03/11/2026

Law Guide Kannada

Online Guide

3 ವರ್ಷ ವಿಳಂಬವಾಗಿ ಮೇಲ್ಮನವಿ: ಇದು ಆಡಳಿತಶಾಹಿಯ ಜಡತ್ವ – ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ 2010ರಲ್ಲಿ ನಡೆಸಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಕಾನೂನು ಇಲಾಖೆ ಕಾರ್ಯದರ್ಶಿ ಮತ್ತು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿಳಂಬವಾಗಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆ ತೆಗೆದಕೊಂಡಿದ್ದು ಈ ವಿಳಂಬ ಆಡಳಿತಶಾಹಿಯ ಜಡತ್ವ ಎಂದು ಕಟುವಾಗಿ ಟೀಕಿಸಿದೆ.

ಈ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು, ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದು ಕಾನೂನು ಬದ್ಧ ಹಕ್ಕಾಗಿದ್ದರೂ ಷರತ್ತಿಗೆ ಒಳಪಟ್ಟು ನಿರ್ದಿಷ್ಟ ಮಿತಿಯೊಳಗೆ ಪಾಲನೆ ಮಾಡದೇ ಕಾರ್ಯವಿಧಾನದ ಕಾರಣದ ನೆಪವೊಡ್ಡಿ ವಿಳಂಬ ಮಾಡುವುದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿ ಮೇಲ್ಮನವಿ ವಜಾಗೊಳಿಸಿದೆ.

ರಾಜ್ಯ ಸರ್ಕಾರ ಮಾದರಿ ದಾವೆದಾರನಾಗಿರಬೇಕೇ ಹೊರತು, ಕಾನೂನಿನ ಅನ್ವಯದಿಂದ ವಿನಾಯಿತಿ ಪಡೆಯಲು ಪ್ರಯತ್ನಿಸುವುದು ತರವಲ್ಲ. ಕಾನೂನಿನ ಪರಿಪಾಲನೆ ಎತ್ತಿ ಹಿಡಿಯುವ ಕ್ರಮ ರಾಜ್ಯದ ಆದ್ಯ ಕರ್ತವ್ಯವಾಗಬೇಕು. ಆದರೆ, ಈ ಪ್ರಕರಣವು ಆಡಳಿತಶಾಹಿಯ ಜಡತ್ವಕ್ಕೆ ಉದಾಹರಣೆಯಾಗಿದೆ. ವಿಳಂಬಕ್ಕೆ ನೀಡಲಾಗಿರುವ ಸಂಪೂರ್ಣ ವಿವರಣೆ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಸರ್ಕಾರದ ನಡುವಿನ ಅಂತರ – ಇಲಾಖೆಯ ಪತ್ರ ವ್ಯವಹಾರದ ಚಕ್ರವ್ಯೂಹದಿಂದ ಆವೃತವಾಗಿದೆ. ಇಂತಹ ವಿಳಂಬದ ಪದ್ಧತಿಗೆ ಕೋರ್ಟ್ ಅನುಮೋದನೆ ಸಿಗಲು ಸಾಧ್ಯವಿಲ್ಲ. ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶದ ಫಲಿತಾಂಶವನ್ನು ಪಡೆಯಲು ಒಬ್ಬ ಯಶಸ್ವಿ ದಾವೇದಾರ ಆಕಾಶಕ್ಕೆ ಮುಖಮಾಡಿ ಅಂತ್ಯವಿಲ್ಲದ ಕಾಯುವಿಕೆಯಲ್ಲಿ ದಿನ ನೂಕಬಾರದು. ಈ ಪ್ರಕರಣದ ಕಡತವು ರಾಜ್ಯಾಡಳಿತದ ಕಾರಿಡಾರ್ ಗಳಲ್ಲಿ ಒಂದು ಟೇಬಲ್ ನಿಂದ ಇನ್ನೊಂದಕ್ಕೆ, ಒಬ್ಬ ಅಧಿಕಾರಿಯಿಂದ ಮತ್ತೊಬ್ಬರಿಗೆ ಅಂತ್ಯವಿಲ್ಲದಂತೆ ಗಿರಕಿ ಹೊಡೆದಿದೆ. ಅಲ್ಲದೆ, ಅಧಿಕಾರಶಾಹಿಯ ಉದಾಸೀನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ವಿವರ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಕೆಎಸ್ಎಲ್ ಯು ) 2010 ರ ಅವಧಿಯಲ್ಲಿ ಇತಿಹಾಸ, ಇಂಗ್ಲಿಷ್, ಮ್ಯಾನೇಜ್ಮೆಂಟ್ ವಿಷಯಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿ ತಾತ್ಕಾಲಿಕ ಮತ್ತು ಪೂರ್ಣಕಾಲಿಕ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿತ್ತು.

ತಮಗೆ ಸಮಾನ ಕೆಲಸಕ್ಕೆ ಸಮಾನ ಗೌರವ ಹಾಗೂ ಇತರ ಕಾಯಂ ನೌಕರರಂತೆಯೇ ಸೇವೆ ಕಾಯಂಗೊಳಿಸಬೇಕು ಎಂದು ಕೋರಿ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ ಏಕಸದಸ್ಯ ಪೀಠ, ನೌಕರರ ಪರವಾಗಿ ತೀರ್ಪು ನೀಡಿ, ಅವರ ಸೇವೆಗಳನ್ನು ಕಾಯಂಗೊಳಿಸುವಂತೆ ಹಾಗೂ ಅವರಿಗೆ ಬರಬೇಕಾದ ವೇತನ ಬಾಕಿ ಮತ್ತು ಅನುದಾನಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಬಿಡುಗಡೆ ಮಾಡುವಂತೆ ಸರ್ಕಾರ ಹಾಗೂ ವಿಶ್ವವಿದ್ಯಾಲಯಕ್ಕೆ ಆದೇಶಿಸಿತ್ತು. ಜೊತೆಗೆ, ಮೇಲ್ಮನವಿ ಸಲ್ಲಿಸಲು 12 ವಾರಗಳ ಗಡುವು ವಿಧಿಸಿತ್ತು.

ಆದರೆ, ರಾಜ್ಯ ಸರ್ಕಾರ ಮೂರು ವರ್ಷಗಳ ನಂತರ ಮೇಲ್ಮನವಿ ಸಲ್ಲಿಸಿ ಅದನ್ನ ಸಮರ್ಥಿಸಿಕೊಂಡಿತ್ತು. ಅರ್ಜಿ ಸಲ್ಲಿಸಲು ಆಗಿರುವ ವಿಳಂಬ ಉದ್ದೇಶ ಪೂರ್ವಕವಲ್ಲ. ಕಡ್ಡಾಯ ಆಡಳಿತಾತ್ಮಕ ಕಾರ್ಯವಿಧಾನಗಳಿಂದಾಗಿದೆ. ಈ ಪ್ರಕರಣ ವಿಚಾರಣೆಗೆ ಉತ್ತಮ ಅರ್ಹತೆ ಹೊಂದಿದೆ. ವಿಳಂಬವನ್ನು ಮನ್ನಿಸದೇ ಹೋದರೆ ಸರ್ಕಾರದ ಹಕ್ಕುಗಳು ನಿರಾಶೆಗೊಳ್ಳುತ್ತವೆ. ಕ್ಷಮೆ ತುಂಬಾ ಅಗತ್ಯವಾಗಿದೆ ಮತ್ತು ನ್ಯಾಯಯುತವಾಗಿದೆ. ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಅನುಷ್ಠಾನಗೊಳಿಸಿದರೆ ರಾಜ್ಯ ಖಜಾನೆಯ ಮೇಲೆ ಅಸಾಧಾರಣ ಆರ್ಥಿಕ ಹೊರೆ ಉಂಟುಮಾಡುತ್ತದೆ ಎಂದು ಸರ್ಕಾರ ಮೇಲ್ಮನವಿಯಲ್ಲಿ ತಿಳಿಸಿತ್ತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.