18/07/2026

Law Guide Kannada

Online Guide

ಕೇವಲ ಬೈಗುಳ ಮತ್ತು ಕೆಟ್ಟ ಭಾಷೆ ಬಳಕೆಯು ‘ಅಶ್ಲೀಲತೆ’ ಎನಿಸುವುದಿಲ್ಲ- FIR ರದ್ದುಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಕೇವಲ ಬೈಗುಳ ಮತ್ತು ಕೆಟ್ಟ ಭಾಷೆ ಬಳಕೆಯು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294ರ ಅಡಿಯಲ್ಲಿ ‘ಅಶ್ಲೀಲತೆ’ ಎನಿಸುವುದಿಲ್ಲ. ಬೈಗುಳಗಳು ಅಸಭ್ಯವಾಗಿದ್ದರೂ, ಅವುಗಳಲ್ಲಿ ಲೈಂಗಿಕ ಪ್ರಚೋದನೆಯ ಅಂಶವಿಲ್ಲದಿದ್ದರೇ ಅದು ಅಶ್ಲೀಲತೆ ಎಂದೆನಿಸಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ವಿವರಣೆ ನೀಡಿದೆ.

ಉತ್ತರ ಪ್ರದೇಶದಲ್ಲಿ ಆಸ್ತಿ ವಿವಾದವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯು ದೂರುದಾರರಿಗೆ ಅತ್ಯಂತ ಅಸಭ್ಯ ಪದಗಳಿಂದ ನಿಂದಿಸಿದ್ದ ಎಂಬ ಆರೋಪ ಇತ್ತು. ಈ ಪ್ರಕರಣದಲ್ಲಿ ಎಫ್ ಐಆರ್ ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.

ತನ್ನ ವಿರುದ್ದ ದಾಖಲಾಗಿದ್ದ ಎಫ್ ಐಆರ್ (FIR) ಒಂದನ್ನು ರದ್ದುಗೊಳಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ಸಂಜಯ್ ಕರೋಲ್ ಅವರಿದ್ದ ದ್ವಿ ಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪ್ರಸ್ತುತ ಪ್ರಕರಣದಲ್ಲಿ, ಆರೋಪಿಗಳು ಬಳಸಿದ್ದಾರೆ ಎನ್ನಲಾದ ಬೈಗುಳಗಳು ಅಸಭ್ಯವಾಗಿದ್ದರೂ, ಅವುಗಳಲ್ಲಿ ಲೈಂಗಿಕ ಪ್ರಚೋದನೆಯ ಅಂಶವಿರಲಿಲ್ಲ. ಕೇವಲ ಬೈಗುಳ ಅಥವಾ ಅಸಭ್ಯ ಮತ್ತು ಅಸಹ್ಯಕರ ಭಾಷೆ ಬಳಸುವುದು ‘ಅಶ್ಲೀಲತೆ’ (Obscenity) ಎನಿಸುವುದಿಲ್ಲ. ಒಂದು ಮಾತನ್ನು ಅಶ್ಲೀಲ ಎಂದು ಕಾನೂನಿನಡಿ ಪರಿಗಣಿಸಬೇಕಾದರೆ, ಅದು ಲೈಂಗಿಕ ಪ್ರಚೋದನೆ ನೀಡುವಂತಿರಬೇಕು (Lascivious) ಅಥವಾ ಕೇಳುಗರಲ್ಲಿ ಕಾಮಪ್ರಚೋದಕ ಆಸಕ್ತಿಯನ್ನು (Prurient interest) ಕೆರಳಿಸುವಂತಿರಬೇಕು ಎಂದು ನ್ಯಾಯಪೀಠವು ಮಹತ್ವದ ಸ್ಪಷ್ಟೀಕರಣ ನೀಡಿದೆ.

ಕಾನೂನಿನ ಅಡಿ ‘ಅಶ್ಲೀಲತೆ’ ವ್ಯಾಖ್ಯಾನ…!
ಸೆಕ್ಷನ್ 294ರ ಅಡಿಯಲ್ಲಿ ಒಂದು ಕೃತ್ಯ ಅಥವಾ ಮಾತನ್ನು ಅಶ್ಲೀಲ ಎಂದು ಪರಿಗಣಿಸಲು, ಅದು ಲೈಂಗಿಕ ಸ್ವರೂಪದ್ದಾಗಿರಬೇಕು ಎಂಬುದು ಕಾನೂನಿನ ಮೂಲಭೂತ ಅವಶ್ಯಕತೆ ಎಂದು ನ್ಯಾಯಪೀಠ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ, ಆರೋಪಿಗಳು ಬಳಸಿದ್ದಾರೆ ಎನ್ನಲಾದ ಬೈಗುಳಗಳು ಅಸಭ್ಯವಾಗಿದ್ದರೂ, ಅವುಗಳಲ್ಲಿ ಲೈಂಗಿಕ ಪ್ರಚೋದನೆಯ ಅಂಶವಿರಲಿಲ್ಲ. ಈ ಸಾಮಾನ್ಯ ಬೈಗುಳಗಳು ಅವಮಾನಿಸುವ ಉದ್ದೇಶ ಹೊಂದಿದ್ದವೇ ಹೊರತು, ಲೈಂಗಿಕ ಆಸಕ್ತಿ ಕೆರಳಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು, ಆರೋಪಿಗಳ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿ ಆದೇಶಿಸಿತು.

IPC ಸೆಕ್ಷನ್ 294 ಅನ್ವಯಕ್ಕೆ ಈ ಕೆಳಕಂಡ ಎರಡು ಅಂಶಗಳು ಕಡ್ಡಾಯ!

ಐಪಿಸಿ ಸೆಕ್ಷನ್ 294ರ (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ/ಮಾತು) ಅಡಿಯಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬೇಕಾದರೆ ಕೋರ್ಟ್ನಲ್ಲಿ ಈ ಎರಡು ಪ್ರಮುಖ ಅಂಶಗಳನ್ನು ಸಾಬೀತುಪಡಿಸಬೇಕು:

ಸಾರ್ವಜನಿಕ ಸ್ಥಳ: ಆ ಕೃತ್ಯ ಅಥವಾ ನಿಂದನೆ ಕಡ್ಡಾಯವಾಗಿ ಸಾರ್ವಜನಿಕ ಸ್ಥಳದಲ್ಲೇ ನಡೆದಿರಬೇಕು.
ಇತರರಿಗೆ ಕಿರಿಕಿರಿ: ಆ ವರ್ತನೆಯಿಂದ ಸಾರ್ವಜನಿಕರಿಗೆ ಅಥವಾ ಇತರರಿಗೆ ತೊಂದರೆ/ಕಿರಿಕಿರಿಯಾಗಿರಬೇಕು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.