14/07/2026

Law Guide Kannada

Online Guide

ಅಪಘಾತದಲ್ಲಿ ಶಾಶ್ವತ ಪಾರ್ಶ್ವವಾಯುಗೆ ತುತ್ತಾದ ಬಾಲಕಿಗೆ ಗರಿಷ್ಟ ಪರಿಹಾರ: ಸುಪ್ರೀಂ ಆದೇಶ

ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಶಾಶ್ವತವಾಗಿ ಪಾರ್ಶ್ವವಾಯುವಿಗೆ ತುತ್ತಾದ ಬಾಲಕಿಗೆ ನೀಡುವ ಮೋಟಾರು ವಾಹನ ಪರಿಹಾರವನ್ನು 87 ಲಕ್ಷ ರೂ.ಗೆ ಹೆಚ್ಚಳ ಮಾಡಿ ಸುಪ್ರೀಂಕೋರ್ಟ್ ಆದೇಶಿಸಿದೆ.

13 ವರ್ಷದ ಬಾಲಕಿಯ ಅಂಗವೈಕಲ್ಯವನ್ನು ಶೇ 100ರಷ್ಟು ಎಂದು ಪರಿಗಣಿಸಿ, ಆಕೆಯ ಜೀವಮಾನದ ಆರೈಕೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಪರಿಹಾರ ಮೊತ್ತವನ್ನು ಹೆಚ್ಚುವರಿ ಬಡ್ಡಿಯೊಂದಿಗೆ ರೂ. 87,15,137ಕ್ಕೆ ಹೆಚ್ಚಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎನ್. ಕೋಟೀಸ್ಟರ ಸಿಂಗ್, ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ ಆದೇಶ ಹೊರಡಿಸಿದೆ. ಅಪಘಾತ ನಡೆದು 9 ವರ್ಷಗಳ ನಂತರ ಈ ಮಹತ್ವದ ಆದೇಶ ಹೊರಬಿದ್ದಿದೆ.

2018ರ ಜೂನ್ ನಲ್ಲಿ ಐದು ವರ್ಷದ ಬಾಲಕಿ ಚೇತನಾ ಶರ್ಮಾ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ, ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದಾಗಿ ಕಾರು ಅಪಘಾತಕ್ಕೀಡಾಗಿತ್ತು. ಡಿಕ್ಕಿಯ ರಭಸಕ್ಕೆ ಬಾಲಕಿಯ ಬೆನ್ನು ಮೂಳೆಗೆ ಗಂಭೀರ ಗಾಯವಾಗಿ, ಶಾಶ್ವತ ಪಾರ್ಶ್ವವಾಯುವಿಗೆ ಒಳಗಾಗಿದ್ದಳು. ವೈದ್ಯರು ಬಾಲಕಿಗೆ ಜೀವನಪೂರ್ತಿ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ದೃಢಪಡಿಸಿದ್ದರು.

ಆರಂಭದಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು ರೂ. 14.84 ಲಕ್ಷ ಪರಿಹಾರ ನೀಡಿತ್ತು. ನಂತರ ಹೈಕೋರ್ಟ್ ಮೆಟ್ಟಿಲೇರಿದ ಬಳಿಕ ಹೈಕೋರ್ಟ್ ಈ ಮೊತ್ತವನ್ನು ರೂ. 6 ಲಕ್ಷ ಹೆಚ್ಚಿಸಿತ್ತು. ಇದಾದ ಬಳಿಕ ಹೆಚ್ಚುವರಿ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ಗೆ ಮೊರೆ ಹೋಗಿದ್ದರು.

ಬೇಬಿ ಸಾಕ್ಷಿ ಗ್ರಿಯೊಲಾ ವಿರುದ್ಧ ಮಂಜೂರ್ ಅಹ್ಮದ್ ಸೈಮನ್ (2024) ಪ್ರಕರಣದಲ್ಲಿ ಇದೇ ರೀತಿ ಪಾರ್ಶ್ವವಾಯುವಿಗೆ ಒಳಗಾದ ಮಗುವಿಗೆ ಕೋರ್ಟ್ ಪರಿಹಾರ ನಿಗದಿಪಡಿಸುವಾಗ ಪರಿಗಣಿಸಿದ ಅಂಶವನ್ನು ಬಾಲಕಿ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಬಾಲಕಿಯ ಅಂಗವೈಕಲ್ಯವನ್ನು ಶೇ 100ರಷ್ಟು ಎಂದು ಪರಿಗಣಿಸಬೇಕು ಎಂಬ ಮನವಿ ಮಾಡಿದರು.

ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠವು, ಪರಿಹಾರವನ್ನು ಎರಡು ತಿಂಗಳೊಳಗೆ ಪಾವತಿಸಬೇಕು ಎಂದು ನಿರ್ದೇಶಿಸಿತು. ಈ ತೀರ್ಪು ಬಾಲಕಿಯ ಕುಟುಂಬಕ್ಕೆ ಅಗತ್ಯವಾದ ಪರಿಹಾರ ನೀಡುತ್ತದೆ ಮತ್ತು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುವ ಅಪಘಾತ ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಬಲವಾದ ಮಾನದಂಡ ವನ್ನು ನಿಗದಿಪಡಿಸುತ್ತದೆ ಎಂದೂ ನ್ಯಾಯಪೀಠ ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.