01/10/2026

Law Guide Kannada

Online Guide

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ: ಪರಿಶೀಲನೆಗೆ ಮೂವರು ಜಡ್ಜ್ ಗಳ ಸಮಿತಿ ರಚಿಸಿ ಅಧಿಸೂಚನೆ

ಬೆಂಗಳೂರು: ಕರಾವಳಿ ಭಾಗದಲ್ಲಿ ಹೈಕೋರ್ಟ್‌ ಪೀಠ ಸ್ಥಾಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಪೀಠ ಸ್ಥಾಪನೆಯ ಅಗತ್ಯತೆ ಹಾಗೂ ಸಾಧ್ಯತೆಗಳ ಕುರಿತು ಸಮಗ್ರವಾಗಿ ಪರಿಶೀಲಿಸಲು ಸಮಿತಿ ರಚಿಸಲಾಗಿದೆ.

ಹೌದು, ಕರಾವಳಿ ಕರ್ನಾಟಕ ಭಾಗದ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯ ಸಂಭಾವ್ಯತೆಗಳನ್ನು ಪರಿಶೀಲಿಸಲು ಮೂವರು ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯೊಂದನ್ನು ರಚಿಸಲಾಗಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆದೇಶದಂತೆ ರಚನೆಗೊಂಡಿರುವ ಈ ಸಮಿತಿಯಲ್ಲಿ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್, ನ್ಯಾ.ಎಸ್‌.ಜಿ.ಪಂಡಿತ್ ಹಾಗೂ ನ್ಯಾ.ಮೊಹಮ್ಮದ್ ನವಾಜ್ ಇದ್ದಾರೆ. ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಎಂ.ಚಂದ್ರಶೇಖರ ರೆಡ್ಡಿ ಅವರು ಮಂಗಳವಾರ ಅಧಿಸೂಚನೆ ಹೊರಡಿಸಿದ್ದಾರೆ.

ಕರಾವಳಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್‌ ವಿಭು ಬಕ್ರು ಅವರೊಂದಿಗೆ ನಿಯೋಗವೊಂದು ಇತ್ತೀಚೆಗೆ ಚರ್ಚೆ ನಡೆಸಿದ್ದು, ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಕರಾವಳಿ ಭಾಗದ ಜನರು ಹೈಕೋರ್ಟ್‌ ಪ್ರಕರಣಗಳಿಗಾಗಿ ಬೆಂಗಳೂರಿಗೆ ತೆರಳಬೇಕಾಗಿರುವ ಹಿನ್ನೆಲೆಯಲ್ಲಿ, ಮಂಗಳೂರು ಅಥವಾ ಕರಾವಳಿ ಭಾಗದಲ್ಲಿ ಪೀಠ ಸ್ಥಾಪನೆಯಾದರೆ ಸಾರ್ವಜನಿಕರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ ಎಂಬ ಅಭಿಪ್ರಾಯವನ್ನು ಬೇಡಿಕೆದಾರರು ವ್ಯಕ್ತಪಡಿಸಿದ್ದರು. ಮಳೆಗಾಲದಲ್ಲಿ ಘಾಟಿ ಪ್ರದೇಶಗಳ ಸಂಚಾರದ ಸಮಸ್ಯೆಯೂ ಎದುರಾಗುವುದರಿಂದ ಸ್ಥಳೀಯವಾಗಿ ನ್ಯಾಯಾಂಗ ಸೇವೆ ದೊರೆಯುವ ಅಗತ್ಯವಿದೆ ಎಂದು ಹೈಕೋರ್ಟ್‌ ಪೀಠ ಹೋರಾಟ ಸಮಿತಿಗಳು ಹೇಳಿವೆ.

ಹಾಗೆಯೇ ಇದೀಗ ರಚನೆಯಾಗಿರುವ ಪರಿಶೀಲನಾ ಸಮಿತಿಯು’ ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿನ ವಕೀಲರ ಸಂಘಗಳು, ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ವರದಿ ಸಲ್ಲಿಸಲಿದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕರಾವಳಿಯಲ್ಲಿ ಹೈಕೋರ್ಟ್‌ನ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಅಗತ್ಯತೆ, ಸಾಧ್ಯತೆ ಹಾಗೂ ಸಂಬಂಧಿತ ಅಂಶಗಳನ್ನು ಪರಿಶೀಲಿಸಲಿದೆ. ಸಮಿತಿಯ ಪರಿಶೀಲನಾ ವರದಿಯ ಬಳಿಕ ಈ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾದರೆ ಕಕ್ಷಿದಾರರು ಹಾಗೂ ವಕೀಲರಿಗೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.