಬೇಕೆಂಬ ಒತ್ತಡದಿಂದ ದಿಲೀಪ್ ಅವರಂತಹ ಹಿರಿಯ ಅಧಿಕಾರಿಗಳು ಅತಿಯಾಗಿ ಶ್ರಮಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೌಕರರು ಆರೋಪಿಸುತ್ತಿದ್ದಾರೆ.

ಈ ನಿಯಮವನ್ನು ರಾಜ್ಯದಾದ್ಯಂತ ನೌಕರರು ಸಂಪೂರ್ಣ ವಿಫಲ ನೀತಿಯಾಗಿ ಪರಿಗಣಿಸಿ, ಅದನ್ನು ತಕ್ಷಣ ಮತ್ತು ಯಾವುದೇ ಷರತ್ತಿಲ್ಲದೆ ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ.
ಆರ್ಥಿಕ ಲಾಭಾಸಕ್ತಿ ಮತ್ತು ಭ್ರಷ್ಟಾಚಾರದ ಆರೋಪಗಳು ಸಂಘದ ಒಳವಲಯದ ಆರೋಪಗಳ ಪ್ರಕಾರ, ಸಾವಿರಾರು ಸಮವಸ್ತ್ರಧಾರಿ ಸಿಬ್ಬಂದಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಸೇರಿಸಿರುವ ಉದ್ದೇಶ ಕ್ರೀಡಾ ಮನೋಭಾವ ಬೆಳೆಸುವುದಲ್ಲ. ಬದಲಾಗಿ, ಭಾಗವಹಿಸುವವರ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹೆಚ್ಚಿನ ಅನುದಾನ ಪಡೆಯುವ ಉದ್ದೇಶ ಇದಾಗಿತ್ತು ಎನ್ನಲಾಗಿದೆ. ಆ ಅನುದಾನಗಳ ದುರುಪಯೋಗ ನಡೆದಿರುವುದಾಗಿ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ರಾಜ್ಯ ಸರಕಾರಿ ನೌಕರರ ಇಲಾಖಾ ಸಂಘಟನೆಗಳ ಪೈಕಿ ಸುಮಾರು 2 ಲಕ್ಷದಷ್ಟು ನೌಕರರನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಘಟಕಗಳು ಮತ್ತು ಇಲಾಖಾ ನೌಕರ ಸಂಘಗಳು ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

ವೃತ್ತಿಪರ ಕ್ರೀಡಾ ಸಿಬ್ಬಂದಿ ಮತ್ತು ಸಮವಸ್ತ್ರಧಾರಿ ಇಲಾಖೆಗಳ ಭಾಗವಹಿಸುವಿಕೆಯನ್ನು ರದ್ದು ಪಡಿಸಿ, ಸಾಮಾನ್ಯ ನಾಗರಿಕ ನೌಕರರ ಕ್ರೀಡಾಕೂಟವನ್ನು ಪುನಃ ಸ್ಥಾಪಿಸಬೇಕು.
ಮೃತ ಮುಖ್ಯೋಪಾಧ್ಯಾಯರ ಕುಟುಂಬಕ್ಕೆ ಸಂಘದ ನಿಧಿಯಿಂದ ತಕ್ಷಣ ಸಮರ್ಪಕ ಪರಿಹಾರಧನ ನೀಡಬೇಕು.

ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ಹಾಗೂ ಜವಾಬ್ದಾರರನ್ನು ಹೊಣೆಗಾರರನ್ನಾಗಿಸಲು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಘಟಕಗಳು ಸಮನ್ವಯ ಸಾಧಿಸುವಂತೆ ಮನವಿ ಮಾಡಲಾಗಿದೆ.

ಸುರಕ್ಷತಾ ವೈಫಲ್ಯದಿಂದ ಸರಕಾರಿ ನೌಕರರೊಬ್ಬರ ಜೀವ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರು ತಕ್ಷಣ ರಾಜೀನಾಮೆ ನೀಡಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.