23/04/2026

Law Guide Kannada

Online Guide

ಸ್ಥಿರಾಸ್ತಿ: ನ್ಯಾಯಾಲಯಗಳ ಡಿಕ್ರಿ ಪರಿಣಾಮಕಾರಿ ಜಾರಿಗೆ ಹೈಕೋರ್ಟ್ ನಿಂದ ಮಾರ್ಗಸೂಚಿ ಪ್ರಕಟ.

ಬೆಂಗಳೂರು: ಸ್ಥಿರಾಸ್ತಿಗಳ ನೋಂದಾಯಿತ ದಾಖಲೆಗಳನ್ನು ರದ್ದುಗೊಳಿಸುವ ಕುರಿತ ವಿಚಾರಣಾ ನ್ಯಾಯಾಲಯಗಳ ತೀರ್ಪುಗಳನ್ನು (ಡಿಕ್ರಿ) ಪರಿಣಾಮಕಾರಿಯಾಗಿ ಜಾರಿಗೊಳಿಸಿಲು ಸಿವಿಲ್ ನ್ಯಾಯಾಲಯಗಳು ಮತ್ತು ಉಪ-ನೋಂದಣಾಧಿಕಾರಿಗಳಿಗೆ (ಸಬ್-ರಿಜಿಸ್ಟ್ರಾರ್) ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕೆ. ಆ್ಯಂಟನಿಸಾಮಿ ಎಂಬುವವರು ನ್ಯಾಯಾಲಯದ ತೀರ್ಪನ್ನು ಜಾರಿಗೆ ತರಲು ನಿರಾಕರಿಸಿದ್ದ ಬೆಂಗಳೂರಿನ ಮಹದೇವಪುರದ ಸಬ್ ರಿಜಿಸ್ಟ್ರಾರ್ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠವು ಸ್ಥಿರಾಸ್ತಿಗಳ ಸಂಬಂಧ ನ್ಯಾಯಾಲಯಗಳು ಡಿಕ್ರಿಯನ್ನು ಪರಿಣಾಮಕಾರಿ ಜಾರಿ ಮಾಡಲು ಮಾರ್ಗಸೂಚಿಗಳನ್ನ ಹೊರಡಿಸಿದೆ.

ಇತ್ತೀಚಿನ ದಿನಗಳಲ್ಲಿ ಡಿಕ್ರಿಗಳನ್ನು ಮಾನ್ಯ ಮಾಡದ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿವೆ. ಇದಕ್ಕೆ ಸಬ್ ರಿಜಿಸ್ಟ್ರಾರ್ ಗಳೇ ಕಾರಣ. ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು, ಸಿವಿಲ್ ನ್ಯಾಯಾಲಯದ ಡಿಕ್ರಿ ಇದ್ದರೂ ಅದನ್ನು ಆಧರಿಸಿ ಕ್ರಮ ಕೈಗೊಂಡಿಲ್ಲ ಎಂದು ಸಬ್ ರಿಜಿಸ್ಟ್ರಾರ್ ಅವರನ್ನು ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿತು.

ಏನಿದು ಪ್ರಕರಣ..
ಅರ್ಜಿದಾರರು ಬಿಲ್ಡರ್ ಒಬ್ಬರ ಜತೆ ಮಾಡಿಕೊಂಡಿದ್ದ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಮತ್ತು ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಅನ್ನು ಸಿವಿಲ್ ನ್ಯಾಯಾಲಯ ರದ್ದುಗೊಳಿಸಿತ್ತು. ಈ ತೀರ್ಪಿನ ಪ್ರತಿಯನ್ನು ಮಹದೇವಪುರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಿದಾಗ, ನ್ಯಾಯಾಲಯದಿಂದ ನೇರ ಸಂವಹನ ಬಂದಿಲ್ಲ ಮತ್ತು ಹೈಕೋರ್ಟ್ ನಿರ್ದೇಶನವಿಲ್ಲಎಂಬ ಕಾರಣ ನೀಡಿ ದಾಖಲೆಗಳಲ್ಲಿ ಬದಲಾವಣೆಗೆ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಸಿವಿಲ್ ನ್ಯಾಯಾಲಯಗಳು ಮತ್ತು ಉಪ-ನೋಂದಣಾಧಿಕಾರಿಗಳಿಗೆ ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಯ ಅಂಶಗಳು ಈ ಕೆಳಕಂಡಂತಿದೆ.

ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನೋಂದಾಯಿತ ದಾಖಲೆಯನ್ನು ಅಮಾನ್ಯವೆಂದು ಘೋಷಿಸಿದ, ರದ್ದುಗೊಳಿಸಿದ ಅಥವಾ ಮುಕ್ತಾಯಗೊಳಿಸಿದ ಮೊಕದ್ದಮೆಗಳಲ್ಲಿ ರಾಜ್ಯದ ಎಲ್ಲ ಸಿವಿಲ್ ನ್ಯಾಯಾಲಯಗಳು ಮತ್ತು ವಾಣಿಜ್ಯ ಕೋರ್ಟ್ಗಳು ತೀರ್ಪಿನ ಪ್ರತಿಯನ್ನು ದಾಖಲೆಯನ್ನು ನೋಂದಾಯಿಸಿದ ಅಧಿಕಾರ ವ್ಯಾಪ್ತಿಯ ಸಬ್-ರಿಜಿಸ್ಟ್ರಾರ್ ಗೆ ರವಾನಿಸಲು ಕಚೇರಿಗೆ ನಿರ್ದೇಶಿಸಬೇಕು.

ಸಾಮಾನ್ಯವಾಗಿ ತೀರ್ಪು ಹೊರಬಿದ್ದ ದಿನಾಂಕದಿಂದ 4 ವಾರಗಳಲ್ಲಿ ನ್ಯಾಯಾಲಯಗಳು ಸಂವನಹವನ್ನು ಕಳುಹಿಸಬೇಕು ಹಾಗೂ ಸಂವಹನವು ದಾಖಲೆ ಸಂಖ್ಯೆ ನೋಂದಣಿ ದಿನಾಂಕ, ದಾಖಲೆ ಮತ್ತು ರದ್ದಾದ ದಾಖಲೆಯ ಸ್ವರೂಪವನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.

ಹಾಗೆಯೇ ಸಿವಿಲ್ ನ್ಯಾಯಾಲಯವು ನೋಂದಾಯಿತ ದಾಖಲೆಯನ್ನು ರದ್ದುಗೊಳಿಸುವ ತೀರ್ಪನ್ನು ಹೊರಡಿಸಿದಾಗಲೆಲ್ಲ ಉಪ-ನೋಂದಣಿದಾಧಿಕಾರಿಗಳು ಅಂತಹ ಸಂವಹನವನ್ನು ಸ್ವೀಕರಿಸಿದ ನಾಲ್ಕು ವಾರಗಳಲ್ಲಿ ಸಂಬಂಧಿತ ರಿಜಿಸ್ಟರ್ ಮತ್ತು ದಾಖಲೆಗಳಲ್ಲಿ ಅಗತ್ಯವಿರುವ ನಮೂದುಗಳನ್ನು ಮಾಡಬೇಕು.

\ನ್ಯಾಯಾಲಯದಿಂದ ಯಾವುದೇ ಔಪಚಾರಿಕ ಸಂವಹನವನ್ನು ಸ್ವೀಕರಿಸದ ಸಂದರ್ಭಗಳಲ್ಲಿಯೂ ಸಹ, ಒಬ್ಬ ಪಕ್ಷಗಾರರು (ಪಾರ್ಟಿ) ತೀರ್ಪಿನ ಪ್ರಮಾಣೀಕೃತ ಪ್ರತಿಯನ್ನು ಮತ್ತು ನೋಂದಾಯಿತ ದಾಖಲೆಯನ್ನು ರದ್ದುಗೊಳಿಸಲಾಗಿದೆ ಅಥವಾ ಅನೂರ್ಜಿತವಾಗಿದೆ ಎಂದು ಘೋಷಿಸುವ ತೀರ್ಪನ್ನು ನೀಡಿದರೆ, ಉಪ-ನೋಂದಣಿದಾಧಿಕಾರಿಗಳು ತೀರ್ಪಿನ ಮೇಲೆ ಕಾರ್ಯನಿರ್ವಹಿಸಲು ನಿರಾಕರಿಸಬಾರದು. ಅಂತಹ ಸಂದರ್ಭಗಳಲ್ಲಿ, ಸಬ್-ರಿಜಿಸ್ಟ್ರಾರ್ ಗಳು ಪ್ರಮಾಣೀಕೃತ ಪ್ರತಿಯ ದೃಢೀಕರಣವನ್ನು ಪರಿಶೀಲಿಸಬೇಕು ಮತ್ತು ನಿಯಮಗಳ ಪ್ರಕಾರ ಸಂಬಂಧಿತ ರೆಜಿಸ್ಟರ್ ಗಳು ಮತ್ತು ಕಡತಗಳಲ್ಲಿ ರದ್ದತಿಯನ್ನು ದಾಖಲಿಸಬೇಕು.

ಸಕ್ಷಮ ಸಿವಿಲ್ ನ್ಯಾಯಾಲಯ ದಾಖಲೆಯನ್ನು ಅನೂರ್ಜಿತ ಅಥವಾ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ ನಂತರ ನೋಂದಣಿ ಪ್ರಾಧಿಕಾರವು ಹೈಕೋರ್ಟ್ ಅಥವಾ ಯಾವುದೇ ಇತರ ಪ್ರಾಧಿಕಾರದ ಪ್ರತ್ಯೇಕ ಆದೇಶಗಳನ್ನು ನೀಡುವಂತೆ ಒತ್ತಾಯ ಮಾಡಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.