ಅನುಕಂಪದ ನೇಮಕಾತಿ ವಿನಾಯಿತಿಯೇ ಹೊರತು ಹಕ್ಕಲ್ಲ: ನೌಕರಿ ಗಿಟ್ಟಿಸಲು ಬೇಕಾಬಿಟ್ಟಿ ನೆಪ ಸಲ್ಲದು – ಹೈಕೋರ್ಟ್
ಬೆಂಗಳೂರು: ಅನುಕಂಪದ ಆಧಾರದ ನೇಮಕಾತಿಯು ಉತ್ತರಾಧಿಕಾರದ ಹಕ್ಕಲ್ಲ. ಅದು ಅಗತ್ಯದಿಂದ ಉಂಟಾದ ಒಂದು ವಿನಾಯಿತಿಯೇ ಹೊರತು, ಸಂಬಂಧದಿಂದ ಉಂಟಾದ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅನುಕಂಪದ ಆಧಾರದಲ್ಲಿ ನೇಮಕಾತಿಗೆ ನಿರ್ದೇಶನ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು’ ತಾಯಿಯನ್ನು ಪೋಷಿಸುವ ಜವಾಬ್ದಾರಿ ಕೌಟುಂಬಿಕ ಬಾಧ್ಯತೆಯನ್ನು ಪ್ರತಿಬಿಂಬಿಸಬಹುದು ಮತ್ತು ಇದು ಶ್ಲಾಘನೀಯ ಭರವಸೆಯೂ ಆಗಿರಬಹುದು. ಆದರೆ, ಇಂತಹುದೊಂದು ಅಂಶವು ಆಡಳಿತ ನೀತಿಗೆ ವಿರುದ್ಧವಾಗಿ ಸರ್ಕಾರಿ ನೌಕರಿ ಗಿಟ್ಟಿಸುವುದಕ್ಕೆ ನ್ಯಾಯಾಂಗದ ಅಡಿಪಾಯವಾಗಲು ಸಾಧ್ಯವಿಲ್ಲ. ಕುಟುಂಬದಲ್ಲಿ ಸಂಪಾದನೆ ಮಾಡುವ ಸದಸ್ಯರೊಬ್ಬರನ್ನು ಅನಿರೀಕ್ಷಿತ ಸಾವು ಸಂಭವಿಸಿದಾಗ ಅವಲಂಬಿತರ ಮೇಲಿನ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಅನುಕಂಪದ ಯೋಜನೆ ಪ್ರಯತ್ನಿಸುತ್ತದೆ. ಈ ಅನುಕಂಪಕ್ಕೆ ಅರ್ಹತೆಯ ಗಡಿ ಇದೆ. ಹಾಗೆಂದು ಔದಾರ್ಯದ ಮೂಲಕ ಗಡಿಯನ್ನು ದಾಟಲು ಅನುಕಂಪ ಚಿಮ್ಮುಹಲಗೆಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿತು.
“ನ್ಯಾಯಾಲಯ, ಕಷ್ಟದಲ್ಲಿರುವ ವ್ಯಕ್ತಿಯನ್ನು ನೋಡಿ ಹೊಸ ಫಲಾನುಭವಿ ವರ್ಗವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅನುಕಂಪದ ಆಧಾರದ ನೇಮಕಾತಿಯು ಅಗತ್ಯದಿಂದ ಉಂಟಾದ ಒಂದು ವಿನಾಯಿತಿಯೇ ಹೊರತು, ಸಂಬಂಧದಿಂದ ಉಂಟಾದ ಹಕ್ಕಲ್ಲ ಮತ್ತು ಕುಟುಂಬದೊಳಗೆ ಉದ್ಯೋಗ ಮುಂದುವರಿಸಿಕೊಂಡು ಹೋಗುವುದಲ್ಲ. ಕುಟುಂಬವೊಂದನ್ನು ಹಠಾತ್ ಬಡತನ ಅಥವಾ ಸಂಕಷ್ಟದಿಂದ ಪಾರು ಮಾಡುವುದು ಅನುಕಂಪದ ಯೋಜನೆಯ ಉದ್ದೇಶವಾಗಿದೆಯೇ ಹೊರತು, ಕುಟುಂಬದೊಳಗೆ ಉತ್ತರಾಧಿಕಾರದ ಮೂಲಕ ಉದ್ಯೋಗವನ್ನು ಮುಂದುವರಿಸಿಕೊಂಡುವ ಹೋಗುವುದಲ್ಲ. ಈ ಯೋಜನೆಯಲ್ಲಿ ಅನುಕಂಪವು ಆತ್ಮದಂತೆ ಇರಬೇಕು. ಕಾನೂನು ಅದರ ಕಾವಲುಗಾರನಾಗಿರಬೇಕು” ಎಂದು ನ್ಯಾಯಪೀಠ ತಿಳಿಸಿತು.
ಏನಿದು ಪ್ರಕರಣ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಕೆಕೆಆರ್ಟಿಸಿ) ವೀರೇಶ್ ಮಾಂತಪ್ಪ ಲೊಳಸಾರ ಎಂಬುವವರು 2008ರ ಮಾರ್ಚ್ 18ರಿಂದ 2023ರ ಸೆಪ್ಟೆಂಬರ್ 21ರವರೆಗೆ ಚಾಲಕನಾಗಿ ಕಾರ್ಯನಿರ್ವಹಿಸಿದ್ದರು. ಈ ಮಧ್ಯೆ ಸೇವೆಯಲ್ಲಿರುವಾಗಲೇ ಅವರು ಸಾವನ್ನಪ್ಪಿದರು. ನಂತರ “ಅನುಕಂಪದ ಆಧಾರದಲ್ಲಿ ನನ್ನ ಎರಡನೇ ಮಗನಿಗೆ ಉದ್ಯೋಗ ನೀಡಬೇಕು” ಎಂದು ಕೋರಿ ಮೃತ ಚಾಲಕನ ತಾಯಿ ಮಾಂತವ್ವ ಮತ್ತು ವೀರೇಶ್ ಅವರ ಖಾಸ ತಮ್ಮನೂ ಆದ ಸಂಗಣ್ಣ ಮಾಂತಪ್ಪ ಲೊಳಸಾರ ಕೆಕೆಆರ್ಟಿಸಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ತಿರಸ್ಕರಿಸಿದ್ದ ಕೆಕೆಆರ್ಟಿಸಿ, ‘ವೀರೇಶ್ ಹೆಂಡತಿ ಸುನಂದಾ ವೀರೇಶ್ ಅವರಿಗಿಂತಲೂ ಮೊದಲೇ 2022ರ ಏಪ್ರಿಲ್ 9ರಂದು ಮೃತಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ವೀರೇಶ್ ತಾಯಿಗೆ 65 ವರ್ಷವಾದ ಕಾರಣ ಅವರಿಗೆ ಅನುಕಂಪದ ಉದ್ಯೋಗ ನೀಡಲು ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿತ್ತು.
ಇದನ್ನು ಅಕ್ಷೇಪಿಸಿ ಮಾಂತವ್ವ, “ವೀರೇಶ್ ತಮ್ಮನೂ ಆಗಿರುವ ನನ್ನ ಎರಡನೇ ಮಗನಿಗೆ ಅನುಕಂಪದ ನೌಕರಿ ನೀಡಬೇಕು” ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ರಿಟ್ ಅರ್ಜಿಯನ್ನು 2025ರ ಆಗಸ್ಟ್ನಲ್ಲಿ ಮಾನ್ಯ ಮಾಡಿದ್ದ ಏಕಸದಸ್ಯ ನ್ಯಾಯಪೀಠ, ‘ಸಂಗಣ್ಣ ಬಿನ್ ಮಾಂತಪ್ಪ ಲೊಳಸಾರ ಅವರನ್ನು ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತವಾದ ಹುದ್ದೆಗೆ ಹನ್ನೆರಡು ವಾರಗಳ ಒಳಗಾಗಿ ಅನುಕಂಪದ ಆಧಾರದಡಿ ನೇಮಕ ಮಾಡಿಕೊಳ್ಳಬೇಕು’ ಎಂದು; ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್ಟಿಸಿ) ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗೆ ನಿರ್ದೇಶನ ನೀಡಿತ್ತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
