ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ: ಶಿಕ್ಷಣ ಸಂಸ್ಥೆಯ ‘ಮೌನ’ ವರ್ತನೆ ಶಾಸನಬದ್ಧ ಅಪರಾಧ- ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು: ಹಾಸ್ಟೆಲ್ ವೊಂದರಲ್ಲಿ ಬಾಲಕನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಆ ಶಿಕ್ಷಣ ಸಂಸ್ಥೆಯು ಮೌನವಾಗಿ ವರ್ತಿಸಿರುವುದು ಶಾಸನಬದ್ಧ ಅಪರಾಧವಾಗಿದೆ. ಪೋಕ್ಸೋ ಪ್ರಕರಣ ವರದಿ ಮಾಡದಿದ್ದರೂ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಖಡಕ್ ಸಂದೇಶ ನೀಡಿದೆ.
ಹಾಸ್ಟೆಲ್ ವೊಂದರಲ್ಲಿ ಬಾಲಕನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಉಡುಪಿ ಜಿಲ್ಲೆಯ ಶಾಲೆಯ ಮುಖ್ಯ ಶಿಕ್ಷಕ, ವಾರ್ಡನ್ ಮತ್ತು ಶಾಲೆಯ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಹೈಕೋರ್ಟ್ ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಆದರೆ ಈ ಕ್ರಿಮಿನಲ್ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು , ”ಶಿಕ್ಷಣ ಸಂಸ್ಥೆ ಎಷ್ಟೇ ದೊಡ್ಡದಿರಲಿ ಅಥವಾ ಚಿಕ್ಕದಿರಲಿ, ಸಾಮಾನ್ಯ ಹಿನ್ನೆಲೆಯ ಮಕ್ಕಳಿಗಾಗಿರಲಿ ಅಥವಾ ಸಮಾಜದ ಅತ್ಯಂತ ಸವಲತ್ತುಳ್ಳ ವರ್ಗದವರಿಗೇ ಆಗಿರಲಿ, ಯಾವುದಾದರೂ ಅದು ಪೋಷಕರ ಸ್ಥಾನದಲ್ಲಿ ನಿಲ್ಲುತ್ತದೆ. ಹಾಗಾಗಿ ಆಪಾದಿತರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟ ನುಡಿಗಳನ್ನಾಡಿತು.
“ದೂರಿನ ವರದಿ ಮಾಡುವುದನ್ನು ತಡೆ ಹಿಡಿಯಲು ಅಥವಾ ಅದರ ಬಗ್ಗೆ ಏನೊಂದೂ’ ಮಾತನಾಡದೆ ಮುಗುಂ ಆಗಿರುವುದು, ಇಲ್ಲವೇ ದೂರಿನ ನಿರೂಪಣೆಯನ್ನು ಕುಶಲತೆಯಿಂದ ನಿರ್ವಹಿಸುವ ಚಾಣಾಕ್ಷತೆ ಮೆರೆದರೆ ಸಂತ್ರಸ್ತ ಮಗುವಿಗೆ ಅನ್ಯಾಯ ಮಾಡಿದಂತೆ. ಈ ಪ್ರಕರಣದಲ್ಲಿ ಬಾಲಕನ ಮೇಲಿನ ದೌರ್ಜನ್ಯದ ಬಗ್ಗೆ ಸಂಸ್ಥೆ ಮೌನವಾಗಿ ವರ್ತಿಸಿರುವುದು ಶಾಸನಬದ್ಧ ಅಪರಾಧ ಎಂದು ನ್ಯಾಯಪೀಠ ಹೇಳಿದೆ.
ಪೋಷಕರು ”ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ಮಹದಾಸೆಯಿಂದ ಹಾಸ್ಟೆಲ್ ಗೆ ಸೇರಿಸುತ್ತಾರೆ. ಹಾಸ್ಟೆಲ್ ಗಳು ಕೇವಲ ಬೋಧನಾ ಕೇಂದ್ರಗಳಲ್ಲ, ಬದಲಿಗೆ ತಮ್ಮಲ್ಲಿಗೆ ಬರುವ ಪ್ರತಿಯೊಂದು ಮಗುವಿನ ಸುರಕ್ಷತೆ, ಘನತೆ ಮತ್ತು ಕ್ಷೇಮ ಕಾಪಾಡುವ ಜವಾಬ್ದಾರಿ ಹೊತ್ತ ಕೇಂದ್ರಗಳಾಗಿರುತ್ತವೆ. ಆದರೆ ಕೆಲವು ಹಾಸ್ಟೆಲ್ ಗಳು ತಮ್ಮ ಜವಾಬ್ದಾರಿಗಿಂತ ಹೆಚ್ಚಾಗಿ ಖ್ಯಾತಿಗೆ ಜೋತುಬಿದ್ದಿವೆ. ಮಕ್ಕಳ ಮುಗ್ಧತೆಯನ್ನು ಕಡೆಗಣಿಸಿ ಪ್ರತಿಷ್ಠೆಯನ್ನೇ ಮುಂದು ಮಾಡಿಕೊಂಡಿವೆ. ಪೋಷಕರ ವಿಶ್ವಾಸಕ್ಕೆ ದ್ರೋಹ ಬಗೆಯುತ್ತಿವೆ,” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಏನಿದು ಘಟನೆ…
‘ಸಂತ್ರಸ್ತ ಬಾಲಕ ಅಂದು ಹುಷಾರಿಲ್ಲ ಎಂದು ಮಲಗಿದ್ದ ವೇಳೆ ಸಹವರ್ತಿ ವಿದ್ಯಾರ್ಥಿಯು ಇದ್ದಕ್ಕಿದ್ದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕ ಜಾಗೃತಗೊಂಡು ವಿಷಯವನ್ನು ವಾರ್ಡನ್ ಗಮನಕ್ಕೆ ತಂದಿದ್ದಾನೆ. ಆದರೆ ಇದು ಪ್ರಯೋಜನವಾಗಿಲ್ಲ, ಕಲ್ಯಾಣ ಸಮಿತಿ ಅಧಿಕಾರಿ, ಬಾಲಕ ಕೊಟ್ಟ ದೂರನ್ನು ಹರಿದು ಹಾಕಿ ತಾನು ಹೇಳಿದಂತೆ ಬೇರೊಂದು ದೂರು ಬರೆದುಕೊಡುವಂತೆ ಒತ್ತಾಯಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
