24/04/2026

Law Guide Kannada

Online Guide

ಪತಿ ಮತ್ತು ಕುಟುಂಬದವರ ವಿರುದ್ದ ಸುಳ್ಳು ಕೇಸ್: ಬಹಿರಂಗ ಕ್ಷಮೆಯಾಚಿಸಲು ಮಹಿಳಾ IPS ಅಧಿಕಾರಿಗೆ ಸುಪ್ರೀಂ ಆದೇಶ

ನವದೆಹಲಿ: ಪತಿ ಮತ್ತು ಕುಟುಂಬದವರ ವಿರುದ್ದ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ ಮಹಿಳಾ IPS ಅಧಿಕಾರಿಗೆ ಬಹಿರಂಗ ಕ್ಷಮಾಪಣೆ ಕೇಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮಾಜಿ ಪತಿ ಹಾಗೂ ಮಾವನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಮಹಿಳಾ ಐಪಿಎಸ್ ಅಧಿಕಾರಿ ಜೈಲಿಗೆ ಕಳಿಸಿದ್ದರು. ವರದಕ್ಷಿಣೆ ಕಿರುಕುಳ , ಹಲ್ಲೆ, ರೇಪ್ ಸೇರಿದಂತೆ ಅನೇಕ ಸುಳ್ಳು ಕೇಸ್ ಹಾಕಿ ಮಾಜಿ ಪತಿ ಹಾಗೂ ಮಾವನಿಗೆ ಮಾನಸಿಕ ಕಿರುಕುಳವನ್ನು ನೀಡಿದ್ದಾರೆಂದು ಮಹಿಳಾ ಐಪಿಎಸ್ ಅಧಿಕಾರಿ ವಿರುದ್ದ ದೂರು ನೀಡಲಾಗಿತ್ತು.

ಇದೀಗ ಮಹಿಳಾ ಐಪಿಎಸ್ ಅಧಿಕಾರಿಗೆ ತನ್ನ ಮಾಜಿ ಪತಿ, ಪತಿಯ ಪೋಷಕರಿಗೆ ಬೇಷರತ್ ಆಗಿ ಪತ್ರಿಕೆಗಳ ಮೂಲಕ ಕ್ಷಮೆ ಕೇಳಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಮಹಿಳಾ ಐಪಿಎಸ್ ಅಧಿಕಾರಿ ಹಾಗೂ ಆಕೆಯ ಪೋಷಕರು ತಮ್ಮ ಕ್ಷಮಾಪಣೆಯನ್ನು ರಾಷ್ಟ್ರ ಮಟ್ಟದ ಪ್ರಮುಖ ಇಂಗ್ಲಿಷ್, ಹಿಂದಿ ಪತ್ರಿಕೆಗಳಲ್ಲಿ ಪ್ರಕಟಿಸಲು ಸೂಚನೆ ನೀಡಿದೆ. ಸೋಷಿಯಲ್ ಮೀಡಿಯಾಗಳಲ್ಲೂ ಕ್ಷಮಾಪಣೆ ಕೇಳಬೇಕೆಂದು ಸೂಚನೆ ನೀಡಿದೆ.

ಮಹಿಳಾ ಐಪಿಎಸ್ ಅಧಿಕಾರಿಯು ಪತಿ ಹಾಗೂ ಅವರ ಪೋಷಕರ ವಿರುದ್ಧ 6 ಪ್ರತ್ಯೇಕ ಕ್ರಿಮಿನಲ್ ಕೇಸ್ಗಳನ್ನು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 498(ಎ) ಅಡಿ ಕೌಟುಂಬಿಕ ದೌರ್ಜನ್ಯದ ಕೇಸ್, ಐಪಿಸಿ ಸೆಕ್ಷನ್ 307ರಡಿ ಕೊಲೆ ಯತ್ನ ಕೇಸ್, ಐಪಿಸಿ ಸೆಕ್ಷನ್ 376ರಡಿ ರೇಪ್ ಕೇಸ್, ಐಪಿಸಿ ಸೆಕ್ಷನ್ 406ರಡಿ ಕ್ರಿಮಿನಲ್ ನಂಬಿಕೆ ದ್ರೋಹ ಕೇಸ್ ದಾಖಲಿಸಿದ್ದರು. ಇವುಗಳಲ್ಲದೇ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಮೂರು ಕೇಸ್ ದಾಖಲಿಸಿದ್ದರು. ಕೌಟುಂಬಿಕ ಕೋರ್ಟ್ ನಲ್ಲಿ ಡಿವೋರ್ಸ್ ಮತ್ತು ಜೀವನಾಂಶ ಕೋರಿಯೂ ಅರ್ಜಿ ಸಲ್ಲಿಸಿದ್ದರು.

ಮಹಿಳಾ ಐಪಿಎಸ್ ಅಧಿಕಾರಿಯ ಸುಳ್ಳು ಕೇಸ್ನಿಂದಾಗಿ 109 ದಿನ ಮಹಿಳೆಯ ಪತಿ ಜೈಲಿನಲ್ಲಿದ್ದರು. ಮಹಿಳೆಯ ಮಾವ 103 ದಿನ ಜೈಲಿನಲ್ಲಿದ್ದರು. ಮಹಿಳೆಯ ಪತಿ, ಮಾವನಿಗಾದ ನೋವು, ಅಪಮಾನ, ಹಿಂಸೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಯಾವ ಯಾವ ಅಂಶಗಳನ್ನು ಉಲ್ಲೇಖಿಸಿ ಕ್ಷಮಾಪಣೆ ಕೇಳಬೇಕು ಎಂಬುವುದರ ಬಗ್ಗೆಯೂ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಜೊತೆಗೆ ಮಹಿಳಾ ಐಪಿಎಸ್ ಅಧಿಕಾರಿಯೂ ತನ್ನ ಹುದ್ದೆ, ಅಧಿಕಾರವನ್ನು ಬಳಸಿಕೊಂಡು, ತನ್ನ ಸಹೋದ್ಯೋಗಿಗಳ ಅಧಿಕಾರವನ್ನು ಬಳಸಿಕೊಂಡು, ಮೂರನೇ ವ್ಯಕ್ತಿಗಳನ್ನು ಬಳಸಿಕೊಂಡು ಯಾವುದೇ ಕೇಸ್ ಗಳನ್ನು ಮಾಜಿ ಪತಿ ಹಾಗೂ ಅವರ ಪೋಷಕರ ವಿರುದ್ಧ ದಾಖಲಿಸಬಾರದು ಎಂದು ಕೂಡ ಸ್ಪಷ್ಟವಾಗಿ ಹೇಳಿದೆ.

ಸಂವಿಧಾನದ 142ನೇ ವಿಧಿಯಡಿ ತನಗೆ ಇರುವ ಅಧಿಕಾರವನ್ನು ಬಳಸಿಕೊಂಡು ದಂಪತಿಗೆ ವಿವಾಹ ವಿಚ್ಛೇದನವನ್ನು ಸುಪ್ರೀಂ ಕೋರ್ಟ್ ಮಂಜೂರು ಮಾಡಿದೆ. ಪತಿಯ ವಿರುದ್ಧ ಸಾಕಷ್ಟು ಕೇಸ್ ಹಾಕಿರುವುದರಿಂದ ಇಬ್ಬರು ಮತ್ತೆ ಒಂದಾಗುವ ಸಾಧ್ಯತೆ ಇಲ್ಲದಿರುವುದರಿಂದ ಡಿವೋರ್ಸ್ ಮಂಜೂರು ಮಾಡುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ವಿವಾಹ ವಿಚ್ಛೇದನ ಪಡೆದ ದಂಪತಿಯ ಮಗಳನ್ನು ಮಹಿಳಾ ಐಪಿಎಸ್ ಅಧಿಕಾರಿಯ ವಶಕ್ಕೆ ಸುಪ್ರೀಂ ಕೋರ್ಟ್ ನೀಡಿದೆ. ಪತಿ, ಪೋಷಕರಿಗೆ ಮಗಳನ್ನು ಭೇಟಿಯಾಗಲು ಅವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಸುಪ್ರೀಂ ಕೋರ್ಟ್ನ ಸಿಜೆಐ ಬಿ.ಆರ್.ಗವಾಯಿ ಪೀಠ ಈ ಮಹತ್ವದ ಆದೇಶವನ್ನು ನೀಡಿದೆ. ಪತಿ ಹಾಗೂ ಅವರ ಕುಟುಂಬದವರ ವಿರುದ್ಧ ದಾಖಲಿಸಿರುವ ಎಲ್ಲಾ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಗಳನ್ನು ರದ್ದುಪಡಿಸಿರುವುದಾಗಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿದೆ.

ವರದಕ್ಷಿಣೆ ಕಿರುಕುಳ ತಡೆಗೆ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಕುಟುಂಬ ಕಲ್ಯಾಣ ಸಮಿತಿಗಳು ಇರಬೇಕೆಂಬ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಅನುಮೋದಿಸಿದೆ. ವೈವಾಹಿಕ ವಿವಾದಗಳಲ್ಲಿ ಐಪಿಸಿ ಸೆಕ್ಷನ್ 498(ಎ) ದುರ್ಬಳಕೆ ತಡೆಗೆ ಕುಟುಂಬ ಕಲ್ಯಾಣ ಸಮಿತಿಯ ಮೂಲಕ ಕ್ರಮಗಳನ್ನ ಕೈಗೊಳ್ಳಬೇಕೆಂದು ಈ ಹಿಂದೆಯೇ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ವರದಕ್ಷಿಣೆ ತಡೆ ಕಾಯಿದೆಯ ದುರ್ಬಳಕೆಗೆ ತಡೆಗೆ ಹೈಕೋರ್ಟ್ ನೀಡಿರುವ ಮಾರ್ಗಸೂಚಿಗಳು ಮುಂದೆಯೂ ಜಾರಿಯಲ್ಲಿರುತ್ತವೆ. ಪೊಲೀಸ್ ಅಧಿಕಾರಿಗಳು ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.