ಅಕ್ರಮ ಬಂಧನ ಮಾಡುವ ಪೊಲೀಸರಿಗೆ ಶಾಕ್: ಕಾರಣ ತಿಳಿಸದಿದ್ರೆ ಇಲಾಖಾ ತನಿಖೆ ಫಿಕ್ಸ್
ನವದೆಹಲಿ: ಯಾವುದೇ ವ್ಯಕ್ತಿಯನ್ನು ಕಾರಣ ತಿಳಿಸದೇ ಅಕ್ರಮ ಬಂಧನ ಮಾಡುವ ಪೊಲೀಸರಿಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. ಇನ್ನು ಮುಂದೆ, ಯಾವುದೇ ವ್ಯಕ್ತಿಯನ್ನು ಬಂಧಿಸುವ ಮುನ್ನ ಬಂಧನಕ್ಕೆ ಲಿಖಿತವಾಗಿ ಕಾರಣ ತಿಳಿಸದಿದ್ದರೆ ಅಂತಹ ಪೊಲೀಸ್ ಅಧಿಕಾರಿಗೆ ಇಲಾಖಾ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಉಜ್ಜಲ್ ಎಸ್. ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಬಂಧನದ ಲಿಖಿತ ಕಾರಣಗಳನ್ನು ಒದಗಿಸದ ಕಾರಣ ಜಸ್ಕರನ್ಜಿತ್ ಸಿಂಗ್ ಅವರ ಬಂಧನವನ್ನು ಪೀಠವು ಕಾನೂನುಬಾಹಿರವೆಂದು ಘೋಷಿಸಿತು. ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ, ಶಿರೋಮಣಿ ಅಕಾಲಿ ದಳ (SAD) ಸಂಯೋಜಿತ ಮುಲ್ಲಾನ್ಪುರ ದಖಾ ಕ್ಷೇತ್ರದ ಉಸ್ತುವಾರಿಯಾಗಿರುವ ಸಿಂಗ್ ಅವರನ್ನು ಬಂಧಿಸಲಾಗಿತ್ತು.
ಬಂಧನದ ಲಿಖಿತ ಕಾರಣಗಳನ್ನು ಒದಗಿಸದೆ ವ್ಯಕ್ತಿಯೊಬ್ಬರನ್ನು ಬಂಧಿಸುವುದು ಸಂವಿಧಾನದ ವಿಧಿ 22(1) ರ ಉಲ್ಲಂಘನೆಯಾಗಿದೆ. ಈ ಅಕ್ರಮ ಬಂಧನಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆಗೆ ಇದು ಆಧಾರವಾಗುತ್ತದೆ. ವಿಧಿ 22(1) ರ ಉಲ್ಲಂಘನೆಯ ಆಧಾರದ ಮೇಲಿನ ಬಿಡುಗಡೆಯು ಜಾಮೀನು ಮಂಜೂರಾತಿಯಲ್ಲ, ಬದಲಾಗಿ ಅದು ಅಸಂವಿಧಾನಿಕ ಬಂಧನದಿಂದ ಬಿಡುಗಡೆಯಾಗುವುದಾಗಿದೆ. ಇಂತಹ ಉಲ್ಲಂಘನೆಯ ನಂತರ ಬಿಡುಗಡೆಯಾದ ವ್ಯಕ್ತಿಯನ್ನು ಮರುಬಂಧಿಸುವಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳನ್ನೂ ನ್ಯಾಯಪೀಠ ವಿವರಿಸಿದೆ.
ವಿಧಿ 22(1) ರಲ್ಲಿ ಉಲ್ಲೇಖಿಸಲಾದ ರಕ್ಷಣಾ ಕ್ರಮಗಳು ಕೇವಲ ಕಾರ್ಯವಿಧಾನದ ಸುರಕ್ಷತೆಗಳಲ್ಲ; ವ್ಯಕ್ತಿಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ಪಾಲಿಸಬೇಕಾದ ಮೂಲಭೂತ ತತ್ತ್ವಗಳಾಗಿವೆ. ಆದ್ದರಿಂದ, ಬಂಧನದ ಕಾರಣಗಳನ್ನು ಒದಗಿಸುವಲ್ಲಿನ ಕಾರ್ಯವಿಧಾನದ ಲೋಪಗಳು ಬಂಧನವನ್ನು ಕಾನೂನುಬಾಹಿರವಾಗಿಸುವುದಿಲ್ಲ ಅಥವಾ ಆರೋಪಿಗೆ ಜಾಮೀನು ಪಡೆಯುವ ಹಕ್ಕನ್ನು ನೀಡುವುದಿಲ್ಲ ಎಂದು ಹೇಳುವುದು ಸರಿಯಲ್ಲ. ವಿಧಿ 22(1) ರ ಅಡಿಯಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಆರೋಪಿಯನ್ನು ಬಿಡುಗಡೆ ಮಾಡಿದಾಗ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದಿಲ್ಲ; ಬದಲಾಗಿ ಅವರನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಬಂಧನದಿಂದ ಬಿಡುಗಡೆ ಮಾಡಲಾಗುತ್ತದೆ.” ಎಂದು ನ್ಯಾಯಪೀಠ ತಿಳಿಸಿದೆ.
ಬಂಧನದ ಕಾರಣಗಳನ್ನು ಆರಂಭದಲ್ಲಿ ಏಕೆ ಒದಗಿಸಲಾಗಿಲ್ಲ ಎಂಬುದನ್ನು ಕೂಡ ಈ ಅರ್ಜಿಯಲ್ಲಿ ವಿವರಿಸಬೇಕು. ಆರೋಪಿಗೆ ಆ ಕಾರಣಗಳನ್ನು ಒದಗಿಸಿದ ನಂತರವಷ್ಟೇ ಈ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಇದಕ್ಕೆ ತಕ್ಷಣದ ಮೇಲಧಿಕಾರಿಯ ಅನುಮೋದನೆ (ಅಥವಾ ದೃಢೀಕರಣ) ಕಡ್ಡಾಯವಾಗಿರುತ್ತದೆ. ಅನುಮೋದನೆಯ ಈ ನಿಯಮದ ಉದ್ದೇಶವು ಅಕ್ರಮಗಳು ಅಥವಾ ಶಾಮೀಲಾಗುವಿಕೆಯನ್ನು ತಡೆಯುವುದಾಗಿದೆ; ಅಲ್ಲದೆ, ಅಧಿಕಾರಿಯೊಬ್ಬರು ಸಂವಿಧಾನಾತ್ಮಕ ಕರ್ತವ್ಯಲೋಪವೆಸಗಿದ ವಿಷಯವು ಮೇಲಧಿಕಾರಿಯ ಗಮನಕ್ಕೆ ಬರುವಂತೆ ಮಾಡಿ, ಸೂಕ್ತ ಪರಿಹಾರಕ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವುದೂ ಇದರ ಉದ್ದೇಶವಾಗಿದೆ. ಅನುಮೋದನೆಗಾಗಿ ಕೋರಿಕೆ ಬಂದಾಗ, ಮೇಲಧಿಕಾರಿಯು ತನಿಖೆಯನ್ನು ಬೇರೊಬ್ಬ ಅಧಿಕಾರಿಗೆ ವರ್ಗಾಯಿಸಬೇಕು ಮತ್ತು ಜವಾಬ್ದಾರಿಯುತ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಬೇಕು. ತನಿಖೆಯಲ್ಲಿ ಪ್ರತಿಕೂಲ ಅಂಶಗಳು ಕಂಡುಬಂದರೆ, ಇಲಾಖಾ ಕ್ರಮ ಕೈಗೊಳ್ಳುವುದರ ಜೊತೆಗೆ ಆ ಅಧಿಕಾರಿಯ ಸೇವಾ ಪುಸ್ತಕದಲ್ಲಿ ಅದನ್ನು ದಾಖಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
