07/03/2026

Law Guide Kannada

Online Guide

ಕೇವಲ 18 ತಿಂಗಳಿಗೆ ಬರೊಬ್ಬರಿಗೆ 18 ಕೋಟಿ ಜೀವನಾಂಶಕ್ಕೆ ಪತ್ನಿ ಡಿಮ್ಯಾಂಡ್: ದುಡಿದು ತಿನ್ನಿ ಎಂದು ಬುದ್ದಿವಾದ ಹೇಳಿದ ಸುಪ್ರೀಂಕೋರ್

ನವದೆಹಲಿ: ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ಪತಿ ಬಳಿ ಬರೊಬ್ಬರಿಗೆ 18 ಕೋಟಿ ಜೀವನಾಂಶಕ್ಕೆ ಡಿಮ್ಯಾಂಡ್ ಮಾಡಿದ ಪತ್ನಿಗೆ ದುಡಿದು ತಿನ್ನುವಂತೆ ಸುಪ್ರೀಂಕೋರ್ಟ್ ಬುದ್ದಿವಾದ ಹೇಳಿದೆ.

ಮದುವೆಯಾದ ಕೇವಲ 18 ತಿಂಗಳಿಗೆ ಡಿವೋರ್ಸ್ ಪಡೆಯುತ್ತಿರುವ ಮಹಿಳೆಯು ಪತಿಯಿಂದ ಜೀವನಾಂಶಕ್ಕೆ ಬರೋಬ್ಬರಿ 18 ಕೋಟಿ ರೂಪಾಯಿ ಆಸ್ತಿ, ಹಣ ಕೇಳಿದ್ದಾರೆ. 18 ಕೋಟಿ ಜೀವನಾಂಶ, ಬಿಎಂಡಬ್ಲ್ಯೂ ಕಾರು ಹಾಗೂ ಮುಂಬೈನಲ್ಲಿ ಮನೆಯನ್ನು ಪರಿಹಾರವಾಗಿ ನೀಡಬೇಕೆಂದು ಕೋರಿದ್ದ ಈ ಮಹಿಳೆಯೊಬ್ಬರಿಗೆ, ನೀವೇ ದುಡಿಯಬಹುದಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಮಹಿಳೆಯು ಐಟಿ ವೃತ್ತಿಪರೆ ಎಂಬ ವಿಚಾರ ಗಮನಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಮದುವೆಯಾದ 18 ತಿಂಗಳಿಗೆ ಐಷಾರಾಮಿ ಕಾರು ಬಯುಸುವಿರಾ? ನೀವು ವಿದ್ಯಾವಂತರು. ನೀವು ಹೀಗೆ ಕೇಳಬಾರದು. ನೀವೇ ದುಡಿದು ನಿಮ್ಮ ಜೀವನ ನಡೆಸಿ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮಹಿಳೆಗೆ ಬುದ್ದಿವಾದ ಹೇಳಿದ್ದಾರೆ.

ಡಿವೋರ್ಸ್ ಪಡೆಯುತ್ತಿರುವ ಮಹಿಳೆಯ ಜೀವನಾಂಶ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್ ಗವಾಯಿ ಅವರ ಪೀಠ, ಜೀವನಾಂಶವಾಗಿ ನಿಮಗೆ ಏನು ಬೇಕೆಂದು ಸಿಜೆಐ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮಹಿಳೆಯು ತನಗೆ ಮುಂಬೈನಲ್ಲಿ ಮನೆ, ಜೀವನಾಂಶವಾಗಿ 12 ಕೋಟಿ ರೂಪಾಯಿ, ಹೈ ಎಂಡ್ ಬಿಎಂಡಬ್ಲ್ಯು ಕಾರ್ ಬೇಕೆಂದು ಹೇಳಿದ್ದಾರೆ.

ಈ ವೇಳೆ ಸಿಜೆಐ ಬಿ.ಆರ್ ಗವಾಯಿ ಅವರು, ನೀವು ಉನ್ನತ ಶಿಕ್ಷಣ ಪಡೆದಿದ್ದೀರಿ. ನೀವು ನಿಮ್ಮ ಜೀವನಕ್ಕೆ ಬೇಕಾದಷ್ಟುನ್ನು ದುಡಿದು ಸಂಪಾದಿಸಿಕೊಳ್ಳಿ . ಆ ಮನೆ ಕಲ್ಪತರುವಿನಲ್ಲಿದೆ. ಒಳ್ಳೆಯ ಬಿಲ್ಡರ್ ಮನೆ ಕಟ್ಟಿದ್ದಾರೆ. ನೀವು ಐ.ಟಿ. ಕ್ಷೇತ್ರದ ವ್ಯಕ್ತಿ. ನೀವು ಎಂಬಿಎ ಓದಿದ್ದೀರಿ. ನಿಮಗೆ ಬೆಂಗಳೂರು, ಹೈದರಾಬಾದ್ನಲ್ಲಿ ಡಿಮ್ಯಾಂಡ್ ಇದೆ. ನೀವು ಏಕೆ ಉದ್ಯೋಗ ಮಾಡಬಾರದು? ನೀವು ಮದುವೆಯಾಗಿ 18 ತಿಂಗಳಷ್ಟೇ ಆಗಿದೆ. ನೀವು ಬಿಎಂಡಬ್ಲ್ಯು ಕಾರ್ ಕೂಡ ಬೇಕೆಂದು ಬಯಸುತ್ತಿದ್ದೀರಿ. ಪ್ರಾಕ್ಟೀಕಲ್ ಆಗಿ 18 ತಿಂಗಳ ಮದುವೆಗೆ 18 ಕೋಟಿ ರೂಪಾಯಿಯನ್ನು ಕೇಳುತ್ತಿದ್ದೀರಿ. ಪ್ರತಿ ತಿಂಗಳಿಗೆ 1 ಕೋಟಿ ರೂಪಾಯಿ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮಹಿಳೆಯು, ಪತಿ ಭಾರಿ ಶ್ರೀಮಂತರು. ನಾನು ಮಾನಸಿಕ ಅಸ್ವಸ್ಥೆ ಎಂದು ಕಾರಣ ನೀಡಿ ಮದುವೆಯನ್ನು ರದ್ದುಪಡಿಸಬೇಕೆಂದು ಕೇಳಿದ್ದಾರೆ. ನಾನು ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತೇನಾ ಎಂದು ಮಹಿಳೆ ಸಿಜೆಐ ಅವರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ನಿಮ್ಮ ಮಾಜಿ ಪತಿಯ ತಂದೆಯ ಆಸ್ತಿಯನ್ನು ನೀವು ಕೇಳುವಂತಿಲ್ಲ ಎಂದರು.

ತನ್ನ ಮಾಜಿ ಪತಿ ಸಿಟಿ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಎರಡು ಬ್ಯುಸಿನೆಸ್ಗಳೂ ಇವೆ . ನನಗೆ ಮಗು ಬೇಕು. ಆದರೇ, ಪತಿ ಮಗುವನ್ನು ನನ್ನ ವಶಕ್ಕೆ ನೀಡಿಲ್ಲ. ಪತಿಯೇ ನಾನು ಮಾನಸಿಕ ಅಸ್ವಸ್ಥೆ ಎಂದು ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು. ನನ್ನ ಮಾಜಿ ಪತಿಯೇ ಈ ಮೊದಲು ನಾನು ಇದ್ದ ಉದ್ಯೋಗವನ್ನು ತೊರೆಯುವಂತೆ ಬಲವಂತ ಮಾಡಿದ್ದರು ಎಂದು ಮಹಿಳೆ ವಾದಿಸಿದ್ದರು.ಆಗ ಸುಪ್ರೀಂಕೋರ್ಟ್ ಮಾಜಿ ಪತಿಯ ಟ್ಯಾಕ್ಸ್ ರಿಟರ್ನ್ಸ್ ಅನ್ನು ಪರಿಶೀಲಿಸಿತು.
ಇನ್ನೂ ಪತಿಯ ಪರ ಹಿರಿಯ ವಕೀಲೆ ಮಾಧವಿ ದಿವಾನ್ ವಾದ ಮಂಡಿಸಿದ್ದು, ಆಕೆಯೂ ಉದ್ಯೋಗ ಮಾಡಬೇಕು. ಎಲ್ಲವನ್ನೂ ಹೀಗೆ ಡಿಮ್ಯಾಂಡ್ ಮಾಡುವುದು ಸರಿಯಲ್ಲ. ಪತಿಯು ಉದ್ಯೋಗ ತೊರೆದ ಬಳಿಕ ಅವರ ಆದಾಯದಲ್ಲಿ ಇಳಿಕೆಯಾಗಿದೆ ಎಂದು ಪತಿ ಪರ ವಕೀಲೆ ಮಾಧವಿ ದಿವಾನ್, ಕೋರ್ಟ್ ಗಮನಕ್ಕೆ ತಂದರು.

ಪತಿಯಿಂದ ಪ್ಲ್ಯಾಟ್ ಪಡೆದು ತೃಪ್ತಿಪಡಿ, ಒಳ್ಳೆಯ ಉದ್ಯೋಗವನ್ನು ಹುಡುಕಿಕೊಳ್ಳಿ ಅಥವಾ ಆ 4 ಕೋಟಿ ಪಡೆದು, ಪುಣೆ, ಬೆಂಗಳೂರು, ಹೈದರಾಬಾದ್ನಲ್ಲಿ ಕೆಲಸ ಹುಡುಕಿಕೊಳ್ಳಿ. ನೀವು ಇಷ್ಟೊಂದು ಓದಿದ್ದೀರಿ. ನೀವು ನಿಮಗಾಗಿ ಕೇಳಬಾರದು. ನೀವು ದುಡಿದು ನಿಮ್ಮ ಅನ್ನ ಸಂಪಾದಿಸಿಕೊಂಡು ಜೀವನ ನಡೆಸಿ ಎಂದು ನ್ಯಾಯಪೀಠ , ಮಹಿಳೆಗೆ ಬುದ್ದಿವಾದ ಹೇಳಿತು.

ಈ ಕೇಸ್ನಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ ತನ್ನ ಆದೇಶವನ್ನು ಕಾಯ್ದಿರಿಸಿದ್ದು, ಸುಪ್ರೀಂಕೋರ್ಟ್ ಈ ಜೀವನಾಂಶ ಕೇಸ್ನಲ್ಲಿ ಆದೇಶ ನೀಡುವುದು ಬಾಕಿಯಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.