23/04/2026

Law Guide Kannada

Online Guide

ಪತ್ನಿಯ ಅನೈತಿಕ ಸಂಬಂಧದಿಂದ ಜನಿಸಿದ ಮಗುವಿಗೆ ಪತಿಯೇ ಕಾನೂನುಬದ್ದ ತಂದೆ: ಸುಪ್ರೀಂ ಕೋರ್ಟ್

ನವದೆಹಲಿ: ಮದುವೆಯಾದ ಬಳಿಕ ವಿವಾಹಿತೆಯ ಅನೈತಿಕ ಸಂಬಂಧದಿಂದ ಜನಿಸಿದ ಮಗುವಿಗೆ ಪತಿಯೇ ಕಾನೂನುಬದ್ದ ತಂದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ವಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ರ ಅಡಿಯಲ್ಲಿ, ಮಾನ್ಯ ವಿವಾಹದ ಸಮಯದಲ್ಲಿ ಜನಿಸಿದ ಮಗುವನ್ನು ಪತಿಯ ಕಾನೂನುಬದ್ಧ ಮಗು ಎಂದೇ ಊಹಿಸಲಾಗುತ್ತದೆ ಎಂದು ಹೇಳಿದೆ.

ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ನೋಡಿದರೆ, ಕಾನೂನುಬದ್ದ ಮಗು ಅಂದರೆ ಮಾನ್ಯವಾದ ವಿವಾಹ ಸಂಬಂಧ ಮುಂದುವರಿದಿರುವ ಅವಧಿಯಲ್ಲಿ ಜನಿಸಿದ ಮಗು ಎಂದರೆ ಅದು ಯಾವಾಗಲೂ ಆ ವಿವಾಹದಲ್ಲಿರುವ ವ್ಯಕ್ತಿಗಳ ಜೈವಿಕ (biological) ಮಗು ಅಗಿರಬೇಕೆಂದೇನೂ ಇಲ್ಲ. ಕೇವಲ ವ್ಯಭಿಚಾರದ ಆರೋಪಗಳ ಆಧಾರದ ಮೇಲೆ ಡಿಎನ್ ಎ ಪರೀಕ್ಷೆಗೆ ಆದೇಶ ನೀಡುವುದು, ಪುರುಷನ ಗೌರವ ಮತ್ತು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಅನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ಆ ಮಗುವಿನ ನಿಜವಾದ ತಂದೆ ಯಾರೇ ಇದ್ದರೂ, ಮಹಿಳೆಯ ಕಾನೂನುಬದ್ಧ ಪತಿಯೇ ಮಗುವಿನ ಅಪ್ಪ ಎನ್ನಿಸಿಕೊಳ್ಳುತ್ತಾನೆ. ಯಾವುದೇ ತಪ್ಪು ಮಾಡದ ಮಗುವನ್ನು ಕಳಂಕದಿಂದ ರಕ್ಷಿಸುವುದು ಮುಖ್ಯವಾಗುತ್ತದೆ. ಆದ್ದರಿಂದ ಮದುವೆಯಾದ ಬಳಿಕ ದಂಪತಿ ನಡುವೆ ದೈಹಿಕ ಸಂಬಂಧ ಇದ್ದರೆ, ಆ ಮಗು ಬೇರೆವರಿಗೆ ಹುಟ್ಟಿದರೂ ಮಹಿಳೆ ಕಾನೂನುಬದ್ಧ ಗಂಡನೇ ಆ ಮಗುವಿನ ಅಪ್ಪ ಆಗುತ್ತಾನೆ ಎಂದು ನ್ಯಾಯಪೀಠವು ತಿಳಿಸಿದೆ.

ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಅನ್ನು ಉಲ್ಲೇಖಿಸಿ ವಿವಾಹ ಸಂಬಂಧ ಜಾರಿಯಲ್ಲಿರುವ ಅವಧಿಯಲ್ಲಿ ಪತ್ನಿಯಿಂದ ಜನಿಸಿದ ಮಗುವಿನ ತಂದೆ ಪತಿಯೇ ಎಂಬ ಬಲವಾದ ಕಾನೂನು ಊಹೆ ಅಸ್ತಿತ್ವದಲ್ಲಿದೆ ಎಂದು ಹೇಳಿತು.

“ಈ ತತ್ವದ ಉದ್ದೇಶವು ಮಗುವಿನ ಪೋಷಕತ್ವದ ಕುರಿತು ಅನಗತ್ಯ ವಿಚಾರಣೆಗಳನ್ನು, ತಡೆಯುವುದಾಗಿದೆ. ಕಾನೂನು ಬದ್ದತೆಯ ಪರವಾಗಿಯೇ ಊಹೆ ಇರುವುದರಿಂದ, ‘ಅಕ್ರಮ ಸಂತಾನ’ (illegitimacy) ಎಂದು ವಾದಿಸುವ ವ್ಯಕ್ತಿಯ ಮೇಲೆಯೇ, ಪತಿ-ಪತ್ನಿಗಳ ನಡುವೆ ಸಂಪರ್ಕ ಇರಲಿಲ್ಲ’ (non-access) ಎಂಬುದನ್ನು ಸಾಬೀತುಪಡಿಸುವ ಹೊಣೆ ಬರುತ್ತದೆ,” ಎಂದು ಪೀಠ ಹೇಳಿದೆ.

ಸಾಮಾನ್ಯವಾಗಿ ಕಾನೂನುಬದ್ಧತೆಯ ಕುರಿತು ಇರುವ ಪ್ರಕರಣಗಳಲ್ಲಿ, ಮೊದಲಿಗೆ ರಕ್ಷಿಸಬೇಕಾಗಿರುವುದು ಮಗುವಿನ ಗೌರವ ಮತ್ತು ಗೌಪ್ಯತೆ. ೇಕೆಂದರೆ ಇಂತಹ ವಿವಾದಗಳಲ್ಲಿ ಮೊದಲ ಗುರಿಯಾಗುವುದು ಮಗುವು ಆಗಿರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಒಂದು ತೀರ್ಪಿನಲ್ಲಿ, ಮಗುವಿನ ಕಾನೂನುಬದ್ಧತೆ ಕುರಿತ ಸಮಕಾಲೀನ ನಿರ್ಣಯಗಳಿಂದ ಸ್ವತಂತ್ರವಾಗಿ ಪಿತೃತ್ವವನ್ನು ನಿರ್ಧರಿಸಬಹುದು’ ಎಂಬ ಕೇರಳ ಹೈಕೋರ್ಟ್ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ, ಇಂತಹ ದೃಷ್ಟಿಕೋನವನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದೆ.

‘ಪಿತೃತ್ವ’ ಮತ್ತು ‘ಕಾನೂನುಬದ್ಧತೆ’ ಎರಡು ವಿಭಿನ್ನ ಅಥವಾ ಸ್ವತಂತ್ರ ಕಲ್ಪನೆಗಳೆಂಬ ಹೈಕೋರ್ಟ್ ಮುಂದೆ ಮುಂದಿಟ್ಟ ವಾದವು ತಪ್ಪು ದಾರಿಯಲ್ಲಿ ನಡೆದ ಕಲ್ಪನೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ, ಹೈಕೋರ್ಟ್ 2018ರ ಆದೇಶದ ವಿರುದ್ಧ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತು. ಆ ಆದೇಶವು ಕುಟುಂಬ ನ್ಯಾಯಾಲಯದ 2015ರ ಆದೇಶವನ್ನು ಮಾನ್ಯಗೊಳಿಸಿ, 23 ವರ್ಷದ ಯುವಕನೊಬ್ಬನು ತನ್ನ ವಿರುದ್ಧ ಸಲ್ಲಿಸಿದ್ದ ಪೋಷಣಾ ಧನದ ಬೇಡಿಕೆಯನ್ನು ಪುನರ್ಜೀವಗೊಳಿಸಿತ್ತು.

ಆ ಯುವಕನು, 2001ರಲ್ಲಿ ತನ್ನ ತಾಯಿ ವಿವಾಹ ಬಂಧನದಲ್ಲಿದ್ದಾಗ, ಆಕೆಯ ವಿವಾಹೇತರ ಸಂಬಂಧದಿಂದ ತಾನು ಅರ್ಜಿದಾರನಿಂದ ಜನಿಸಿದ್ದೇನೆ ಎಂದು ವಾದಿಸಿದ. ಆದರೆ ಅರ್ಜಿದಾರನು ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದ.

ನ್ಯಾಯಾಲಯ ಪುನಃ ಸ್ಪಷ್ಟಪಡಿಸಿದ್ದು, ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ನೋಡಿದರೆ, ಮಾನ್ಯ ವಿವಾಹ ಮುಂದುವರಿದಿರುವ ಅವಧಿಯಲ್ಲಿ ಜನಿಸಿದ ಮಗು ಯಾವಾಗಲೂ ಆ ವಿವಾಹದಲ್ಲಿರುವ ವ್ಯಕ್ತಿಗಳ ಜೈವಿಕ ಮಗು ಆಗಿರಬೇಕೆಂಬುದಿಲ್ಲ. ವಿಶ್ವದ ವಿವಿಧ ನ್ಯಾಯಾಲಯಗಳು ಪಿತೃತ್ವ’ ಮತ್ತು ‘ಕಾನೂನುಬದ್ಧತೆ’ ನಡುವಿನ ಸೈದ್ಧಾಂತಿಕ ವ್ಯತ್ಯಾಸವನ್ನು ಗುರುತಿಸಿವೆ. “ವೈಜ್ಞಾನಿಕ ಪರೀಕ್ಷೆಗಳ ಅಭಿವೃದ್ಧಿಯಿಂದ ಮಗು ನಿರ್ದಿಷ್ಟ ವ್ಯಕ್ತಿಯ ಸಂತಾನವಲ್ಲ ಎಂಬುದನ್ನು ಸಾಬೀತುಪಡಿಸುವುದು ಸುಲಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಯ ಬಳಕೆಯನ್ನು ಒಪ್ಪಿಕೊಂಡಿದ್ದರೂ, ಅದು ಅಪರೂಪವಾಗಿ ಮಾತ್ರ” ಎಂದು ಪೀಠ ಹೇಳಿದೆ.

ಕಾನೂನುಬದ್ಧತೆಯ ಊಹೆಯನ್ನು ಖಂಡಿಸಲು, ಮೊದಲಿಗೆ ‘ಪತಿ-ಪತ್ನಿಯರ ನಡುವೆ ಸಂಪರ್ಕ ಇರಲಿಲ್ಲ’ ಎಂಬುದನ್ನು ವಾದಿಸಬೇಕಾಗುತ್ತದೆ ಮತ್ತು ಅದನ್ನು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ಇಂತಹ ವಾದವನ್ನು ಮುಂದಿಟ್ಟ ನಂತರ ಮಾತ್ರ, ಪಿತೃತ್ವವನ್ನು ಸ್ಥಾಪಿಸಲು ಡಿಎನ್ ಎ ಪರೀಕ್ಷೆಗೆ ಆದೇಶ ನೀಡುವ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಬಹುದು ಎಂದು ಪೀಠ ಸೇರಿಸಿದೆ.

ಈ ಪ್ರಕರಣದಲ್ಲಿ 2001ರಲ್ಲಿ ಪ್ರತಿವಾದಿ ಜನಿಸಿದಾಗ, ಅವನ ತಾಯಿ ತನ್ನ ಪತಿಯೊಂದಿಗೆ ವಿವಾಹಿತಳಾಗಿದ್ದು, 1989ರಿಂದ 2003ರವರೆಗೆ ಒಂದೇ ಮನೆಮೇಲೆ ವಾಸಿಸಿದ್ದಾಳೆ ಎಂಬುದು ಒಪ್ಪಿಗೆಯ ವಿಷಯವಾಗಿದೆ. ಅಂದರೆ, ವಿವಾಹ ಅವಧಿಯಲ್ಲಿಯೇ ಪತಿ-ಪತ್ನಿಗಳಿಗೆ ಪರಸ್ಪರ ಸಂಪರ್ಕ ಇತ್ತು ಎಂಬುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.

“ಪ್ರತಿವಾದಿಯ ತಾಯಿ ಅರ್ಜಿದಾರನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಊಹಿಸಿದರೂ ಸಹ, ಆ ಕಾರಣ ಮಾತ್ರದಿಂದ ಕಾನೂನು ಬದ್ಧತೆಯ ಊಹೆಯನ್ನು ಕೆಡವಲು ಸಾಧ್ಯವಿಲ್ಲ..” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇಂತಹ ಪ್ರಕರಣಗಳಲ್ಲಿ, ಭಾಗವಹಿಸಿರುವ ಎಲ್ಲ ಪಕ್ಷಗಳ ಹಿತಾಸಕ್ತಿಗಳನ್ನು ಸಮತೋಲನಗೊಳಿಸಿ, ಡಿಎನ್ಎ ಪರೀಕ್ಷೆಗೆ ‘ಅತ್ಯಾವಶ್ಯಕ ಅಗತ್ಯ’ (eminent need) ಇದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕೆಂದು ಪೀಠ ತಿಳಿಸಿದೆ.

ಪಿತೃತ್ವವನ್ನು ನಿರಾಕರಿಸಲು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಇಂಥ ಪ್ರಕರಣಗಳಲ್ಲಿ ಆದೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠವು ತಿಳಿಸಿದ್ದು , ಮಗುವಿನ ಭಾವನಾತ್ಮಕ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವುದು, ಕುಟುಂಬದ ಖಾಸಗಿ ವಿಷಯಗಳನ್ನು ಮಗುವಿಗೆ ಕಳಂಕ ತರಲು ಬಳಸುವುದನ್ನು ತಡೆಯುವುದು ಈ ನಿಯಮದ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದೆ.
“ಗೌರವವನ್ನು ರಕ್ಷಿಸಲು ವ್ಯಕ್ತಿಯು ತನ್ನ ಗೌಪ್ಯತೆಯ ಹಕ್ಕನ್ನು ಬಳಸಿಕೊಳ್ಳಬಹುದು ಮತ್ತು ಅದರ ವಿರುದ್ಧವೂ ಸಹ. ಈ ಎರಡೂ ಹಕ್ಕುಗಳು ಒಟ್ಟಾಗಿ, ವಿವಾಹದ ಒಳಗೆ ಅಥವಾ ಹೊರಗೆ ಇರುವ ಲೈಂಗಿಕ ಜೀವನ ಸೇರಿದಂತೆ ತನ್ನ ಜೀವನದ ಅತ್ಯಂತ ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳುವ ವ್ಯಕ್ತಿಯ ಸಾಮರ್ಥ್ಯವನ್ನು ರಕ್ಷಿಸುತ್ತವೆ.” ಎಂದು ಪೀಠ ಹೇಳಿದೆ.

ಬಲವಂತವಾಗಿ ಡಿಎನ್ಎ ಪರೀಕ್ಷೆಗೆ ಒಳಪಡಿಸುವುದು ವ್ಯಕ್ತಿಯ ಸಾಮಾಜಿಕ ಮತ್ತು ವೃತ್ತಿಪರ ಜೀವನದ ಜೊತೆಗೆ ಮಾನಸಿಕ ಆರೋಗ್ಯಕ್ಕೂ, ಅಪರಿಹಾರ್ಯ ಹಾನಿ ಉಂಟುಮಾಡಬಹುದು. ಆದ್ದರಿಂದ, ಡಿಎನ್ಎ ಪರೀಕ್ಷೆಗೆ ನಿರಾಕರಿಸುವುದೂ ಸೇರಿದಂತೆ, ತನ್ನ ಗೌರವ ಮತ್ತು ಗೌಪ್ಯತೆಯನ್ನು ರಕ್ಷಿಸಲು ವ್ಯಕ್ತಿಗೆ ಕೆಲವು ಕ್ರಮಗಳನ್ನು ಕೈಗೊಳ್ಳುವ ಹಕ್ಕಿದೆ ಎಂದು ಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.