ಸಂಬಂಧ ಹಳಸಿದ ತಕ್ಷಣ ರೇಪ್ ಕೇಸ್ ಹಾಕುವಂತಿಲ್ಲ- ಸುಪ್ರೀಂ
ನವದೆಹಲಿ: ಸಂಬಂಧಗಳು ವಿಫಲವಾದಾಗಲೆಲ್ಲಾ ಮತ್ತು ಇಬ್ಬರ ನಡುವಿನ ಸಂಬಂಧಕ್ಕೆ ಬ್ರೇಕ್ ಬಿದ್ದಾಗ ಅವುಗಳನ್ನು ಕ್ರಿಮಿನಲ್ ಪ್ರಕರಣಗಳನ್ನಾಗಿ (ರೇಪ್ ಕೇಸ್) ಬದಲಾಯಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇಬ್ಬರ ನ.ಡುವಿನ ಪರಸ್ಪರ ಸಮ್ಮತಿಯಿಂದ ಕೂಡಿದ ಪ್ರೇಮ ಸಂಬಂಧವು ಕಾಲಕ್ರಮೇಣ ಮುರಿದುಬಿದ್ದ ತಕ್ಷಣವೇ, ಆ ಹಿಂದಿನ ಶಾರೀರಿಕ ಸಾಮೀಪ್ಯವನ್ನು ‘ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸಂಬಂಧ ಹಳಸಿದ ತಕ್ಷಣ ರೇಪ್ ಕೇಸ್ ಹಾಕುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಕೇರಳ ಮೂಲದ ಸಂತೋಷ್ ಕುಮಾರ್ ಎನ್.ಪಿ. ಎಂಬುವವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ, ವಂಚನೆ ಮತ್ತು ನಂಬಿಕೆದ್ರೋಹದ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರಿದ್ದ ದ್ವಿಸದಸ್ಯ ಪೀಠವು ರದ್ದುಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ.
ಬಲಾತ್ಕಾರ, ನಿಜವಾದ ಲೈಂಗಿಕ ದೌರ್ಜನ್ಯ ಅಥವಾ ಮೋಸದಿಂದ ಒಪ್ಪಿಗೆ ಪಡೆದಂತಹ ಗಂಭೀರ ಪ್ರಕರಣಗಳಲ್ಲಿ ಮಾತ್ರ ಅತ್ಯಾಚಾರ ವಿರೋಧಿ ಕಠಿಣ ಕಾನೂನುಗಳನ್ನು ಬಳಸಬೇಕು. ಮುರಿದುಬಿದ್ದ ಪ್ರತಿಯೊಂದು ಸಮ್ಮತಿಯ ಸಂಬಂಧವನ್ನೂ ರೇಪ್ ಎಂದು ಬಿಂಬಿಸಿದರೆ, ನೈಜ ಲೈಂಗಿಕ ಅಪರಾಧಗಳ ಗಂಭೀರತೆ ಕಡಿಮೆಯಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಹಾಗೆಯೇ “ಆರಂಭದಿಂದಲೇ ಉದ್ದೇಶಪೂರ್ವಕವಾಗಿ ವಂಚಿಸಿ ಲೈಂಗಿಕ ಸಮ್ಮತಿ ಪಡೆಯುವುದಕ್ಕೂ ಮತ್ತು ಸಂಬಂಧ ಮುರಿದುಬಿದ್ದ ನಂತರ ವ್ಯಕ್ತವಾಗುವ ಪಶ್ಚಾತ್ತಾಪ ಅಥವಾ ಅಸಮಾಧಾನಕ್ಕೂ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದನ್ನು ನ್ಯಾಯಾಲಯಗಳು ಸೂಕ್ಷ್ಮವಾಗಿ ಗಮನಿಸಬೇಕು. ಇಬ್ಬರ ಸಮ್ಮತಿಯಿಂದ ನಡೆದ ದೈಹಿಕ ಸಂಬಂಧವನ್ನು, ಸಂಬಂಧ ಹಳಸಿದ ನಂತರ ಕ್ರೂರ ಅತ್ಯಾಚಾರ ಎಂದು ಬಿಂಬಿಸುವುದು ಸರಿಯಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪರಸ್ಪರ ಒಪ್ಪಿಗೆಯ ಸಂಬಂಧದಲ್ಲಿದ್ದ ಮಾತ್ರಕ್ಕೆ, ಭವಿಷ್ಯದಲ್ಲಿ ಎಲ್ಲಿ ತನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತಾರೋ ಎಂಬ ಭಯದಿಂದ ಆ ಪುರುಷ ಆ ಸಂಬಂಧದಲ್ಲೇ ಜೀತದಾಳಿನಂತೆ (ಬಂದಿಯಾಗಿ) ಉಳಿಯಬೇಕೇ? ಆ ಸಂಬಂಧದಿಂದ ಹೊರಬರುವ ಹಕ್ಕು ಪುರುಷನಿಗೆ ಇರುವುದಿಲ್ಲವೇ? ಸಂಬಂಧದಿಂದ ಆಚೆ ಬಂದಿದ್ದನ್ನೇ ವಂಚನೆ ಎಂದು ಕರೆಯುವುದು ಹೇಗೆ?” ಎಂದು ನ್ಯಾಯಪೀಠ ಪ್ರಶ್ನಿಸಿದೆ. ಇಂತಹ ಧೋರಣೆ ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೆ, ಆರೋಪಿಯ ವೈಯಕ್ತಿಕ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ
ಕೇರಳ ಮೂಲದ ಸಂತೋಷ್ ಕುಮಾರ್ ಎನ್.ಪಿ. ಎಂಬುವವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ವಂಚನೆ ಮತ್ತು ನಂಬಿಕೆದ್ರೋಹದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಇದಾಗಿದೆ. ದೂರುದಾರ ಮಹಿಳೆ, “ಸಂತೋಷ್ ಕುಮಾರ್ ಮೊದಲ ಮದುವೆಯನ್ನು ಮುಚ್ಚಿಟ್ಟು ನನ್ನನ್ನು ಎರಡನೇ ವಿವಾಹವಾಗಿ, ಸಮ್ಮತಿ ಪಡೆದು ಶಾರೀರಿಕ ಸಂಬಂಧ ಬೆಳೆಸಿದ್ದರು” ಎಂದು ಆರೋಪಿಸಿದ್ದರು. ಇವರಿಬ್ಬರು 1996 ರಿಂದ 2003 ರವರೆಗೆ ಮೈಸೂರಿನಲ್ಲಿ ಒಟ್ಟಿಗೆ ವಾಸವಾಗಿದ್ದರು. ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸುಪ್ರೀಂ ಕೋರ್ಟ್, ಸಂತೋಷ್ ಕುಮಾರ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತು. ಈ ಪ್ರಕರಣದಲ್ಲಿ ಆರೋಪಿ ಸಂತೋಷ್ ಕುಮಾರ್ ತನಗಾದ ಅನ್ಯಾಯದ ವಿರುದ್ಧ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿತ್ತು. ಹೈಕೋರ್ಟ್ನ ಆ ಆದೇಶವನ್ನು ದೋಷಪೂರಿತ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಿನ ದುರುಪಯೋಗವನ್ನು ತಡೆಯಲು ಕ್ರಿಮಿನಲ್ ಮೊಕದ್ದಮೆಯನ್ನು ರದ್ದು ಮಾಡಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
