ಇಂಗ್ಲಿಷ್ ನಲ್ಲಿ ವಿವರಣೆ, ಹೇಳಿಕೆ ದಾಖಲು ಹಿನ್ನೆಲೆ: ಅಪರಾಧಿಯ ಜೀವಾವಧಿ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್
ರಾಂಚಿ: ವಿಚಾರಣೆ ವೇಳೆ ಇಂಗ್ಲಿಷ್ ನಲ್ಲಿ ವಿವರಣೆ, ಹೇಳಿಕೆ ದಾಖಲಿಸಿದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಯನ್ನು ದೋಷಮುಕ್ತಗೊಳಿಸಿ ಜಾರ್ಖಂಡ್ ಹೈಕೋರ್ಟ್ ತೀರ್ಪು ನೀಡಿದೆ.
ಚಾಮರಾ ಒರಾಂ ಎಂಬ ಆರೋಪಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ರದ್ದುಗೊಳಿಸಿದೆ. ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು ಕೈದಿಗೆ ಅರ್ಥವಾಗದ ಇಂಗ್ಲಿಷ್ ಭಾಷೆಯಲ್ಲಿ ಪ್ರಶ್ನೆ ಕೇಳಿ, ಆ ಭಾಷೆಯಲ್ಲಿಯೇ ವಿಚಾರಣೆ ನಡೆಸಲಾಗಿದೆ ಎಂಬ ಕಾರಣಕ್ಕೆ, ಜಾರ್ಖಂಡ್ ಹೈಕೋರ್ಟ್ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
2009ರಲ್ಲಿ ಪರಮೇಶ್ವರಿ ಎಂಬಾಕೆಯನ್ನು ಹತ್ಯೆ ಮಾಡಿದ್ದ ಎಂಬ ಆರೋಪ ಆರೋಪಿ ಚಾಮರಾ ಒರಾಂ ಮೇಲಿತ್ತು.. ವಿಚಾರಣೆ ನಡೆಸಿದ್ದ ರಾಂಚಿಯ ನ್ಯಾಯಾಲಯವು 2018ರಲ್ಲಿ ಒರಾಂನನ್ನು ದೋಷ ಎಂದು ಪರಿಗಣಿಸಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಆದರೆ ತನಗೆ ಅರ್ಥವಾಗದ ಭಾಷೆಯಲ್ಲಿ ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಲಾಗಿದ್ದು, ಶಿಕ್ಷೆ ರದ್ದುಪಡಿಸಬೇಕು ಎಂದು ಒರಾಂ ಹೈಕೋರ್ಟ್ ಮೆಟ್ಟಿಲೇರಿದ್ದನು. ಇದರ ವಿಚಾರಣೆ ವೇಳೆ, ಒರಾಂಗೆ ಅರ್ಥವಾಗದ ಇಂಗ್ಲಿಷ್ನಲ್ಲಿ ಪ್ರಶ್ನೆ ಕೇಳಿ, ಹೇಳಿಕೆ ಇಂಗ್ಲಿಷ್ನಲ್ಲಿ ದಾಖಲಿಸಲಾಗಿದೆ. ಆರೋಪಿಯ ವಿರುದ್ಧದ ಪರಿಸ್ಥಿತಿಗಳನ್ನು ಆತನಿಗೆ ತಿಳಿದಿರುವ ಭಾಷೆ ಯಲ್ಲಿ ವಿವರಿಸಲಾಗಿಲ್ಲ ಎಂದು ಭಾವಿಸಲು ಸಾಕಷ್ಟು ಕಾರಣಗಳಿವೆ. ಇದು ಆತನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿ ಹೈಕೋರ್ಟ್ ಅಪರಾಧಿಯನ್ನು ದೋಷಮುಕ್ತಗೊಳಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
