ಸರ್ಕಾರಿ ಕಾನೂನು ಸಮಿತಿಗಳಲ್ಲಿ ಮಹಿಳಾ ವಕೀಲರಿಗೆ ಮೀಸಲಾತಿ: ಕೇಂದ್ರ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದ ಸುಪ್ರೀಂ
ನವದೆಹಲಿ: ಸರ್ಕಾರಿ ಕಾನೂನು ಸಮಿತಿಗಳು ಹಾಗೂ ಕಾನೂನು ಅಧಿಕಾರಿಗಳ ನೇಮಕಾತಿಯಲ್ಲಿ ಮಹಿಳಾ ವಕೀಲರಿಗೆ ಶೇ.30 ಮೀಸಲಾತಿ ಕಲ್ಪಿಸಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.
ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ನಿ ಮತ್ತು ವಿಫುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿದೆ.
ಸರಕಾರಿ ಕಾನೂನು ಸಮಿತಿಗಳು ಹಾಗೂ ಕಾನೂನು ಅಧಿಕಾರಿಗಳ ನೇಮಕಾತಿಯಲ್ಲಿ ಮಹಿಳಾ ವಕೀಲರಿಗೆ ಶೇ.30 ಮೀಸಲಾತಿ ಕಲ್ಪಿಸಬೇಕೆಂದು ಕೋರಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ಪಿಐಎಲ್ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಕುರಿತು ಕೇಂದ್ರ, ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆ ಕೇಳಿದೆ.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಸಮಿತಿಗಳಿಂದ ಹಿಡಿದು ಸರಕಾರಿ ಕಾನೂನು ಅಧಿಕಾರಿ ಹುದ್ದೆಗಳು ಮತ್ತು ಕಾನೂನು ನೆರವು ಪ್ರಾಧಿಕಾರಗಳವರೆಗೆ ಎಲ್ಲಾ ಹಂತಗಳಲ್ಲೂ ಮಹಿಳಾ ವಕೀಲರಿಗೆ ಕನಿಷ್ಠ ಶೇ.30ರಷ್ಟು ಪ್ರಾತಿನಿಧ್ಯ ನೀಡಲು ಕೇಂದ್ರ, ರಾಜ್ಯ ಸರಕಾರಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ ನಿರ್ದೇಶನ ನೀಡಬೇಕು ಎಂದು ಪಿಐಎಲ್ ನಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಮಹಿಳೆಯರು ಕಾನೂನು ಕಾಲೇಜುಗಳಿಗೆ ದಾಖಲೆ ಸಂಖ್ಯೆಯಲ್ಲಿ ಸೇರುತ್ತಿದ್ದರೂ, ವ್ಯವಸ್ಥಿತ ಅಡೆತಡೆಗಳು ಅವರ ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
