ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ಮಾತ್ರಕ್ಕೆ ಪೌರತ್ವ ಕಳೆದುಕೊಳ್ಳುವುದಿಲ್ಲ- ಸುಪ್ರೀಂಕೋರ್ಟ್
ನವದೆಹಲಿ: ದೇಶದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಯುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿ ಹೋದರೆ ಪೌರತ್ವ ರದ್ದಾಗುತ್ತದೆಯೇ ಎಂದು ಆತಂಕಕ್ಕೊಳಗಾಗುವವರಿಗೆ ಸುಪ್ರೀಂಕೋರ್ಟ್ ಸಿಹಿಸುದ್ದಿಯನ್ನ ನೀಡಿದೆ.
ಹೌದು, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದರಿಂದ ವ್ಯಕ್ತಿಯೊಬ್ಬರು ತನ್ನ ಪೌರತ್ವವನ್ನು ಸ್ವಯಂಚಾಲಿತವಾಗಿ ಕಳೆದುಕೊಳ್ಳುವುದಿಲ್ಲ. ಮತದಾರ ಪಟ್ಟಿಯಿಂದ ಹೆಸರು ಕೈಬಿಟ್ಟ ಮಾತ್ರಕ್ಕೆ ಪೌರತ್ವ ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮತ್ತೆ ಸ್ಪಷ್ಟಪಡಿಸಿದೆ.
ಪ್ರಸೇನ್ ಜಿತ್ ಬೋಸ್ ಎಂಬುವರು ಮೇಲ್ಮನವಿ ನ್ಯಾಯಮಂಡಳಿಗಳಲ್ಲಿ ವಿಚಾರಣೆ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಯಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬಿಹಾರದ ಎಸ್ಐಆರ್ ಕುರಿತು ತಾನು ಈ ಹಿಂದೆ ಹೊರಡಿಸಿದ್ದ ತೀರ್ಪನ್ನು ಪುನರುಚ್ಛರಿಸಿದ ನ್ಯಾಯಪೀಠವು, ಪೌರತ್ವವನ್ನು ನಿರ್ಧರಿಸಲು ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಲ್ಲ ಎಂಬುದನ್ನು ಒತ್ತಿ ಹೇಳಿದೆ.
ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಎಸ್ಐಆರ್ ನಂತರ ಮತದಾರರ ಪಟ್ಟಿಯಿಂದ ಹೊರಗಿರುವವರು ತಳಮಟ್ಟದಲ್ಲಿ ಎದುರಿಸುತ್ತಿರುವ ಪರಿಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
‘ಪಶ್ಚಿಮ ಬಂಗಾಳದ 19 ಮೇಲ್ಮನವಿ ನ್ಯಾಯಮಂಡಳಿಗಳ ಮುಂದೆ ಸದ್ಯಕ್ಕೆ ಬರೋಬ್ಬರಿ 34 ಲಕ್ಷ ಮೇಲ್ಮನವಿಗಳು ಬಾಕಿ ಉಳಿದಿದೆ. ಈಗಾಗಲೇ ಇಬ್ಬರು ನ್ಯಾಯಾಧೀಶರು ರಾಜೀನಾಮೆ ನೀಡಿದ್ದಾರೆ. ಇದುವರೆಗೆ ಕೇವಲ 38,000 ಮೇಲ್ಮನವಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. ವಿಲೇವಾರಿಯಾದ ಮೇಲ್ಮನವಿಗಳ ಪೈಕಿ ಶೇ 70 ರಷ್ಟು ಪ್ರಕರಣಗಳಲ್ಲಿ ಹೆಸರುಗಳನ್ನು ಮರುಸೇರ್ಪಡೆಗೊಳಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
‘ನ್ಯಾಯಾಲಯದಲ್ಲಿ ಮೇಲ್ಮನವಿಗಳು ಬಾಕಿಯಿದ್ದರೂ ಪಶ್ಚಿಮ ಬಂಗಾಳ ಸರ್ಕಾರವು ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರಿಗೆ ಅನ್ನಪೂರ್ಣ ಯೋಜನೆ, ಜಾತಿ ಪ್ರಮಾಣಪತ್ರಗಳ ಸೌಲಭ್ಯಗಳನ್ನು ನಿರಾಕರಿಸಿ ಅಧಿಸೂಚನೆಗಳನ್ನು ಹೊರಡಿಸಿದೆ. ಮೇಲ್ಮನವಿಗಳು ಬಾಕಿ ಇರುವಾಗ ಇಂತಹ ಸೌಲಭ್ಯಗಳನ್ನು ನಿರಾಕರಿಸಬಾರದು ಎಂದು ಸ್ಪಷ್ಟಪಡಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸುವ ಅಥವಾ ಹೊರಗಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದೇ ಹೊರತು, ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
