ನಿವೃತ್ತ ನೌಕರನಿಗೆ ನೀಡುವ ಪಿಂಚಣಿ ದಯೆ ಅಥವಾ ಭಿಕ್ಷೆಯಲ್ಲ: ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ನಿವೃತ್ತ ನೌಕರರೊಬ್ಬರ ಪಿಂಚಣಿ ತಡೆ ಹಿಡಿದಿದ್ದ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿರುವ ಕರ್ನಾಟಕ ಹೈಕೋರ್ಟ್, ‘ಸರ್ಕಾರವು ನಿವೃತ್ತ ನೌಕರರಿಗೆ ನೀಡುವ ಪಿಂಚಣಿಯು ದಯೆ ಅಥವಾ ಭಿಕ್ಷೆಯಲ್ಲ. ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ವಿಶ್ವವಿದ್ಯಾಲಯ ಸೇರಲು ತಾಂತ್ರಿಕ ರಾಜೀನಾಮೆ ನೀಡಿ ಹುದ್ದೆಗೆ ಸೇರಿದಾಗ, ಆತನ ಹಿಂದಿನ ಸೇವೆಯು ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ವಿಶ್ವ ವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್ಎಲ್ಯು) ದಲ್ಲಿ ಒಟ್ಟು 28 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಪ್ರೊ. ಚಿದಾನಂದರೆಡ್ಡಿ ಎಸ್. ಪಾಟೀಲ್ ಅವರಿಗೆ ಹಳೆಯ ಪಿಂಚಣಿ ಸೌಲಭ್ಯ ನೀಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಎತ್ತಿ ಹಿಡಿದು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದೆ.
ಸರ್ಕಾರಿ ಹಾಗೂ ನಿಯಮಿತ ಸೇವೆ ಸಲ್ಲಿಸಿದ ಪ್ರಾಧ್ಯಾಪಕರಿಗೆ ಹಳೆಯ ಪಿಂಚಣಿ ಪಡೆಯುವುದು ಆತನ ಹಕ್ಕಾಗಿದ್ದು, ಬಾಕಿ ಇರುವ ಪಿಂಚಣಿ ಮೊತ್ತವನ್ನು ಶೇ.6ರ ಬಡ್ಡಿಯೊಂದಿಗೆ ಪಾವತಿಸುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿತು.
ಹಾಗೆಯೇ 1996ರಿಂದ 2013ರವರೆಗಿನ ಸೇವೆಯನ್ನು ಸರ್ಕಾರಕ್ಕೆ ಬಿಟ್ಟು ‘ಹೊಸ ನೇಮಕಾತಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು 8 ವಾರಗಳಲ್ಲಿ ಬಿಡುಗಡೆ ಮಾಡಬೇಕು. ಬಾಕಿ ಇರುವ ಪಿಂಚಣಿ ಮೊತ್ತಕ್ಕೆ ನಿವೃತ್ತಿಯ ದಿನಾಂಕದಿಂದ ಪಾವತಿಯಾಗುವವರೆಗೂ ಶೇ 6 ರಷ್ಟು ಬಡ್ಡಿ ಸೇರಿಸಿ ನೀಡಬೇಕು. ಒಂದು ವೇಳೆ ಸರ್ಕಾರ ವಿಳಂಬ ಮಾಡಿದಲ್ಲಿ ಬಡ್ಡಿದರವನ್ನು ಶೇ.12ಕ್ಕೆ ಏರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಜೊತೆಗೆ ಸರ್ಕಾರವು ಅರ್ಜಿದಾರರಿಗೆ ಒಂದು ಲಕ್ಷ ರೂ.ಗಳ ವ್ಯಾಜ್ಯ ವೆಚ್ಚವಾಗಿ ಪಾವತಿ ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿತು.
ಏನಿದು ಪ್ರಕರಣ
ಪ್ರೊ. ಚಿದಾನಂದರೆಡ್ಡಿ ಪಾಟೀಲ್ ಅವರು 1996 ರಿಂದ 2013ರವೆರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2013ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾಗ, ಹುಬ್ಬಳ್ಳಿಯ ಕೆಎಸ್ಎಲ್ ಯುನಲ್ಲಿ ಪ್ರಾಧ್ಯಾಪಕರಾಗಿ ಆಯ್ಕೆಯಾದರು, ಹಿಂದಿನ ಹುದ್ದೆಗೆ ನಿಯಮಾನುಸಾರ ‘ತಾಂತ್ರಿಕ ರಾಜೀನಾಮೆ’ ನೀಡಿ ಕೆಎಸ್ಎಲ್ ಯುಗೆ ಸೇರ್ಪಡೆಗೊಂಡಿದ್ದರು. 2024ರ ಡಿ.31ರಂದು ಪಾಟೀಲ್ ನಿವೃತ್ತರಾದಾಗಿದ್ದು, ಈ ವೇಳೆ 2013ರ ನಂತರ ಕೆಎಸ್ಎಲ್ ಯುಗೆ ಸೇರ್ಪಡೆಯಾಗಿರುವುದರಿಂದ ನೂತನ ಪಿಂಚಣಿ ಯೋಜನೆ ಅನ್ವಯವಾಗುತ್ತದೆ ಎಂದು ಸರ್ಕಾರ ತಿಳಿಸಿ ಪಿಂಚಣಿ ತಡೆಹಿಡಿದಿತ್ತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
