23/04/2026

Law Guide Kannada

Online Guide

ಮಠ, ದೇಗುಲಕ್ಕೆ ಅಗತ್ಯವಿರುವ ಶ್ರೀಗಂಧ ಅವರೇ ಬೆಳೆದುಕೊಳ್ಳಲು ಅವಕಾಶವಿದೆಯೇ? ಹೈಕೋರ್ಟ್ ಕೊಟ್ಟ ನಿರ್ದೇಶನವೇನು?

ಬೆಂಗಳೂರು: ಮಠ, ದೇಗುಲಕ್ಕೆ ಅಗತ್ಯವಿರುವ ಶ್ರೀಗಂಧ ಅವರೇ ಬೆಳೆದುಕೊಳ್ಳಲು ಅವಕಾಶಕ್ಕೆ ಸಂಬಂಧಿಸಿದಂತೆ ಪರಿಶೀಲಿಸುವಂತೆ ಅರಣ್ಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ಮಠಕ್ಕೆ ಅಗತ್ಯವಿರುವ ಶ್ರೀಗಂಧ ಪೂರೈಕೆ ಮಾಡದ ಉಡುಪಿಯ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ ಶ್ರೀ ಕೃಷ್ಣಮಠ ಹೈಕೋರ್ಟ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠವು ಉಡುಪಿಯ ಶ್ರೀ ಕೃಷ್ಣ ಮಠದಂತಹ ದೇವಾಲಯಗಳು ತಮ್ಮ ಧಾರ್ಮಿಕ ಕಾರ್ಯಗಳಿಗೆ ಅಗತ್ಯವಿರುವ ಶ್ರೀಗಂಧವನ್ನು ಅವರೇ ಬೆಳೆದುಕೊಳ್ಳಬಹುದೇ ಎಂಬುದರ ಕುರಿತು ಪರಿಶೀಲಿಸಿ ಎಂದು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ. ಅಲ್ಲದೆ ಅವಕಾಶವಿದ್ದಲ್ಲಿ ಅಗತ್ಯ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ಜೊತೆಗೆ ಅರ್ಜಿದಾರ ಮಠ 10 ಕೆ.ಜಿ. ಶ್ರೀಗಂಧಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿದ್ದು ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಶ್ರೀಗಂಧವನ್ನು ಅನ್ವಯಿಸುವ ನೀತಿಯಂತೆ ಪೂರೈಕೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಏನಿದು ಕೇಸ್…?
ಉಡುಪಿಯ ಕೃಷ್ಣ ಮಠದಲ್ಲಿನ ಕೃಷ್ಣನ ಮೂರ್ತಿಗೆ ಹೂವಿನ ಅಲಂಕಾರದೊಂದಿಗೆ ಶ್ರೀಗಂಧ ಬಳಿಯುವುದು ಪದ್ಧತಿ. ಹೀಗಾಗಿ ಈ ಪೂಜಾ ಕೈಂಕರ್ಯಗಳಿಗಾಗಿ ಸರ್ಕಾರದ ಹಲವು ವರ್ಷಗಳಿಂದ 1087 ಕೆ.ಜಿ ಶ್ರೀಗಂಧವನ್ನು ಮಠಕ್ಕೆ ಒದಗಿಸುತ್ತಿತ್ತು. ಆದರೆ, 2004-05ನೇ ಸಾಲಿನಲ್ಲಿ 1087 ಶ್ರೀಗಂಧ ನೀಡುವ ಸಂಬಂಧ ಚಲನ್ ಸಿದ್ದಪಡಿಸಿದ್ದರೂ, ಅದನ್ನು ತಿದ್ದಿ ಕೇವಲ 239 ಕೆ.ಜಿ ಮಾತ್ರ ನೀಡಲಾಗಿತ್ತು. ಬಳಿಕ 2007ರಲ್ಲಿ 100 ಕೆ.ಜಿ. ಶ್ರೀಗಂಧ ನೀಡಲಾಗಿತ್ತು. ಇನ್ನುಳಿದ ಪ್ರಮಾಣವನ್ನು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ 2007ರಲ್ಲಿ ಮಠ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆಯಲ್ಲಿರುವ ಸಂದರ್ಭದಲ್ಲಿಯೇ ಸ್ವಲ್ಪ ಪ್ರಮಾಣದ ಶ್ರೀಗಂಧವನ್ನು ಮಂಜೂರು ಮಾಡಿತ್ತು. ಇದರಿಂದ ಅರ್ಜಿಯನ್ನು ಹಿಂಪಡೆದುಕೊಂಡಿತ್ತು.

ಇದಾದ ನಂತರ ಅಂದರೆ 2009 ಮತ್ತು 2010ರಲ್ಲಿ ಶ್ರೀಗಂಧ ಬಿಡುಗಡೆಗೆ ಕೋರಿದ್ದರೂ, ದೇವಾಲಯವನ್ನು ಮುಜರಾಯಿ ಇಲಾಖೆಯಿಂದ ಕೈಬಿಡಲಾಗಿತ್ತು., 2011ರಲ್ಲಿ ಶ್ರೀಗಂಧ ಒದಗಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಶ್ರೀಕೃಷ್ಣಮಠ ಮತ್ತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಪೀಠವು, 1921ರಲ್ಲಿ ಶ್ರೀ ಮಠಕ್ಕೆ 1087 ಕೆಜಿ ಶ್ರೀಗಂಧ ಉಚಿತವಾಗಿ ಒದಗಿಸುವುದಾಗಿ ತಿಳಿಸಲಾಗಿತ್ತು. ಅದರಂತೆ 1976ರವರೆಗೂ ಅಷ್ಟೇ ಪ್ರಮಾಣದ ಶ್ರೀಗಂಧ ಒದಗಿಸಲಾಗಿದ್ದು ಅದನ್ನು ಮುಂದುವರಿಸಬೇಕು ಎಂದು ಅರ್ಜಿದಾರರ ಕೋರಿದ್ದಾರೆ. ಆದರೆ, ಬದಲಾದ ಸಂದರ್ಭಗಳು ಮತ್ತು ಕರ್ನಾಟಕ ಅರಣ್ಯ ಕಾಯ್ದೆ ಜಾರಿಯಿಂದ ಶ್ರೀಗಂಧ ಮರಗಳ ಸಂರಕ್ಷಣೆ ಅಗತ್ಯವಿದೆ. ಜತೆಗೆ ಬೆಳೆಸುತ್ತಿದ್ದ ಶ್ರೀಗಂಧದ ಮರಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಿವಿಧ ಉದ್ದೇಶಗಳಿಂದ ಶ್ರೀಗಂಧದ ಮರಗಳನ್ನು ಕತ್ತರಿಸಲಾಗಿದೆ. ಹೀಗಾಗಿ ಶ್ರೀಗಂಧದ ಪೂರೈಕೆ ಪ್ರಮಾಣದಲ್ಲಿ ಕೊರತೆಯಾಗಿದೆ.ಆದ್ದರಿಂದ ಶ್ರೀಗಂಧದ ಲಭ್ಯತೆಯ ಆಧಾರದಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರ ಹೊರಡಿಸುವ ಆದೇಶಗಳಂತೆ ಪರಿಹಾರ ಪಡೆಯುವುದು ಶ್ರೀಮಠಕ್ಕೆ ಲಭ್ಯವಿರುವ ಪರಿಹಾರವಾಗಿದೆ.

ಹೀಗಾಗಿ ಮಠವು ತನಗೆ ಅಗತ್ಯವರುವ ಶ್ರೀಗಂಧವನ್ನು ತಾನೇ ಸ್ವತಃ ಬೆಳೆಯುವುದಕ್ಕೆ ಅವಕಾಶ ಕಲ್ಪಿಸುವ ಸಂಬಂಧ ಪರಿಶೀಲಿಸಿ ನಿಯಮಗಳನ್ನು ರೂಪಿಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ. ಮಠದ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್, ಸರ್ಕಾರದ ಪರ ಮಹಾಂತೇಶ್ ಶೆಟ್ಟರ್ ವಾದಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.