ಒಮ್ಮೆ ಸಹಿ ಮಾಡಿದ ತೀರ್ಪು, ಆದೇಶ ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರವಿದೆಯೇ..? ಸುಪ್ರೀಂ ಮಹತ್ವದ ತೀರ್ಪು
ನವದೆಹಲಿ: ನ್ಯಾಯಾಲಯವು ಒಮ್ಮೆ ಸಹಿ ಮಾಡಿದ ತೀರ್ಪು ಅಥವಾ ಆದೇಶವನ್ನು ಮರು ಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯದ ಸಿಬ್ಬಂದಿಯೊಬ್ಬರು “ತಿರಸ್ಕರಿಸಲಾಗಿದೆ” ಬದಲಿಗೆ “ಅನುಮತಿಸಲಾಗಿದೆ” ಎಂದು ಟೈಪ್ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಜಾಮೀನು ಮಂಜೂರು ಮಾಡಿ ಸಹಿ ಮಾಡಿದ ನ್ಯಾಯಾಂಗ ಆದೇಶವನ್ನು ರದ್ದುಗೊಳಿಸಬಹುದೇ..? ಎಂಬ ಪ್ರಶ್ನೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ಪ್ರಸನ್ನ ಬಿ ವರಾಳೆ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು ಸ್ಪಷ್ಟನೆ ನೀಡಿದ್ದು, ನ್ಯಾಯಾಲಯವು ಒಮ್ಮೆ ಸಹಿ ಮಾಡಿದ ತೀರ್ಪು ಅಥವಾ ಆದೇಶವನ್ನು ಮರು ಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಹೊಂದಿಲ್ಲ ಎಂದು ತಿಳಿಸಿದೆ.
ರಂಬಳಿ ಸಾಹಿ ವಿರುದ್ಧ ಬಿಹಾರ ರಾಜ್ಯ ಶೀರ್ಷಿಕೆಯ ಕ್ರಿಮಿನಲ್ ಅಪೀಲ್ ನಂ.105/2026 ಈ ಪ್ರಕರಣದಲ್ಲಿ ದಂ.ಪ್ರ.ಸಂ. ಸೆಕ್ಷನ್ 362 ಅನ್ನು ವಿವೇಚಿಸಿ ಜಾಮೀನು ಆದೇಶವನ್ನು ಹಿಂಪಡೆಯುವ ನ್ಯಾಯಾಧಿಕಾರ ನ್ಯಾಯಾಲಯಗಳಿಗೆ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ…
23.10.2024 ರಂದು ಎಫ್ ಐಆರ್ ನಂ.287/2024 ದಾಖಲಿಸಲಾಯಿತು. ಅಭಿಯೋಗದ ಪ್ರಕಾರ, ಗುಪ್ತ ಮಾಹಿತಿಯ ಆಧಾರದ ಮೇಲೆ ಧವನ್ ಕುಮಾರ್ ಎಂಬಾತನನ್ನು ತಡೆದು ಪರಿಶೀಲನೆ ನಡೆಸಿದಾಗ, ಅವನ ವಶದಲ್ಲಿದ್ದ 6.330 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಯಿತು. ವಿಚಾರಣೆಯಲ್ಲಿ, ಈ ಮಾದಕ ವಸ್ತುವನ್ನು ತನ್ನ ತಂದೆಯು ಮೇಲ್ಮನವಿದಾರನಿಗೆ ಒಪ್ಪಿಸುವ ಸಲುವಾಗಿ ನೀಡಿದ್ದಾನೆ ಎಂಬ ಹೇಳಿಕೆಯನ್ನು ಸಹ ಆರೋಪಿ ನೀಡಿದ್ದನು. ಈ ಹೇಳಿಕೆಯ ಆಧಾರದಲ್ಲಿ ಮೇಲ್ಮನವಿದಾರನನ್ನು ಆರೋಪಿಯಾಗಿ ಸೇರಿಸಲಾಯಿತು.
ಹೈಕೋರ್ಟ್ ದಿನಾಂಕ 27.08.2025 ರಂದು ಅಪೀಲುದಾರನಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ದಿನಾಂಕ 30.08.2025 ರಂದು, ಕೋರ್ಟ್ ಮಾಸ್ಟರ್ (ನ್ಯಾಯಪೀಠದ ಸಹಾಯಕ)ನಿಂದ ನಡೆದ ಲಿಪಿಕ ದೋಷವನ್ನು ಆಧಾರವಾಗಿ ಉಲ್ಲೇಖಿಸಿ, ಆ ಜಾಮೀನು ಆದೇಶವನ್ನು ಹಿಂಪಡೆಯಲಾಯಿತು. ಸಂಬಂಧಿತ ಸಿಬ್ಬಂದಿಯಿಂದ ದೋಷವಾಗಿದೆ ಎಂದು ನಿಶ್ಯರ್ಥ ಕ್ಷಮೆಯಾಚನೆ ಸಲ್ಲಿಸಲಾಯಿತು.
ಒಮ್ಮೆ ಸಹಿ ಮಾಡಿದ ಜಾಮೀನು ಆದೇಶವನ್ನು, ದಂ.ಪ್ರ.ಸಂ. ಸೆಕ್ಷನ್ 362ರ ಬೆಳಕಿನಲ್ಲಿ, ಹೈಕೋರ್ಟ್ ಹಿಂಪಡೆಯಲು ಅಥವಾ ಮರುಪರಿಶೀಲಿಸಲು ಅಧಿಕಾರ ಹೊಂದಿದೆಯೇ ಎಂಬುದೇ ವಿಚಾರಣೆಯ ಮುಖ್ಯ ಪ್ರಶ್ನೆಯಾಗಿತ್ತು.
ಸುಪ್ರೀಂ ಕೋರ್ಟ್, ಸೆಕ್ಷನ್ 362ರ ಅನ್ವಯತೆಯನ್ನು ಪುನರುಚ್ಚರಿಸಿ, ಈ ಪ್ರಕರಣದಲ್ಲಿ ಯಾವುದೇ ಲಿಪಿಕ ಅಥವಾ ಗಣಿತದ ದೋಷ ಇರಲಿಲ್ಲವೆಂದು ಗಮನಿಸಿದೆ. ಆದ್ದರಿಂದ, ಹೈಕೋರ್ಟ್ ಜಾಮೀನು ಆದೇಶವನ್ನು ಹಿಂಪಡೆದಿರುವುದು ಕಾನೂನುಬಾಹಿರವಾಗಿದ್ದು, ಮೂಲದಿಂದಲೇ ಅಮಾನ್ಯ ಎಂದು ಘೋಷಿಸಲಾಯಿತು. ಹೀಗಾಗಿ, ಜಾಮೀನು ಹಿಂಪಡೆಯುವ ಆದೇಶವನ್ನು ರದ್ದುಪಡಿಸಲಾಯಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
