ಕಲಾಪಕ್ಕೆ ಅಡ್ಡಿ ಸಿಜೆಐಗೆ ನಿಂದನೆ: ಇಬ್ಬರು ಕಾನೂನು ವಿದ್ಯಾರ್ಥಿಗಳು ಅರೆಸ್ಟ್
ನವದೆಹಲಿ: ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಯುತ್ತಿದ್ದ ವೇಳೆ ಮುಖ್ಯ ನ್ಯಾಯಮೂರ್ತಿಯನ್ನು ನಿಂದಿಸಿ, ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಜುಲೈ 10ರಂದು ಆರೋಪಿಗಳು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಗದ್ದಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದರು. ಜತೆಗೆ, ಭದ್ರತಾ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದರು ಎಂದು ದೆಹಲಿ ಪೊಲೀಸರು ವಿವರಿಸಿದ್ದಾರೆ.
ಲಖನೌ ವಿಶ್ವವಿದ್ಯಾಲಯದ ತೃತೀಯ ವರ್ಷದ ಎಲ್ಎಲ್ಬಿ ವಿದ್ಯಾರ್ಥಿ, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ನಿವಾಸಿ ಪ್ರಬಲ್ ಪ್ರತಾಪ್ ಸಿಂಗ್ ಹಾಗೂ ರಾಯ್ ಬರೇಲಿಯ ದ್ವಿತೀಯ ವರ್ಷದ ಕಾನೂನು ವಿದ್ಯಾರ್ಥಿ ಚಂದರ್ ಭಾನ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಸುಪ್ರೀಂ ಕೋರ್ಟ್ ಪೀಠದ ಮುಂದೆ ವಿಚಾರಣೆ ನಡೆಯುತ್ತಿದ್ದಾಗ, ಆರೋಪಿಗಳಲ್ಲಿ ಒಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ನಿಂದನೀಯ ಭಾಷೆ ಬಳಸಿ, ನ್ಯಾಯಾಲಯದ ಕೋಣೆಯೊಳಗೆ ಕಾಗದಗಳನ್ನು ಎಸೆದು, ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜುಲೈ 10 ರಂದು ನ್ಯಾಯಾಲಯ ಸಂಖ್ಯೆ 13 ರ ಒಳಗೆ ಎಸ್ಎಲ್ಪಿ ಸಂಖ್ಯೆ 31367/2026, ಪ್ರಬಲ್ ಪ್ರತಾಪ್ ಮತ್ತು ಇನ್ನೊಬ್ಬರು vs ಉತ್ತರ ಪ್ರದೇಶ ರಾಜ್ಯ ಪ್ರಕರಣದ ವಿಚಾರಣೆಯ ಸಮಯದಲ್ಲಿ ನಡೆದ ಘಟನೆಯ ಕುರಿತು ಸುಪ್ರೀಂ ಕೋರ್ಟ್ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೋರ್ಟ್ನಲ್ಲಿ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರ ಪ್ರತಾಪ್ ಸಿಂಗ್, ನ್ಯಾಯಮೂರ್ತಿಯನ್ನು ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿದ್ದರು. ಅಲ್ಲದೆ, ಕರಪತ್ರಗಳನ್ನು ಎಸೆದು ಕಲಾಪಕ್ಕೆ ಅಡ್ಡಿಪಡಿಸಿದ್ದರು. ಇಬ್ಬರು ಆರೋಪಿಗಳ ವಿರುದ್ದ (ಬಿಎನ್ಎಸ್) ಸೆಕ್ಷನ್ 132, 221, 224 ಮತ್ತು 3(5) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕೋರ್ಟ್ ನಲ್ಲಿ ನಡೆದ ಘಟನೆ ಪೂರ್ವನಿಯೋಜಿತವೇ ಅಥವಾ ಇದರ ಹಿಂದೆ ಯಾವುದಾದರೂ ಪಿತೂರಿ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
