30/06/2026

Law Guide Kannada

Online Guide

ಸಣ್ಣ ಪುಟ್ಟ ದೋಷಗಳಿಗೆ ‘ಕ್ರಯಪತ್ರ’ ಕಡೆಗಣನೆ ಸಲ್ಲದು: ಏಳು ದಶಕಗಳ ಕಾನೂನು ಹೋರಾಟಕ್ಕೆ ಅಂತ್ಯ ಹಾಡಿದ ‘ಸುಪ್ರೀಂ’

ನವದೆಹಲಿ: 69 ವರ್ಷಗಳ ಹಿಂದೆ ಕಾರ್ಯಗತಗೊಳಿಸಿದ್ದ ‘ಕ್ರಯ ಪತ್ರ ಪ್ರಕರಣ ಸಂಬಂಧ ಏಳು ದಶಕಗಳ ಸುದೀರ್ಘ ಕಾನೂನು ಹೋರಾಟವು ಸುಪ್ರೀಂಕೋರ್ಟ್ ನಲ್ಲಿ ಕೊನೆಗೂ ಅಂತ್ಯ ಕಂಡಿದ್ದು, ‘ಆಸ್ತಿ ನೋಂದಣಿ ಪ್ರಮಾಣಪತ್ರವನ್ನು (ಕ್ರಯ ಪತ್ರ) ಗಂಭೀರವಲ್ಲದ ಸಣ್ಣ ಪುಟ್ಟ ಕಾರಣಗಳಿಗಾಗಿ ಕಡೆಗಣಿಸುವಂತಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

69 ವರ್ಷಗಳ ಹಿಂದೆ ಕಾರ್ಯಗತಗೊಳಿಸಿದ್ದ ‘ಕ್ರಯ ಪತ್ರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕಿಶೋರ್ ಮಿಶ್ರಾ ಹಾಗೂ ಎನ್.ವಿ. ಅಂಜಾರಿಯಾ ನೇತೃತ್ವದ ನ್ಯಾಯಪೀಠವು, *ಉಯಿಲು’ ಅಥವಾ ‘ದಾನಪತ್ರ’ಗಳಂತೆ ‘ಕ್ರಯ ಪತ್ರ’ದ ಸಿಂಧುತ್ವಕ್ಕೆ ಶಾಸನಬದ್ದ ದೃಢೀಕರಣದ ಅವಶ್ಯವಿಲ್ಲ. ಸಣ್ಣ ಪುಟ್ಟ ದೋಷಗಳನ್ನು ಮುಂದಿಟ್ಟುಕೊಂಡು ನೈಜ ಕ್ರಯ ಪತ್ರದ ಬಗ್ಗೆ ಅನುಮಾನಪಡಲಾಗದು. ಸಂಬಂಧಿಸಿದ ದಾಖಲೆಯನ್ನು ಸುಳ್ಳು ಎಂದು ಸಾಬೀತುಪಡಿಸುವುದು ಪ್ರಶ್ನಿಸುವವರಿಗೆ ಸಂಬಂಧಿಸಿದ್ದಾಗಿರುತ್ತದೆ. ವಂಚನೆ, ಮೂಲಭೂತವಾದ ದೋಷ, ತಿರುಚಿದ ಆರೋಪ ಕುರಿತು ಸೂಕ್ತ ಪುರಾವೆಗಳನ್ನು ಸಲ್ಲಿಸಿದರೆ ಮಾತ್ರ ಅಂತಹ ಪ್ರಮಾಣಪತ್ರವನ್ನು ಅನೂರ್ಜಿತಗೊಳಿಸಬಹುದಾಗಿದೆ’ ಎಂದು ಸ್ಪಷ್ಟಪಡಿಸಿದೆ.

1957, ಜೂನ್ 4ರ ಸೇಲ್ ಡೀಡ್ ನ ಅನ್ವಯ, ಉತ್ತರಾಖಂಡದ ಹರಿದ್ವಾರ (ಹಿಂದೆ ಉತ್ತರ ಪ್ರದೇಶಕ್ಕೆ ಸೇರಿತ್ತು) ಜಿಲ್ಲೆಯ ನರಸೀಪುರ್ ಕಲಾನ್ ಗ್ರಾಮದಲ್ಲಿ 15 ‘ಬಿಘಾ’ (ಒಂದು ಬಿಘಾ ಎಂದರೆ ಸುಮಾರು 0.62 ಎಕರೆ) ಅಳತೆಯ ಕೃಷಿ ಭೂಮಿ ಖರೀದಿಸಿದ್ದ ಶರಾಫತ್ ಅಲಿ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ, 2026ರ ಜೂನ್ 23ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ.

ಖರೀದಿದಾರರು ಆ ವೇಳೆ ಅಪ್ರಾಪ್ತ ವಯಸ್ಸಿನವರಾಗಿದ್ದರು. ನಂತರ ಆ ಜಮೀನನ್ನು ಅವರ ಸ್ವಾಧೀನಕ್ಕೆ ನೀಡಲಾಗಿತ್ತು. ಉತ್ತರ ಪ್ರದೇಶ ಭೂ ಜಮೀನ್ದಾರಿ ರದ್ಧತಿ ಹಾಗೂ ಸುಧಾರಣಾ ಕಾಯ್ದೆಯನ್ನು ಮುಂದಿಟ್ಟುಕೊಂಡು ಶರಾಫತ್ ಖರೀದಿಸಿದ್ದ ಭೂಮಿಯ ಮ್ಯುಟೇಶನ್ ಪ್ರಕ್ರಿಯೆಯು ದಶಕಗಳ ಕಾಲ ವಿಳಂಬವಾಗಿತ್ತು. ಸಣ್ಣ ಪುಟ್ಟ ದೋಷಗಳನ್ನು ಮುಂದಿಟ್ಟುಕೊಂಡು ಮೇಲ್ಮನವಿದಾರರ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು.

ಹಿಡುವಳಿ ಮಿತಿ ಹಾಗೂ ಸಣ್ಣ ಪುಟ್ಟ ವ್ಯತ್ಯಾಸಗಳನ್ನೇ ಮುಂದಿಟ್ಟುಕೊಂಡು ಮೇಲ್ಮನವಿದಾರರ ಅರ್ಜಿಯನ್ನು ಹೈಕೋರ್ಟ್ ಕೂಡ ತಿರಸ್ಕರಿಸಿತ್ತು. ಇದೀಗ ಹೈಕೋರ್ಟ್ ಆದೇಶವನ್ನು ಬದಿಗಿರಿಸಿದ ಸುಪ್ರೀಂ ಕೋರ್ಟ್, ‘ವಾಸಸ್ಥಳ ಹಾಗೂ ಗ್ರಾಮದ ವಿವರಣೆಯ ಸಣ್ಣ ಪುಟ್ಟ ದೋಷಗಳನ್ನೇ ಮುಂದಿಟ್ಟುಕೊಂಡು, ವಹಿವಾಟನ್ನು ರದ್ದುಗೊಳಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿ ಮೇಲ್ಮನವಿ ಸಲ್ಲಿಸಿದವರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ‘ಜಮೀನು ಮಾಲೀಕರು’ ಎಂದು ಉಲ್ಲೇಖಿಸುವಂತೆ ನಿರ್ದೇಶನ ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.