2011ನೇ ಸಾಲಿನ 362 ಕೆಎಎಸ್ ಅಧಿಕಾರಿಗಳ ನೇಮಕಾತಿ ಸಿಂಧುತ್ವ ಕಾಯ್ದೆ ರದ್ದು: ಮಹತ್ವದ ತೀರ್ಪನಿತ್ತ ಸುಪ್ರೀಂ ಕೋರ್ಟ್
ನವದೆಹಲಿ/ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಊರ್ಜಿತಗೊಳಿಸಲು ರಾಜ್ಯ ಸರಕಾರ 2022ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಗುರುವಾರದಂದು ಶಾಸನಬದ್ಧ ಕಾಯಿದೆಯನ್ನೇ ವಜಾಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಕರ್ನಾಟಕ ನಾಗರಿಕ ಸೇವೆಗಳ ಹುದ್ದೆಗಳಿಗೆ 2011ರಲ್ಲಿ ನಡೆಸಲಾಗಿದ್ದ ಗೆಜೆಟೆಡ್ ಪ್ರೊಬೇಷನರ್ಗಳ ನೇಮಕಾತಿ ಪ್ರಕ್ರಿಯೆಯನ್ನು ಮಾನ್ಯಗೊಳಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ‘ಕರ್ನಾಟಕ ನಾಗರಿಕ ಸೇವೆಗಳು (2011ನೇ ಬ್ಯಾಚ್ನ ಗೆಜೆಟೆಡ್ ಪ್ರೊಬೇಷನರ್ಗಳ ಆಯ್ಕೆ ಮತ್ತು ನೇಮಕಾತಿಯ ಮಾನ್ಯಕರಣ) ಕಾಯ್ದೆ, 2022’ ಅನ್ನು ನ್ಯಾಯಪೀಠವು ಅಸಂವಿಧಾನಿಕವೆಂದು ಘೋಷಿಸಿ ರದ್ದುಗೊಳಿಸಿದೆ. ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ಈ ನೇಮಕಾತಿ ಪ್ರಕ್ರಿಯೆಯನ್ನು ಈ ಹಿಂದೆ ನ್ಯಾಯಾಲಯಗಳು ರದ್ದುಗೊಳಿಸಿದ್ದವು.
“2011ರ ನೇಮಕಾತಿಯನ್ನು ಸಮರ್ಧಿಸುವ ಯಾವುದೇ ವಿಚಾರವನ್ನು ಇನ್ನು ಮುಂದೆ ಪರಿಶೀಲಿಸುವ ಅಗತ್ಯವಿಲ್ಲ. ಏಕೆಂದರೆ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಡುಬಂದದ್ದು ಕೇವಲ ಲೋಪದೋಷ ಅಥವಾ ಅನಿಯಮಿತತೆಯಲ್ಲ. ಬದಲಾಗಿ, ಇಡೀ ಆಯ್ಕೆ ಪ್ರಕ್ರಿಯೆಯನ್ನೇ ಕಲುಷಿತಗೊಳಿಸಿದ ವ್ಯಾಪಕ ಭ್ರಷ್ಟಾಚಾರ ಮತ್ತು ಬಹಿರಂಗ ಸ್ವಜನಪಕ್ಷಪಾತವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಯ್ಕೆಯಾದ ಅಭ್ಯರ್ಧಿಗಳ ಬಗ್ಗೆ, ನ್ಯಾಯಾಲಯವು ಮತ್ತಷ್ಟು ಸ್ಪಷ್ಟಪಡಿಸಿದ್ದು, ಸಾಂವಿಧಾನಿಕ ನ್ಯಾಯಾಲಯಗಳು ಈಗಾಗಲೇ ಕಳಂಕಿತವೆಂದು ಘೋಷಿಸಿರುವ ನೇಮಕಾತಿಯ ಆಧಾರದ ಮೇಲೆ ಹಾಗೂ ನಂತರ ಅಸಂವಿಧಾನಿಕವೆಂದು ಘೋಷಿಸಲಾದ 2022ರ ಕಾಯ್ದೆಯ ನೆರವಿನಿಂದ ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ಆ ನೇಮಕಾತಿಯನ್ನು ಮುಂದುವರಿಸುವ ಹಕ್ಕನ್ನು ಸಮಾನತೆಯ ಆಧಾರದ ಮೇಲೆ ಪ್ರತಿವಾದಿಸಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.
ನ್ಯಾಯಾಲಯದ ತೀರ್ಪನ್ನು ಕೇವಲ ಹೊಸ ಕಾನೂನನ್ನು ಜಾರಿಗೊಳಿಸುವ ಮೂಲಕ ನೇರವಾಗಿ ರದ್ದುಗೊಳಿಸಲು ಶಾಸನಾಂಗಕ್ಕೆ ಅಧಿಕಾರವಿಲ್ಲ.ನ್ಯಾಯಾಲಯದ ತೀರ್ಪಿನ ಮೂಲ ಆಧಾರವನ್ನು ಕಾನೂನುಬದ್ದವಾಗಿ ಬದಲಾಯಿಸದೆ, ಆ ತೀರ್ಪಿನ ಪರಿಣಾಮವನ್ನು ರದ್ದು ಗೊಳಿಸುವ ಉದ್ದೇಶದಿಂದ ನಂತರದ ಶಾಸನವನ್ನು ಜಾರಿಗೊಳಿಸುವುದು ಅಸಂವಿಧಾನಿಕವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ವಿವರ
2011ರ ನವೆಂಬರ್ ನಲ್ಲಿ ಕೆಪಿಎಸ್ ಸಿ ‘ಗ್ರೂಪ್ ಎ’ ಮತ್ತು ‘ಬಿ’ ವೃಂದದ 362 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಪರೀಕ್ಷೆ ಮುಗಿದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾದ ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಅಡ್ವೊಕೇಟ್ ಜನರಲ್ ಶಿಫಾರಸಿನಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ 2014ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಈ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ನೀಡಿದ ಮಧ್ಯಂತರ ವರದಿ ಆಧರಿಸಿ, ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಸರಕಾರ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿತ್ತು.
ಸರಕಾರದ ರದ್ಧತಿ ಆದೇಶವನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದರು. ಕೆಎಟಿ ಅಭ್ಯರ್ಥಿಗಳ ಪರ ತೀರ್ಪು ನೀಡಿ ನೇಮಕಾತಿ ಪತ್ರ ನೀಡುವಂತೆ ಸೂಚಿಸಿತ್ತಾದರೂ, ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿತ್ತು. ನ್ಯಾಯಾಲಯಗಳ ತೀರ್ಪಿನ ಹೊರತಾಗಿಯೂ ಆಯ್ಕೆ ಪಟ್ಟಿಯಲ್ಲಿದ್ದವರ ಭವಿಷ್ಯ ಅನಿಶ್ಚಿತವಾಗಿದ್ದರಿಂದ, 362 ಅಭ್ಯರ್ಥಿಗಳ ನೇಮಕಾತಿಯನ್ನು ಊರ್ಜಿತಗೊಳಿಸಲು ರಾಜ್ಯ ಸರಕಾರ 2022ರಲ್ಲಿ ‘ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆಯನ್ನು ಜಾರಿಗೆ ತಂದಿತ್ತು.
ಈ ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ಶ್ರೀನಿವಾಸ ಟಿ. ಹಾಗೂ ಇತರ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ (SLP) ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು, ಇದೀಗ ಸರಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನೇ ರದ್ದುಗೊಳಿಸಿ ಆದೇಶಿಸಿದ್ದು ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
