ಅಧಿಕಾರಿಗಳಿಗುಂಟು PTCL ಕಾಯ್ದೆಯಡಿ ಸಕಾರಣವಿಲ್ಲದ ಮರು ಮಂಜೂರು ಅರ್ಜಿ ತಿರಸ್ಕರಿಸುವ ವಿವೇಚನಾಧಿಕಾರ
ಬೆಂಗಳೂರು: ಪಿಟಿಸಿಎಲ್ ಕಾಯ್ದೆಯಡಿಯ ಸಕಾರಣವಿಲ್ಲದ ಮರು ಮಂಜೂರು ಅರ್ಜಿಯನ್ನು ತಿರಸ್ಕರಿಸುವ ವಿವೇಚನಾಧಿಕಾರ ಅಧಿಕಾರಿಗಳಿಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
“ಅಮ್ಮಯ್ಯ ವಿರುದ್ಧ ಆರ್.ಮಂಜುನಾಥ್” ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಟಿ.ಎಂ. ನಡಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಪಿಟಿಸಿಎಲ್ ಕಾಯ್ದೆಯಡಿ ಮರು ಮಂಜೂರು ಅರ್ಜಿ ಸಲ್ಲಿಸುವಲ್ಲಿ ಅತಿಯಾದ ವಿಳಂಬ ಇದ್ದಾಗ ಅಸಮಂಜಸ ವಿಳಂಬದ ನಂತರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸುವ ವಿವೇಚನೆ ಅಧಿಕಾರಿಗಳಿಗೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಶಾಸನವು ಕಾಲಮಿತಿಯ ಅವಧಿಯನ್ನು ಸ್ಪಷ್ಟವಾಗಿ ಸೂಚಿಸಿಲ್ಲ. ಆದರೂ ಕಾಯ್ದೆಯ ನಿಬಂಧನೆಗಳನ್ನು ಯುಕ್ತ ಸಮಯದೊಳಗೆ ಆಹ್ವಾನಿಸಬೇಕು. ಇದೇ ವೇಳೆ, ವಿಳಂಬದ ಬಗ್ಗೆ ಯಾವುದೇ ಸಮಂಜಸವಾದ ಕಾರಣ ನೀಡದೆ ಅರ್ಜಿಗಳನ್ನು ಸಲ್ಲಿಸಿದಾಗ ಅದನ್ನು ತಿರಸ್ಕರಿಸಬಹುದು ವಿಭಾಗೀಯ ಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
“ಛೇದಿಲಾಲ್ ಯಾದವ್ ವಿರುದ್ಧ ಹರಿಕಿಶೋರ್ ಯಾದವ್” ಮತ್ತು “ನಿಂಗಪ್ಪ ವಿರುದ್ದ ಡೆಪ್ಯೂಟಿ ಕಮಿಷನರ್ ಮತ್ತಿತರರು” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠವು, ಕರ್ನಾಟಕ ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಮಾರಾಟ ಕ್ರಯಪತ್ರವನ್ನು ಪ್ರಶ್ನಿಸಲು ಸೂಕ್ತ ಅರ್ಜಿಯನ್ನು ಸಲ್ಲಿಸಬೇಕು ಎಂದಿದೆ ಎಂಬುದನ್ನು ತೀರ್ಪಿನಲ್ಲಿ ಗಮನಿಸಲಾಗಿದೆ. ಆದರೆ, ಆ ಅರ್ಜಿಯನ್ನು ಸಲ್ಲಿಸಲು ಯಾವುದೇ ಕಾಲಮಿತಿಯನ್ನು ನಿಗದಿಗೊಳಿಸಿಲ್ಲ. ಸಮಂಜಸವಾದ ಕಾಲಮಿತಿಯೊಳಗೆ ಇಂತಹ ಅರ್ಜಿಯನ್ನು ಸಲ್ಲಿಸಬೇಕು. ಆದರೆ, ಸಮರ್ಪಕವಾದ ಕಾರಣವಿಲ್ಲದೆ ಸುದೀರ್ಘ ವಿಳಂಬವನ್ನು ಮನ್ನಿಸಲು ಅಧಿಕಾರಿಗಳು ವಿವೇಚನಾಧಿಕಾರವನ್ನು ಬಳಸಬಹುದಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ನೀಡಿದ ತೀರ್ಪನ್ನು ಎತ್ತಿಹಿಡಿದ ನ್ಯಾಯಪೀಠ ಮೇಲ್ಮನವಿದಾರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
