01/07/2026

Law Guide Kannada

Online Guide

ಇಸ್ಲಾಂಗೆ ಮತಾಂತರಗೊಂಡವರಿಗೆ ಶಾಕ್: ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಚೆನ್ನೈ: ಮತಾಂತರಿಗಳಿಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದ್ದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರು ಹಿಂದುಳಿದ ವರ್ಗ (3) ಕೋಟಾದಡಿ ಮೀಸಲಿಗೆ ಅರ್ಹರಲ್ಲ ಎಂದು ತೀರ್ಪು ಪ್ರಕಟಿಸಿದೆ.

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ಜಿ.ಆರ್. ಸ್ವಾಮಿನಾಥನ್ ಹಾಗೂ ನ್ಯಾ.ಪಿ.ಬಿ.ಬಾಲಾಜಿ ಅವರಿದ್ದ ಮದುರೈ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಇಸ್ಲಾಂಗೆ ಮತಾಂತರವಾಗಿದ್ದ ತೂತುಕುಡಿ ಜಿಲ್ಲೆಗೆ ಸೇರಿದ ವ್ಯಕ್ತಿಯೊಬ್ಬರು ಬಿಸಿ ವರ್ಗದ ಪ್ರಮಾಣಪತ್ರ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, “ಸಂವಿಧಾನದ 25ನೇ ವಿಧಿ ಪ್ರಕಾರ ಮತಾಂತರ ಮೂಲಭೂತ ಹಕ್ಕು. ಆದರೆ, ಮತಾಂತರದ ನಂತರ ಮೀಸಲಾತಿ ಸೌಲಭ್ಯ ಪಡೆಯುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ” ಎಂದು ಹೇಳಿದೆ.

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರು ಹಿಂದುಳಿದ ವರ್ಗ (BC) ಕೋಟಾದಡಿಯಲ್ಲಿ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲ. ಮತಾಂತರದ ನಂತರ ಅವರು ಕೇವಲ ಮುಸ್ಲಿಂ ಮತ್ತು ಇನ್ನೇನೂ ಅಲ್ಲ. ಹಿಂದುಳಿದ ವರ್ಗಗಳಿಗೆ ಮತಾಂತರಗೊಂಡವರಿಗೆ ಮೀಸಲಾತಿ ನೀಡುವ ತಮಿಳುನಾಡು ಸರ್ಕಾರದ 2024ರ ಆದೇಶವನ್ನು ನ್ಯಾಯಾಲಯವು ಅಸಂವಿಧಾನಿಕ ಎಂದು ಘೋಷಿಸಿದೆ.

‘ಇಸ್ಲಾಂಗೆ ಮತಾಂತರಗೊಂಡವರು ಮುಸ್ಲಿಮರು ಮಾತ್ರ. ಅದನ್ನು ಹೊರತುಪಡಿಸಿ ಮತಾಂತರದ ಹಿಂದಿನ ಧರ್ಮ, ಜಾತಿಗೂ ಸಂಬಂಧ ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಹಿಂದೂ ವ್ಯಕ್ತಿಯೊಬ್ಬರು ಇಸ್ಲಾಂಗೆ ಮತಾಂತರಗೊಂಡಾಗ ಆತ ಕೇವಲ ಮುಸಲ್ಮಾನನಾಗುತ್ತಾನೆ. ಮುಸ್ಲಿಂ ಸಮಾಜದಲ್ಲಿ ಆತನ ಸ್ಥಾನವನ್ನು ಮತಾಂತರಗೊಳ್ಳುವ ಮೊದಲು ಯಾವ ಜಾತಿಗೆ ಸೇರಿದವರು ಎಂಬುದರ ಮೇಲೆ ನಿರ್ಧರಿಸುವುದಿಲ್ಲ. ಮುಸ್ಲಿಂ ಸಮಾಜದಲ್ಲಿ ರಾವತ್, ಮರಕ್ಕಾರ್ಯ ಅಥವಾ ಡೆಕ್ಕನಿ ಮುಂತಾದ ವರ್ಗಗಳಿವೆ. ಈ ವರ್ಗಗಳನ್ನು ಹುಟ್ಟಿನಿಂದಲೇ ನಿರ್ಧರಿಸಲಾಗುತ್ತದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.

ಒಬ್ಬ ವ್ಯಕ್ತಿ ಬೇರೆ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ಮೂಲ ಜಾತಿ ಅಥವಾ ವರ್ಗದ ಭಾಗವಾಗಲು ಸಾಧ್ಯವಿಲ್ಲ. ತಮಿಳುನಾಡು ಕಾನೂನು ಅಡಿಯಲ್ಲಿ ಹಿಂದುಳಿದ ವರ್ಗದ ಸ್ಥಾನಮಾನ ನೀಡಲಾದ ಅನ್ಸಾರ್, ಡೆಕ್ಕನಿ, ದುಡೇಕುಲಾ, ಲ, ಮಾಪ್ಪಿಲ್ಲ, ಶೇಖ್, ಸೈಯದ್ ಸಮುದಾಯಗಳಿಗೆ ಮಾತ್ರ ಮೀಸಲಿಗೆ ಅರ್ಹ. ಈ ಸಮುದಾಯಗಳಲ್ಲಿ ಜನಿಸದ ವ್ಯಕ್ತಿಗಳು ಹಿಂದುಳಿದ ವರ್ಗದ ಅಡಿಯಲ್ಲಿ ಪ್ರಮಾಣಪತ್ರ ಪಡೆಯುವುದು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿವರ…
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬ 2016ರಲ್ಲಿ ಮುಸ್ಲಿಂ ಪದ್ಧತಿಗಳ ಪ್ರಕಾರ ವಿವಾಹವಾದರು. ಇಬ್ಬರು ಮಕ್ಕಳು ಪಡೆದ ವ್ಯಕ್ತಿ, ಮುಸ್ಲಿಂ ಸಮುದಾಯದ ಲೆಬ್ಬೆ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದರು. ಕಾಯಧಾರ್ ತಹಶೀಲ್ದಾರ್ ಅರ್ಜಿಯನ್ನು ತಿರಸ್ಕರಿಸಿದರು. ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ, ಮುಸ್ಲಿಂ ಸಮುದಾಯದ ನಿಯಮಗಳನ್ನು ಪಾಲಿಸುತ್ತಿರುವೆ. ಸ್ಥಳೀಯ ಸಮುದಾಯ ಒಪ್ಪಿಕೊಂಡು ಲೆಬ್ಬೆ ಪ್ರಮಾಣಪತ್ರ ನೀಡಿದೆ. ಕಂದಾಯ ಇಲಾಖೆ ಅಧಿಕಾರಿಗೆ ನಮ್ಮ ಸಮುದಾಯ ನೀಡಿದ ಪ್ರಮಾಣಪತ್ರವನ್ನು ತಿರಸ್ಕರಿಸುವ ಹಕ್ಕಿಲ್ಲ ಎಂದು ವಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, “ಧರ್ಮವನ್ನು ಬದಲಾಯಿಸುವುದು ಮೂಲಭೂತ ಹಕ್ಕಾದರೂ, ಧರ್ಮ ಬದಲಾವಣೆ ಬಳಿಕವೂ ಮೀಸಲು ಸೌಲಭ್ಯ ಪಡೆಯುವುದು ಕಾನೂನುಬದ್ಧವಾಗಿ ಅಮಾನ್ಯ,” ಎಂದು ಷರಾ ಬರೆಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.