‘ಮಕ್ಕಳಿಗೆ ಥಳಿಸಿ ಪಾಠ ಕಲಿಸುವುದನ್ನು ಸಹಿಸುವುದಿಲ್ಲ’: ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು: ಯುಕೆಜಿ ವಿದ್ಯಾರ್ಥಿನಿಗೆ ಹೊಡೆದಿದ್ದ ಶಿಕ್ಷಕಿ ವಿರುದ್ದ ಮಂಗಳೂರಿನ ಜೆ.ಎಂ.ಎಫ್.ಸಿ. 2ನೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಲು ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ಸಹಿಸುವುದಿಲ್ಲ. ಥಳಿಸಿ ಬೋಧಿಸುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಜೆಎಂಎಫ್ಸಿ ಕೋರ್ಟ್ ನ ಸಿ.ಸಿ. 580/2026 ಈ ಮೊಕದೊಮ್ಮೆಯ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸುರತ್ಕಲ್ ನ ಹೋಲಿ ಫ್ಯಾಮಿಲಿ ಶಾಲೆಯ ಶಿಕ್ಷಕಿ ಆಶಾ ಕ್ರಾಸ್ತಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ಸಹಿಸುವುದಿಲ್ಲ’ ಎಂದು ಕಟುವಾಗಿ ನುಡಿಯಿತು.
ಶಿಕ್ಷಕಿ ಯಾಕೆ ಮಗುವಿಗೆ ಹೊಡೆದರು ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಮೂರ್ತಿಗಳು, ಪ್ರಶ್ನಿಸಿದರು. ಇದಕ್ಕೆ ವಕೀಲರು, ‘ನಾವಲ್ಲ’ ಎಂದು ಹೇಳುತ್ತಿದ್ದಂತೆಯೇ ತೀವು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ‘ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ. ಇಂತಹ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ’ ಎಂದು ಕಿಡಿಕಾರಿತು.
ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಪೀಠವು, ಅರ್ಜಿಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಮತ್ತು ದೂರುದಾರೆಯಾದ ಮಗುವಿನ ತಾಯಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.
ಏನಿದು ಪ್ರಕರಣ
2026ರ ಜನವರಿ ಅಂತ್ಯದಲ್ಲಿ ಸುರತ್ಕಲ್ ಠಾಣೆಗೆ ‘ಶಿಕ್ಷಕಿ ಆಶಾ ಕ್ರಾಸ್ತಾ ಎಂಬವರ ವಿರುದ್ಧ ಮಗುವಿನ ತಾಯಿ ದೂರು ನೀಡಿದ್ದರು. ನನ್ನ 6 ವರ್ಷದ ಮಗಳಿಗೆ ತರಗತಿ ನಡೆಯುತ್ತಿದ್ದ ವೇಳೆಯಲ್ಲಿ ಹೊಡೆದಿದ್ದಾರೆ’ ಎಂದು ಆರೋಪಿಸಿದ್ದರು. ಈ ಸಂಬಂಧ ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಸಂಬಂಧಿಸಿದವರ ಜೊತೆ ಮಾತುಕತೆ ನಡೆಸಿ ಪ್ರಕರಣ ಮುಕ್ತಾಯಗೊಳಿಸಿದ್ದರು. ಮಗುವಿನ ತಾಯಿ, ನಂತರ ಮತ್ತೊಮ್ಮೆ ದೂರು ನೀಡಿ, ‘ನನ್ನ ಮಗಳಿಗೆ ಶಿಕ್ಷಕಿ ಪುನಃ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಹಾಗಾಗಿ, ಆಶಾ ಕ್ರಾಸ್ತಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದರು.
ಸದರಿ ದೂರಿನ ಮೇರೆಗೆ ಸುರತ್ಕಲ್ ಪೊಲೀಸ್ ಠಾಣಾಧಿಕಾರಿಯವರು ಅಪರಾಧ ಕ್ರಮಾಂಕ 7/2026 ರಡಿ ಆರೋಪಿ ಶಿಕ್ಷಕಿ ಆಶಾ ಕ್ರಾಸ್ತಾ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ತನಿಖೆ ಕೈಗೊಂಡ ಬಳಿಕ ತನಿಖಾಧಿಕಾರಿಯವರು ಆರೋಪಿ ಶಿಕ್ಷಕಿ ವಿರುದ್ಧ ಮಂಗಳೂರಿನ ಜೆಎಂಎಫ್ಸಿ ಎರಡನೇ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಆರೋಪಗಳನ್ನು ಗಮನಿಸಿದ ನ್ಯಾಯಾಲಯವು ಸಿ.ಸಿ.580/2026 ಕ್ರಮಾಂಕದಡಿ ಕ್ರಿಮಿನಲ್ ಪ್ರಕರಣವನ್ನು ನೋಂದಾಯಿಸಿತು. ಈ ಹಿನ್ನೆಲೆಯಲ್ಲಿ ಆರೋಪಿ ಶಿಕ್ಷಕಿ ಸದರಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
