16/07/2026

Law Guide Kannada

Online Guide

ಅಶ್ಲೀಲ ದೃಶ್ಯ ಪ್ರಸಾರ ತಡೆಗೆ ಕ್ರಮ: ವ್ಯಕ್ತಿ ಘನತೆ, ಖಾಸಗಿತನ’ದ ರಕ್ಷಣೆ: ಹೊಸ ಮಾರ್ಗಸೂಚಿ ಪ್ರಕಟಿಸಿದ ಪೊಲೀಸ್ ಇಲಾಖೆ.

ಬೆಂಗಳೂರು: ಯಾವುದೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವ ದೃಶ್ಯಗಳನ್ನು, ವಿಡಿಯೊ, ಪೋಟೋಗಳನ್ನು ಅವರ ಅನುಮತಿಯೇ ಇಲ್ಲದೆ ಹಂಚಿಕೊಂಡು ವಿಕೃತ ಆನಂದ ಪಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಇಂಥ ಸೈಬರ್ ದೌರ್ಜನ್ಯಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ. ನೈತಿಕತೆಯ ಗಂಭೀರ ಅಧಃಪತನಕ್ಕೆ ದಾರಿ ಮಾಡಿಕೊಟ್ಟಿದೆ. ಹಾಗಾದರೇ ಅಶ್ಲೀಲ ದೃಶ್ಯ ಪ್ರಸಾರ ತಡೆಗೆ, ವ್ಯಕ್ತಿಯ ಘನತೆ, ಖಾಸಗಿತನ’ದ ರಕ್ಷಣೆಗೆ ಪೊಲೀಸರ ನಿರ್ಣಾಯಕ ಪಾತ್ರವೇನು. ಅವರು ಕೈಗೋಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.

ಯಾವುದೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವ ದೃಶ್ಯಗಳನ್ನು, ವಿಡಿಯೊ, ಪೋಟೋಗಳನ್ನು ಅವರ ಅನುಮತಿಯೇ ಇಲ್ಲದೆ ಹಂಚಿಕೊಂಡು ವ್ಯಕ್ತಿ ಘನತೆ, ಖಾಸಗಿತನಕ್ಕೆ ಧಕ್ಕೆ ತರುವುದು ಅಪರಾಧ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸ್ ಇಲಾಖೆ ಇದೀಗ ಈ ಬಗ್ಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಅನುಮತಿಯಿಲ್ಲದೇ ‘ಆಪ್ತ’ ಚಿತ್ರಗಳು ಹಾಗೂ ವಿಡಿಯೊಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಸಂಬಂಧಿಸಿದಂತೆ ಪ್ರಕರಣಗಳಿಗೆ ತಕ್ಷಣವೇ ಎಫ್ ಐಆರ್ ದಾಖಲಿಸಬೇಕು. ಇಂತಹ ಘಟನೆಗಳು ವರದಿಯಾದಾಗ ಪೊಲೀಸರು, ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳನ್ನೂ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಅಶ್ಲೀಲ, ಆಪ್ತ ಸನ್ನಿವೇಶಗಳ ಫೋಟೋ ತೆಗೆಯಲು ಇಲ್ಲವೇ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಸಂತ್ರಸ್ತರ ಅನುಮತಿ ಇತ್ತು ಎಂಬ ಕಾರಣಕ್ಕೆ, ದೂರುಗಳು ಬಂದಾಗ ಅಂತಹ ಪ್ರಕರಣಗಳನ್ನು ದಾಖಲಿಸಲು ಪೊಲೀಸರು ನಿರಾಕರಣೆ ಮಾಡುತ್ತಿರುವುದು ಅಥವಾ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿರುವುದು ಕಂಡುಬಂದಿತ್ತು. ಸಂತ್ರಸ್ತರು ಮೊದಲು ವಿಡಿಯೊ ಚಿತ್ರೀಕರಿಸಲು ಒಪ್ಪಿಗೆ ನೀಡಿದ್ದರು ಎನ್ನುವ ಕಾರಣದ ಮೇಲೆ ದೂರು ಸ್ವೀಕರಿಸದೇ ಇರುವುದು ಪೊಲೀಸರ ಗಂಭೀರ ಕರ್ತವ್ಯ ಲೋಪವಾಗುತ್ತದೆ. ನಿಯಮಾನುಸಾರ ಚಿತ್ರೀಕರಣಕ್ಕೆ ನೀಡಿದ್ದ ಒಪ್ಪಿಗೆಗೂ ಮತ್ತು ಇತರರಿಗೆ ಹಂಚಿಕೆ/ಪ್ರಸಾರಕ್ಕೆ ನೀಡುವ ಒಪ್ಪಿಗೆಗೂ ವ್ಯತ್ಯಾಸ ಇದೆ. ಮೊದಲನೆಯದಕ್ಕೆ ಒಪ್ಪಿಗೆ ಇದ್ದರೂ ನಂತರದ ಹಂಚಿಕೆಗೆ ಒಪ್ಪಿಗೆ ಇಲ್ಲದಿದ್ದರೂ ಪ್ರಚಾರಪಡಿಸಿದರೆ ಅದು ಅಪರಾಧವಾಗುತ್ತದೆ. ಈ ಸೂಕ್ಷ್ಮ ಎಳೆಯನ್ನು ಅಂದಾಜಿಸುವಲ್ಲಿ ಪೊಲೀಸರು ವಿಫಲರಾಗುತ್ತಿದ್ದರು. ಇದರಿಂದ ಎಷ್ಟೋ ಸಂತ್ರಸ್ತರು ನರಕಯಾತನೆ ಅನುಭವಿಸಿದ್ರೂ ಇದೆ.

ನಿಯಮಗಳ ಪ್ರಕಾರ, ಸಂತ್ರಸ್ತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಬಾರದು. ಕಾದು ನೋಡೋಣ, ವಿಚಾರಣೆ ಬಳಿಕ ಎಫ್ಐಆರ್ ದಾಖಲಿಸೋಣ ಎಂದು ಪೊಲೀಸರ ಉದಾಸೀನ ಜಾಯಮಾನವೂ ಕರ್ತವ್ಯ ಲೋಪ ಮತ್ತು ಅಪರಾಧ. ಒಪ್ಪಿಗೆಯು ನಂತರದ ಅನುಮತಿಯಿಲ್ಲದ ಪ್ರಸಾರಕ್ಕೆ ರಕ್ಷಣೆ ಆಗುವುದಿಲ್ಲ. ಆಪ್ತ ವಿಷಯಗಳನ್ನು ಬಳಸಿ ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ, ಸುಲಿಗೆ ನಡೆಸಿದರೆ ಭಾರತೀಯ ನ್ಯಾಯ ಸಂಹಿತೆ 2023ರ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ಸೆಕ್ಷನ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಜತೆಗೆ ಅಳವಡಿಸಿ ಪ್ರಕರಣ ದಾಖಲು ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ  ಅಪರಾಧವು ಸ್ಥಳೀಯ ಠಾಣಾ ವ್ಯಾಪ್ತಿಯ ಹೊರೆಗೆ ನಡೆದಿದ್ದರೆ, ಭಾರತೀಯ ನಾಗರಿಕ ಸುರಕ್ಕಾ ಸಂಹಿತೆಯ ಪ್ರಕಾರ ‘ಝೀರೊ ಎಫ್ ಐಆರ್ ದಾಖಲಿಸಿ ತಕ್ಷಣವೇ ಸಂಬಂಧಿತ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಬೇಕು.

ಶಿಕ್ಷೆಯ ಪ್ರಮಾಣವೇನು?
ಒಪ್ಪಿಗೆ ಇಲ್ಲದೆ ಖಾಸಗಿ ದೃಶ್ಯಗಳ ಸೆರೆ ಹಿಡಿಯುವುದು, ಸಾಮಾಜಿಕ ಜಾಲದಲ್ಲಿ ಪ್ರಸಾರ ಮಾಡುವುದು ಮತ್ತು ಅಂತಹ ದೃಶ್ಯಗಳ ಮರುಪ್ರಸಾರ (ಫಾರ್ವರ್ಡ್ ಮಾಡಿದರೂ ಅದು ಅಪರಾಧ. ಈ ಅಪರಾಧಕ್ಕೆ ಗರಿಷ್ಠ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ 22 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ.

ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಅಥವಾ ಕಾಮಪ್ರಚೋದಕ ವಿಷಯ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧ. ಮೊದಲ ಅಪರಾಧಕ್ಕೆ ಗರಿಷ್ಠ 3 ವರ್ಷಗಳ ಶಿಕ್ಷೆ, ಹಾಗೂ ರೂ.5 ಲಕ್ಷದವರೆಗೆ ದಂಡ. ಪುನರಾವರ್ತಿತ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಶಿಕ್ಷೆ ಹಾಗೂ ರೂ. 10 ಲಕ್ಷ ದಂಡವಿದೆ.

ಭಾರತೀಯ ನ್ಯಾಯಸಂಹಿತ ಹಾಗೂ ಮಾಹಿತಿ ತಂತ್ರ/ಜ್ಞಾನ ಕಾಯ್ದೆಯ ವ್ಯಾಪ್ತಿಗೆ ಬರುವ ಈ ಪ್ರಕರಣಗಳು ‘ಸಂಜ್ಞೆಯ ಅಪರಾಧ’ಗಳಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಯಾವುದೇ ಗೊಂದಲವಿಲ್ಲ. ಸಂಜ್ಞೆಯ ಅಪರಾಧದ ಮಾಹಿತಿ ದೊರೆತಾಗ ಎಫ್ಐಆರ್ ದಾಖಲಿಸಲೇಬೇಕು. ಇದು ಪ್ರತಿ ಪೊಲೀಸ್ ಅಧಿಕಾರಿಗಳಿಗೂ ಗೊತ್ತಿರಬೇಕಾದ ಮೂಲಭೂತ ವಿಚಾರ. ದೂರು ದಾಖಲಿಸಿಕೊಳ್ಳುವುದನ್ನು ನಿರಾಕರಿಸುವುದು ಅಥವಾ ಸಂತ್ರಸ್ತರು ಠಾಣೆಯಿಂದ ಠಾಣೆಗೆ ಅಲೆಸುವುದು. ಮತ್ತು ಅಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು ಅಸೂಕ್ಷ್ಮ ವರ್ತನೆ ಮಾತ್ರವಲ್ಲ. ಗಂಭೀರ ಕರ್ತವ್ಯಲೋಪ ಕೂಡ ಆಗಿದೆ. ಇಂತಹ ಅಪರಾಧಗಳ ದಾಖಲಿಸುವಲ್ಲಿ ಪೊಲೀಸರ ನಿಷ್ಕ್ರಿಯತೆ, ಉದಾಸೀನತೆ ಹಾಗೂ ಮುಂದೂಡುವ ಪವ್ಯತ್ತಿಯಿಂದಾಗುವ ಪರಿಣಾಮಗಳು ಗಂಭೀರವಾಗಿರಬಹುದು. ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಫಾಸಿ ಉಂಟುಮಾಡಬಹುದು. ಸಮ್ಮತಿಯಿಲ್ಲದೆ ಬಹಿರಂಗಪಡಿಸಲಾದ ಖಾಸಗಿ ಕ್ಷಣಗಳ ಒಂದು ಛಾಯಾಚಿತ್ರ ಅಥವಾ ವಿಡಿಯೊ ವ್ಯಕ್ತಿಯ ಗೌರವ, ವೃತ್ತಿ ಹಾಗೂ ಸಂಬಂಧಗಳನ್ನು, ಹಾಳುಮಾಡಬಲ್ಲದು.

ಸಂತ್ರಸ್ತರು ಅವಮಾನ, ಮಾನಸಿಕ ಒತ್ತಡ, ಸೈಬರ್ ಸ್ಯಾಕಿಂಗ್ ಮತ್ತು ಬ್ಲಾಕ್ ಮೇಲ್ ಗೆ ಒಳಗಾಗುವ ಸಾಧ್ಯತೆಯೂ ಇದೆ. ಡೀಪ್ ಫೇಕ್ ಹಾಗೂ ಡಿಜಿಟಲ್ ತಂತ್ರಜ್ಞಾನದಿಂದ ಮಾರ್ಪಡಿಸಲಾದ ವಿಷಯಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಬಹುದು; ಘಟಿಸದ ದೃಶ್ಯಗಳನ್ನು ದುರುದ್ದೇಶದಿಂದ ಸೃಷ್ಟಿಸುವ ಘಟನೆಗಳಲ್ಲಿ ಸಂತ್ರಸ್ತರು ಬಲಿಪಶುಗಳಾಗಬಹುದು. ಸಾಮಾಜಿಕ ಜಾಲತಾಣಗಳ ಕಾಲಘಟ್ಟದಲ್ಲಿ ಒಂದು ಪೋಸ್ಟ್ ಪ್ರಕಟಗೊಂಡ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರನ್ನು ತಲಪಬಲ್ಲದು. ಅದರಿಂದ ಉಂಟಾಗುವ ಹಾನಿಯನ್ನು ಸರಿಪಡಿಸುವುದು ಅಸಾಧ್ಯ.

ಆದ್ದರಿಂದ, ದೂರು ಸ್ವೀಕರಿಸಿದ ಕ್ಷಣದಿಂದಲೇ ಪೊಲೀಸರು ಸಂಬಂಧಿಸಿದ ವೇದಿಕೆ(ಫೇಸ್ಬುಕ್, ಇಸ್ರೋಗ್ರಾಮ್ ಇತ್ಯಾದಿ)ಗಳನ್ನು ಸಂಪರ್ಕಿಸಿ, ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಆಗಬಹುದಾದ ಪ್ರತಿ ನಿಮಿಷದ ವಿಳಂಬ ಹಾನಿಕಾರಕ ವಿಷಯವು ಜನರನ್ನು ವ್ಯಾಪಕವಾಗಿ ತಲುಪುವಂತಾಗುತ್ತದೆ. ಪ್ರಮುಖ ಸಾಮಾಜಿಕ ಜಾಲತಾಣಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ದಿನದ ಎಲ್ಲ ಸಮಯದಲ್ಲೂ ಸಮನ್ವಯ ಹೊಂದುವುದಕ್ಕಾಗಿ ವಿಶೇಷ ಸಂಪರ್ಕಾಧಿಕಾರಿಗಳನ್ನು ರಾಜ್ಯಗಳಲ್ಲಿ ನೇಮಿಸುವುದು ಅಗತ್ಯ. ಡಿಜಿಟಲ್ ಕಾಲಘಟ್ಟದಲ್ಲಿ ವ್ಯಕ್ತಿಯ ಖಾಸಗಿತನ ಮತ್ತು ಘನತೆಯನ್ನು ರಕ್ಷಿಸಲು ಪೊಲೀಸರ ಕಾನೂನು ಕ್ರಮ ಮಾತ್ರವಲ್ಲ, ತಂತ್ರಜ್ಞಾನ ಸಂಸ್ಥೆಗಳ ಸಮಾನ ವೇಗದ ಸಹಕಾರವೂ ಅಗತ್ಯವಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.