ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 5.30 ಕೋಟಿ ರೂ. ವಂಚನೆ: ಆರೋಪಿಗಳ ವಿರುದ್ದ FIR ರದ್ದತಿಗೆ ಹೈಕೋರ್ಟ್ ನಕಾರ
ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ತಾವು ಕಾಂಗ್ರೆಸ್ ಪಕ್ಷದ ನಾಯಕರು ಎಂದು ಹೇಳಿಕೊಂಡು ಉದ್ಯೋಗಾಕಾಂಕ್ಷಿಗಳಿಂದ ಸುಮಾರು 5.30 ಕೋಟಿ ಹಣ ಸಂಗ್ರಹಿಸಿದ ಆರೋಪ ಎದುರಿಸುತ್ತಿರುವ ಇಬ್ಬರು ಆರೋಪಿಗಳ ವಿರುದ್ಧ ದಾಖಲಾದ ವಂಚನೆ ಪ್ರಕರಣದ ಎಫ್ ಐಆರ್ ಅನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಸಿಆರ್ಪಿಸಿ ಕಲಂ 482 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 528ರ ಅಡಿಯಲ್ಲಿ ಸಲ್ಲಿಸಲಾಗಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ತನಿಖೆಯ ಪ್ರಾರಂಭಿಕ ಹಂತದಲ್ಲೇ ಮಧ್ಯಪ್ರವೇಶಿಸಲು ನಿರಾಕರಿಸಿತು. ಸುಳ್ಳು ನೇಮಕಾತಿ ಆದೇಶಗಳು, ನಕಲಿ ಇ-ಮೇಲ್ ಐಡಿಗಳು, ಕಪಟ ತರಬೇತಿ ಕೇಂದ್ರಗಳು ಹಾಗೂ ಅಸ್ತಿತ್ವದಲ್ಲೇ ಇಲ್ಲದ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ನಡೆಸಲಾಗಿದೆ ಎನ್ನಲಾದ ವಂಚನೆಯ ಕುರಿತು ದೂರು ಅಸ್ಪಷ್ಟವಾಗಿಲ್ಲ. ಸಂಪೂರ್ಣ ವಂಚನೆಯ ವಿಧಾನವನ್ನು ವಿವರವಾಗಿ ಬಿಂಬಿಸಿದೆ ಎಂದು ಅಭಿಪ್ರಾಯಪಟ್ಟಿತ್ತು.
ಇದು ಸಂಪೂರ್ಣವಾಗಿ ಸುಳ್ಳು ಮತ್ತು ಕಪಟದ ಮೇಲೆ ನಿರ್ಮಿಸಲ್ಪಟ್ಟಿರುವ ಪ್ರಕರಣದಂತಿದೆ. ದೂರಿನಲ್ಲಿರುವ ಆರೋಪಗಳು ಸಂಪೂರ್ಣ ನಕಲಿ ದಾಖಲೆಗಳು ಮತ್ತು ವಂಚನೆಯ ಆಧಾರದ ಮೇಲೆ ರೂಪಿಸಲ್ಪಟ್ಟ ವ್ಯವಸ್ಥೆಯನ್ನು ಚಿತ್ರಿಸುತ್ತವೆ. ಎಂದು ನ್ಯಾಯಪೀಠ ತಿಳಿಸಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಂ.ಟಿ. ನಾಣಯ್ಯ ಹಾಗೂ ರಾಜ್ಯದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ವಾದ ಮಂಡಿಸಿದರು.
ಏನಿದು ಪ್ರಕರಣ..?
ವಂಚನೆಗೈದ ಆರೋಪಿಗಳು ತಾವು ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಎಂದು ಹೇಳಿಕೊಂಡು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ಹಲವರಿಗೆ ಭರವಸೆ ನೀಡಿದ್ದರು. ಈ ಭರವಸೆಯನ್ನು ನಂಬಿದ ಹಲವರು ಹಣ ಪಾವತಿಸಿದ್ದು, ಅವರಿಗೆ ನೇಮಕಾತಿ ಆದೇಶಗಳನ್ನು ನೀಡುವುದಾಗಿ ತಿಳಿಸಿದ್ದರು.
ಪ್ರಾಸಿಕ್ಯೂಷನ್ ಆರೋಪದ ಪ್ರಕಾರ, ಆರೋಪಿಗಳು ನಿರ್ದಿಷ್ಟ ಅವಧಿಗೆ ಮಾತ್ರ ಬಳಸುವ ನಕಲಿ ಇ-ಮೇಲ್ ಐಡಿಗಳನ್ನು ಸೃಷ್ಟಿಸಿ, ಹಣ ನೀಡಿದವರನ್ನು ಕೋಲ್ಕತ್ತಾ ಸೇರಿದಂತೆ ವಿವಿಧ ಸ್ಥಳಗಳಿಗೆ ತರಬೇತಿಗಾಗಿ ಕಳುಹಿಸಿ, ನಕಲಿ ನೇಮಕಾತಿ ದಾಖಲೆಗಳನ್ನು ನೀಡಿದ್ದರು. ನಂತರ ಇದು ವಂಚನೆ ಎಂಬುದು ತಿಳಿದ ಬಳಿಕ ಹಣ ಹಿಂದಿರುಗಿಸುವಂತೆ ಬೇಡಿಕೆಗಳು ಆರಂಭವಾದವು.
ಆರೋಪಿಗಳ ಪರ ವಾದದ ಪ್ರಕಾರ, ಅರ್ಜಿದಾರರು, ವಂಚನೆಗೆ ಒಳಗಾದರೆಂದು ಹೇಳಲಾದ ಯಾರೂ ಸ್ವತಃ ದೂರು ನೀಡಿಲ್ಲ ಎಂದು ವಾದಿಸಿದರು. ದೂರುದಾರನಿಗೆ ಉದ್ಯೋಗ ಭರವಸೆಗೆ ಸಂಬಂಧಿಸಿದ ಯಾವುದೇ ವ್ಯವಹಾರವಿಲ್ಲ. ಜೊತೆಗೆ, ನೆಗೋಷಿಯೇಬಲ್ ಇನ್ಸ್ಟ್ರ್ಯು ಮೆಂಟ್ಸ್ ಕಾಯ್ದೆಯ ಕಲಂ 138ರ ಅಡಿಯಲ್ಲಿ ತಾವು ಆರಂಭಿಸಿದ್ದ ಕ್ರಮಕ್ಕೆ ಪ್ರತೀಕಾರವಾಗಿ ಈ ದೂರು ದಾಖಲಿಸಲಾಗಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ, ರಾಜ್ಯವು ಆರೋಪಿಗಳು ನಕಲಿ ನೇಮಕಾತಿ ಆದೇಶಗಳು, ನಕಲಿ ಇ-ಮೇಲ್ ಐಡಿಗಳು, ಅಸ್ತಿತ್ವದಲ್ಲಿಲ್ಲದ ಸರ್ಕಾರಿ ಇಲಾಖೆಗಳು ಮತ್ತು ಕಪಟ ತರಬೇತಿ ಕೇಂದ್ರಗಳನ್ನು ಬಳಸಿಕೊಂಡು ಸಂಘಟಿತ ವಂಚನೆ ನಡೆಸಿದ್ದಾರೆ ಎಂದು ವಾದಿಸಿತು. ತನಿಖೆಯ ದಾಖಲೆಗಳ ಪ್ರಕಾರ ಸಾರ್ವಜನಿಕರಿಂದ 5.30 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ ಎಂದು ತಿಳಿಸಿತು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ದೂರಿನ ವಿಷಯವನ್ನು ಪರಿಶೀಲಿಸಿ, ಅದು ಅಸ್ಪಷ್ಟ ಅಥವಾ ಸಾಮಾನ್ಯ ಆರೋಪಗಳ ಸಮೂಹವಲ್ಲ. ಉದ್ಯೋಗಾಕಾಂಕ್ಷಿಗಳಿಂದ ಹಣವನ್ನು ಹೇಗೆ ಸಂಗ್ರಹಿಸಲಾಯಿತು ಎಂಬ ಸಂಪೂರ್ಣ ವಿಧಾನವನ್ನು ದೂರಿನಲ್ಲಿ ವಿವರವಾಗಿ ದಾಖಲಿಸಲಾಗಿದೆ ಎಂದು ನ್ಯಾಯಾಲಯ ಅಭಿಪಾಯಪಟಿತು.
ಅಂತಿಮವಾಗಿ ಪ್ರಾಥಮಿಕ ಹಂತದಲ್ಲಿರುವ ತನಿಖೆಯನ್ನು ತಡೆಯಲು ಅಥವಾ ಎಫ್ಐಆರ್ ಅನ್ನು ರದ್ದುಪಡಿಸಲು ಯಾವುದೇ ಕಾನೂನುಬದ್ಧ ಆಧಾರವಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತೀರ್ಮಾನಿಸಿ, ಅರ್ಜಿಯನ್ನು ವಜಾಗೊಳಿಸಿತು. ಪರಿಣಾಮವಾಗಿ, 5.30 ಕೋಟಿ ರೂ. ಸರ್ಕಾರಿ ಉದ್ಯೋಗ ವಂಚನೆ ಪ್ರಕರಣದ ತನಿಖೆ ಮುಂದುವರಿಯಲು ನ್ಯಾಯಾಲಯ ಅನುಮತಿ ನೀಡಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
