Law Guide Kannada

ಉತ್ತಮ ಸಮಾಜಕ್ಕಾಗಿ - ಲಾಗೈಡ್

October 28, 2026

High Court

ಉದ್ಯಮಿಯ ಅಕ್ರಮ ಬಂಧನ: ತಪ್ಪಿತಸ್ಥ ಪೊಲೀಸರು, ಮ್ಯಾಜಿಸ್ಟ್ರೇಟ್ ವಿರುದ್ದ ಕ್ರಮಕ್ಕೆ ಹೈಕೋರ್ಟ್ ಸೂಚನೆ

ಮುಂಬೈ: 2017ರಲ್ಲಿ ಉದ್ಯಮಿ ಬಿಪಿನ್ ಅಗರವಾಲ್ ಅವರ ಬಂಧನ ಕಾನೂನು ಬಾಹಿರ ಎಂದು ತೀರ್ಪು ಪ್ರಕಟಿಸಿರುವ ಬಾಂಬೆ ಹೈಕೋರ್ಟ್ ಉದ್ಯಮಿಯ ಅಕ್ರಮ ಬಂಧನಕ್ಕೆ ಪರಿಹಾರ ನೀಡಲು ಸೂಚಿಸಿರುವುದಲ್ಲದೇ ತಪ್ಪಿತಸ್ಥ ಪೊಲೀಸರು, ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಒಬ್ಬರು ಡೆವಲಪರ್ ಜೊತೆ ಶಾಮೀಲಾಗಿ ಉದ್ಯಮಿ ಬಿಪಿನ್ ಅಗರವಾಲ್ ಅವರನ್ನು ಸುಲಿಗೆ ಪ್ರಕರಣದಲ್ಲಿ ಸಿಲುಕಿಸಲು ಸುಳ್ಳು ಆರೋಪ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಅಜಯ್ ಗಡ್ಕರಿ ಮತ್ತು ನ್ಯಾಯಮೂರ್ತಿ ಕಮಲ್ ಖಾಟಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಮುಂಬೈ ಪೊಲೀಸರು ಅಗರವಾಲ್ ಅವರನ್ನು ಕಾನೂನಿನಲ್ಲಿ ಯಾವುದೇ ಆಧಾರವಿಲ್ಲದೆ 26 ದಿನಗಳ ಕಾಲ ಬಂಧನದಲ್ಲಿಟ್ಟಿದ್ದಾರೆ. ಇದು ಕಾನೂನುಬಾಹಿರವಾದುದು ಎಂದು ಹೇಳಿ ಉದ್ಯಮಿ ಬಿಪಿನ್ ಅಗರವಾಲ್ ಅವರಿಗೆ ₹5,00,000 ಪರಿಹಾರವನ್ನು ಪಾವತಿಸಲು ಆದೇಶಿಸಿತು. ಅಲ್ಲದೇ ಪ್ರಕರಣವನ್ನು ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಮ್ಯಾಜಿಸ್ಟ್ರೇಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ರಾಜ್ಯಕ್ಕೆ ಸೂಚಿಸಿತು. ಪೊಲೀಸ್ ಸಬ್-ಇನ್ಸ್ಪೆಕ್ಟರ್ ಒಬ್ಬರು ಅಗರವಾಲ್ ಮೇಲೆ ಒತ್ತಡ ಹೇರಲು ಪೊಲೀಸ್ ಯಂತ್ರವನ್ನು ಬಳಸಿದ್ದಾರೆ. ಅಗರವಾಲ್ ಅವರನ್ನು ಸುಲಿಗೆಕೋರ ಎಂದು ಹಣೆಪಟ್ಟಿ ಕಟ್ಟಲು ಪೊಲೀಸರು ಸುಳ್ಳು ವಿವರಗಳೊಂದಿಗೆ ದಾಖಲೆಗಳನ್ನು ತಯಾರಿಸಿದ್ದಾರೆ ಎಂಬುದನ್ನ ನ್ಯಾಯಪೀಠವು ಗಮನಿಸಿತು. ಪೊಲೀಸರು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41-ಎ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384 ಅನ್ನು ಅನುಸರಿಸಲು ವಿಫಲರಾಗಿದ್ದಾರೆ. ಬಂಧನ ಮತ್ತು ಬಂಧನವು ವಿವೇಚನಾ ಅನ್ವಯದ ಕೊರತೆಯನ್ನು ಹೊಂದಿದೆ ಮತ್ತು ಶಾಸನಬದ್ಧ ಕಾರ್ಯವಿಧಾನವನ್ನು ನಿರ್ಲಕ್ಷಿಸಿದೆ ಎಂದು ನ್ಯಾಯಪೀಠ ತೀರ್ಮಾನಿಸಿತು. ವಾಲ್ವೇಶ್ವರದಲ್ಲಿ ಪುನರಾಭಿವೃದ್ಧಿ ಹಂತದಲ್ಲಿದ್ದ ಫ್ಲ್ಯಾಟ್ ಮಾರಾಟಕ್ಕೆ ಮಾತುಕತೆ ನಡೆಸಲು ಉದ್ಯಮಿ ಅಗರವಾಲ್ ಅವರು ತಮ್ಮ ಅತ್ತೆಗೆ ಪವರ್ ಆಫ್ ಅಟಾರ್ನಿ ನೀಡಿದ್ದರು ಎಂದು ದಾಖಲೆಗಳು ತೋರಿಸುತ್ತವೆ. ಮಾರಾಟದ ಬೆಲೆಗೆ ಸಂಬಂಧಿಸಿದಂತೆ ಡೆವಲಪರ್ ನೊಂದಿಗೆ ಭಿನ್ನಾಭಿಪ್ರಾಯ ಉಂಟಾಯಿತು. ಡೆವಲಪರ್ ಅಗರವಾಲ್ಗೆ ಮುಂಗಡವಾಗಿ ರೂ. 2,00,000 ನೀಡಿದರು. ಆ ಕ್ಷಣದಲ್ಲಿ ಪೊಲೀಸರು ಕಚೇರಿಗೆ ಪ್ರವೇಶಿಸಿ ಅಗರವಾಲ್ ಅವರನ್ನು ಬಂಧಿಸಿ ಸುಲಿಗೆ ಆರೋಪದ ಮೇಲೆ ದೂರು ದಾಖಲಿಸಿದ್ದರು. ಹೈಕೋರ್ಟ್ ಆಡಳಿತ ಸಮಿತಿಯ ಮುಂದೆ ತೀರ್ಪನ್ನು ಮಂಡಿಸಲು ನ್ಯಾಯಾಲಯವು ರಿಜಿಸ್ಟ್ರಾರ್ಗೆ ನಿರ್ದೇಶಿಸಿತು.ಮ್ಯಾಜಿಸ್ಟ್ರೇಟ್ ಅಗರವಾಲ್ ಅವರನ್ನು ಆಗಸ್ಟ್ 5, 8 ಮತ್ತು 10, 2017 ರಂದು ಕಸ್ಟಡಿಗೆ ಒಪ್ಪಿಸಿದ್ದರು. ಈ ಸಂಬಂಧ ಉದ್ಯಮಿ ಅಗರವಾಲ್ ಅಕ್ರಮ ಬಂಧನಕ್ಕೆ ಆಕ್ಷೇಪಿಸಿದ ನ್ಯಾಯಪೀಠವು, ಮ್ಯಾಜಿಸ್ಟ್ರೇಟ್ ಸ್ವತಃ ವಿವೇಚನಾ ಶಕ್ತಿಯನ್ನು ಬಳಸಲು ವಿಫಲರಾಗಿದ್ದಾರೆ ಮತ್ತು ರಿಮಾಂಡ್ ಕಾರಣಗಳನ್ನು ದಾಖಲಿಸಿಲ್ಲ ಎಂದು. ಬಂಧನವು ಹಣದ ನಷ್ಟ ಮತ್ತು ಅಗರವಾಲ್ ಅವರ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡಿದೆ ಎಂದು ಗಮನಿಸಿತು. ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಅಮಾನತು ಸೇರಿದಂತೆ ಕ್ರಮ ಕೈಗೊಳ್ಳಬೇಕು. ಅವರ ಸಂಬಳದಿಂದ ಪರಿಹಾರವನ್ನು ವಸೂಲಿ ಮಾಡಿ ಪರಿಹಾರವನ್ನ ನೀಡಲು ಅಲ್ಲಿನ ಸರ್ಕಾರಕ್ಕೆ ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು. ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

High Court

ವಕೀಲರ ಜತೆ ದುರ್ವರ್ತನೆ ನ್ಯಾಯಾಂಗ ನಿಂದನೆಯಾಗುತ್ತೆ: PRO ವಜಾಗೊಳಿಸಿದ ತ್ವರಿತ ಕ್ರಮಕ್ಕೆ ಹೈಕೋರ್ಟ್ ಶ್ಲಾಘನೆ

ಅಲಹಾಬಾದ್: ಕರ್ತವ್ಯ ನಿರ್ವಹಿಸುವ ವಕೀಲರೊಂದಿಗೆ ದುರ್ವರ್ತನೆ ತೋರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅಲಹಾಬಾದ್ ಹೈಕೋರ್ಟ್, ವಕೀಲರೊಂದಿಗೆ ದುರ್ವರ್ತನೆ ತೋರಿದ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನ ವಜಾಗೊಳಿಸಿದ ತ್ವರಿತ ಕ್ರಮವನ್ನ ಶ್ಲಾಘಿಸಿದೆ. ಅಲಹಾಬಾದ್ ಹೈಕೋರ್ಟ್ ಅರುಣ್ ಕುಮಾರ್ ಸಿಂಗ್ ದೇಶ್ವಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಉತ್ತರ ಪ್ರದೇಶದ ಆಜಂಗಢ ಜಿಲ್ಲೆಯ ಹಿರಿಯ ಪೊಲೀಸ್ ಅಧೀಕ್ಷಕರ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಎಂಬವರು ಹೆಚ್ಚುವರಿ ಸರ್ಕಾರಿ ವಕೀಲರೊಂದಿಗೆ ನಡೆದುಕೊಂಡ ರೀತಿಗೆ ನ್ಯಾಯಪೀಠ ತೀವು ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರಿ ವಕೀಲರು ನ್ಯಾಯಾಲಯದ ಅಧಿಕಾರಿಗಳಾಗಿದ್ದು, ನ್ಯಾಯಾಂಗದ ನಿರ್ದೇಶನಗಳ ಅನುಷ್ಠಾನಕ್ಕಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ಅವರ ಕರ್ತವ್ಯದ ಭಾಗವಾಗಿದೆ. ರಾಜ್ಯದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೇ ಆಗಿದ್ದರೂ, ಇಂತಹ ಕರ್ತವ್ಯ ನಿರ್ವಹಿಸುವ ವಕೀಲರೊಂದಿಗೆ ದುರ್ವತ್ರನೆ ತೋರಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿತು. ಹಾಗೆಯೇ ಘಟನೆ ಹಿನ್ನೆಲೆಯಲ್ಲಿ ದುರ್ವರ್ತನೆ ತೋರಿದ್ದ ಪಿಆರ್ಒ ರಾಜೇಶ್ ಕುಮಾರ್ ಸಿಂಗ್ ಅವರನ್ನು ಸಂಜೆ 5 ಗಂಟೆಯವರೆಗೆ ನ್ಯಾಯಾಲಯ ವಶದಲ್ಲಿಟ್ಟು, ಬಳಿಕ ಬಿಡುಗಡೆ ಮಾಡಲಾಯಿತು. ರಾಜೇಶ್ ಕುಮಾರ್ ಸಿಂಗ್ ಅವರಿಗೆ ಪೊಲೀಸ್ ಇಲಾಖೆ “ಕಾರಣ ಕೇಳಿ” ನೋಟಿಸ್ ಜಾರಿ ಮಾಡಿದ್ದು, ಪಿಆರ್ಒ ಹುದ್ದೆಯಿಂದ ಅವರನ್ನು ವಜಾ ಮಾಡಲಾಗಿದೆ ಎಂದು ಇಲಾಖೆ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಎಸ್ಎಸ್ಪಿ ಕೈಗೊಂಡ ತ್ವರಿತ ಕ್ರಮವನ್ನು ನ್ಯಾಯಾಲಯ ಶ್ಲಾಘಿಸಿತು. ವಕೀಲರ ವಿರುದ್ದ ದುರ್ವರ್ತನೆ ತೋರುವ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಕುರಿತು ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡುವ ಸುತ್ತೋಲೆ ಹೊರಡಿಸುವಂತೆ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನ್ಯಾಯಪೀಠವು ನಿರ್ದೇಶನ ನೀಡಿತು.   ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

High Court

ಜಾಮೀನು ರಹಿತ ವಾರಂಟ್ ಜಾರಿ ಪೊಲೀಸರ ಆದ್ಯ ಜವಾಬ್ದಾರಿ – ಹೈಕೋರ್ಟ್

ಅಲಹಾಬಾದ್: ಉಚ್ಛ ನ್ಯಾಯಾಲಯ ಹೊರಡಿಸಿದ ಜಾಮೀನು ರಹಿತ ವಾರಂಟ್ ಸ್ವೀಕರಿಸುವ ಪೊಲೀಸ್ ಅಧಿಕಾರಿ ಅದನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವೈಯಕ್ತಿಕವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ. ನ್ಯಾಯಾಲಯ ಆರೋಪಿ ವಿರುದ್ಧ ಹೊರಡಿಸುವ ಜಾಮೀನು ರಹಿತ ವಾರಂಟ್ಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಪೊಲೀಸರ ಆದ್ಯ ಜವಾಬ್ದಾರಿ. ಹೈಕೋರ್ಟ್ ಹೊರಡಿಸಿದ ಜಾಮೀನು ರಹಿತ ವಾರಂಟ್ ಸ್ವೀಕರಿಸುವ ಪೊಲೀಸ್ ಅಧಿಕಾರಿ ಅದನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಶ್ಚಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ. ಅತ್ಯಾಚಾರ ಸಂತ್ರಸ್ತೆಯ ಅಶ್ಲೀಲ ವಿಡಿಯೊವನ್ನು ಅಂತರ್ಜಾಲದಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 2024ರಲ್ಲಿ ಅಜಂಗಢ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ ನ್ಯಾಯಪೀಠವು ಮೇಲಿನ ನಿರ್ದೇಶನಗಳನ್ನು ನೀಡಿದೆ. ವಾರಂಟ್ ಗೆ ಒಳಪಟ್ಟ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವುದು ಸಂಬಂಧಪಟ್ಟ ಅಧಿಕಾರಿಯ ಕರ್ತವ್ಯವಾಗಿದೆ. ಇಂತಹ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ನೀಡುವ ಅಧಿಕಾರವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ವಾರಂಟ್ ಜಾರಿಗೊಳಿಸುವುದನ್ನು ಖುದ್ದಾಗಿ ಖಚಿತಪಡಿಸಿಕೊಳ್ಳದಿರುವುದಕ್ಕೆ ಎಸ್ಎಸ್ಪಿ ನ್ಯಾಯಾಲಯದ ಮುಂದೆ ಕ್ಷಮೆಯಾಚಿಸಿದರು. ಅವರ ಕ್ಷಮೆಯಾಚನೆಯನ್ನು ನ್ಯಾಯಪೀಠ ಸ್ವೀಕರಿಸಿತು. ಎಸ್ಎಸ್ಪಿ ಅವರ ಸೇವಾ ದಾಖಲೆಯಲ್ಲಿ ಯಾವುದೇ ಕಳಂಕವಿಲ್ಲದಿರುವುದನ್ನು ಪರಿಗಣಿಸಿದ ನ್ಯಾಯಪೀಠವು, ಮೃತಪಟ್ಟ ಆರೋಪಿಯ ಅಪ್ರಾಪ್ತ ವಯಸ್ಸಿನ ಇಬ್ಬರು ಪುತ್ರಿಯರನ್ನು ದತ್ತು ಪಡೆದುಕೊಂಡಿರುವ ಅವರ ಕ್ರಮವನ್ನೂ ಪ್ರಶಂಸಿಸಿತು. ಭವಿಷ್ಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬ ನಿರೀಕ್ಷೆಯೊಂದಿಗೆ ಎಸ್ಎಸ್ಪಿ ವಿರುದ್ಧದ ವಿಚಾರವನ್ನು ನ್ಯಾಯಪೀಠವು ಮುಕ್ತಾಯಗೊಳಿಸಿತು.   ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

High Court

‘ಅನಧಿಕೃತ ರಜೆಗೆ ಮಾತೃತ್ವ ಅಸ್ತ್ರವಲ್ಲ: ಮಹಿಳಾ ಉದ್ಯೋಗಿ ವಜಾ ಕ್ರಮ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು: ಮಾತೃತ್ವ ರಜಾ ಅವಧಿ ಪೂರ್ಣಗೊಂಡ ಬಳಿಕ ಅನಧಿಕೃತವಾಗಿ ರಜೆ ಯನ್ನು ವಿಸ್ತರಿಸಿಕೊಂಡು, ಗೈರು ಹಾಜರಿಯನ್ನು ಸಮರ್ಥಿಸಿಕೊಳ್ಳಲು ಮಾತೃತ್ವ ರಜೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಕರ್ನಾಟಕ ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ಸಾಫ್ಟ್ವೇರ್ ತಂತ್ರಜ್ಞೆಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದ ಕ್ರಮವನ್ನು ಎತ್ತಿಹಿಡಿದಿದೆ. ತಮ್ಮನ್ನು ಸೇವೆಯಿಂದ ವಜಾಗೊಳಿಸಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ನ್ಯಾಯಾಲಯದಲ್ಲಿ ಸಾಫ್ಟ್ವೇರ್ ಟೆಕ್ನಿಶಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋನಿಕಾ (36) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ‘ತಾಯ್ತನದ ರಜೆಯನ್ನು ದೀರ್ಘ ಕಾಲದ ಅನಧಿಕೃತ ಗೈರು ಹಾಜರಿಗೆ ಅನುಕೂಲಕರ ಗುರಾಣಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ.’ಮಗುವಿನ ಜನನವನ್ನೇ ಮುಂದು ಮಾಡಿಕೊಂಡು ಸರ್ಕಾರಿ ಉದ್ಯೋಗದ ಜವಾಬ್ದಾರಿಗಳಿಂದ ಶಾಶ್ವತವಾಗಿ ದೂರ ಉಳಿಯುವುದಕ್ಕೆ ಅವಕಾಶವಿಲ್ಲ’ ಎಂದು ಹೇಳಿದೆ. ಮಾತೃತ್ವ ರಜೆಯು ಘನತೆ, ಮಾತೃತ್ವ ಮತ್ತು ಸಾಮಾಜಿಕ ಸಮಾವಣೆ ಮೇಲಿನ ಸಾಂವಿಧಾನಿಕ ಬದ್ಧತೆ ಯಾಗಿದೆ. ಆದರೆ, ಅನಧಿಕೃತ ಗೈರುಹಾಜರಿಗೆ ಅಕ್ಷಯ ಪಾತ್ರೆ ಆಗುವಂತೆ ವಿಸ್ತರಿಸಲಾಗದು. ಅಷ್ಟೇಕೆ, ಅದರ ಕಾನೂನು ಬದ್ಧ ಗಡಿಗಳನ್ನೂ ಮೀರಿ ಚಲಿಸಲಾಗದು’ ಎಂದು ವಿವರಿಸಿದೆ. ‘ಅರ್ಜಿದಾರರು ಕಾನೂನು ಬದ್ಧವಾಗಿ ಸಿಗಬೇಕಾದ ತಾಯ್ತನದ ರಜೆಯನ್ನು ಪೂರ್ಣವಾಗಿ ಬಳಸಿಕೊಂಡ ನಂತರದಲ್ಲೂ ಬೇರೆ ರಜೆಗಳನ್ನು ಪಡೆದಿದ್ದಾರೆ. ಆ ಎಲ್ಲಾ ರಜೆಗಳ ಅವಧಿ ಮುಗಿದ ನಂತರವೂ ಯಾವುದೇ ಅಧಿಕೃತ ಅನುಮತಿ ಪಡೆಯದೆ ದೀರ್ಘಕಾಲ ಗೈರು ಹಾಜರಾಗಿದ್ದಾರೆ ಎಂಬ ಅಂಶ ಗಮನಾರ್ಹ’ ಎಂದು ನ್ಯಾಯಪೀಠ ಉಲ್ಲೇಖಿಸಿದೆ. ‘ಅರ್ಜಿದಾರರಿಗೆ ಸಿಗಬೇಕಾದ ತಾಯ್ತನದ ರಜೆಯನ್ನು ಮೇಲಾಧಿಕಾರಿಗಳು ನಿರಾಕರಣೆ ಮಾಡಿಲ್ಲ. ಆದರೆ, ಆ ರಜೆಗಳು ಮುಗಿದ ನಂತರದಲ್ಲೂ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದಾರೆ ಹಾಗೂ ತಮ್ಮ ಗೈರನ್ನು ಸಮರ್ಥಿಸಿಕೊಳ್ಳಲು ತಾಯ್ತನದ ರಜೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವುದು ಪ್ರಕರಣದಲ್ಲಿ ದೃಢಪಟ್ಟಿದೆ’ ಎಂದು ತಿಳಿಸಿದೆ. ಸರ್ಕಾರಿ ಉದ್ಯೋಗವೆಂದರೆ ಅದು ಜವಾಬ್ದಾರಿಯುತ ಸ್ಥಾನವಾಗಿದೆ. ಕರ್ತವ್ಯನಿಷ್ಠೆ ಮತ್ತು ಶಿಸ್ತನ್ನು ಅಪೇಕ್ಷಿಸುತ್ತದೆ. ಅಸಂಖ್ಯಾತ ಅರ್ಹ ಯುವ ಸಮುದಾಯ ಸರ್ಕಾರಿ ಉದ್ಯೋಗಕ್ಕಾಗಿ ಹಾತೊರೆಯುತ್ತಿದೆ. ಇಂತಹ ಸನ್ನಿವೇಶನದಲ್ಲಿ ಸಿಕ್ಕ ಅವಕಾಶದ ಬಗ್ಗೆ ಉದಾಸೀನ ಮಾಡಬಾರದು. ಮಗು ಹುಟ್ಟಿದ ಕಾರಣ ನೀಡಿ ಸರ್ಕಾರಿ ಉದ್ಯೋಗದ ಜವಾ ಬ್ದಾರಿಗಳಿಂದ ದೂರ ಉಳಿಯುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.   ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

High Court

ರೂ.10 ಸಾವಿರದ ಶಾಂತಿ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ: ನೇಹಾ ಬೋರಾಗೆ ಹಿನ್ನಡೆ

ನವದೆಹಲಿ: ವಿಚಾರಣೆ ವೇಳೆ ಶಾಂತಿ ಕಾಪಾಡುತ್ತೇನೆಂದು ರೂ 10 ಸಾವಿರ ವೈಯಕ್ತಿಕ ಬಾಂಡ್ ಜತೆಗೆ ಶ್ಯೂರಿಟಿ ನೀಡಿ ಸಹಿ ಹಾಕಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ನೇಹಾಬೊರಾ ಅವರಿಗೆ ಆದೇಶಿಸಿದ್ದ ವಿಶೇಷ ಮ್ಯಾಜಿಸ್ಟ್ರೇಟ್ ಆದೇಶವನ್ನ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ. ಶಾಂತಿ ಕಾಪಾಡಲು ₹ 10 ಸಾವಿರದ ವೈಯಕ್ತಿಕ ಬಾಂಡ್ ಹಾಗೂ ಒಬ್ಬ ಜಾಮೀನುದಾರರನ್ನು ಒದಗಿಸುವಂತೆ ಸೂಚಿಸಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಅಖಿಲ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ತಿರಸ್ಕರಿಸಿದ್ದು, ಪ್ರಕರಣದಲ್ಲಿ ‘ಸಾಕಷ್ಟು ಸುರಕ್ಷತಾ ಕ್ರಮಗಳು’ ಇವೆ ಎಂದು ಅಭಿಪ್ರಾಯಪಟ್ಟರು. ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುವ ಮೊದಲು, ಸಂಬಂಧಿತ ಎಲ್ಲ ದಾಖಲೆಗಳು ಹಾಗೂ ಮಾಹಿತಿಯನ್ನು ನೇಹಾ ಬೋರಾ ಅವರಿಗೆ ಒದಗಿಸುವಂತೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಗೆ ಕೋರ್ಟ್ ಸೂಚಿಸಿತು. ವಿಚಾರಣೆ ವೇಳೆ ನೇಹಾ ಬೋರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆಗೆ ಕರೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ರಾಷ್ಟ್ರಧ್ವಜ ಹಾರಿಸಲು ನಾಗರಿಕರು ಅನುಮತಿ ಪಡೆಯುವ ಅಗತ್ಯವೂ ಇಲ್ಲ ಎಂದು ಹೇಳಿದ್ದರು. ಅಕ್ಟೋಬರ್ 16ರಂದು ಮಂಡಿ ಹೌಸ್ನಲ್ಲಿ ಶಾಂತಿಯುತ ಸಭೆ ನಡೆಸುವಂತೆ ಮಾತ್ರ ನೇಹಾ ಬೋರಾ ಕರೆ ನೀಡಿದ್ದರು. ಅಲ್ಲಿಗೆ ತಲುಪಿದ ಕೆಲವೇ ನಿಮಿಷಗಳಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರು ಯಾವುದೇ ಅಪರಾಧ ಮಾಡಿಲ್ಲ ಎಂದರು. ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ಸರ್ಕಾರ ಬದಲಾವಣೆಯಾಗಬೇಕಾದರೆ ಅದು ಮತದಾನದ ಮೂಲಕವೇ ಆಗಬೇಕು; ರಾಷ್ಟ್ರ ರಾಜಧಾನಿಯಲ್ಲಿ ‘ಅರಾಜಕ ಗುಂಪುಗಳು’ ಸೇರಿಕೊಳ್ಳುವ ಮೂಲಕ ಅಲ್ಲ ಎಂದರು. ನೇಹಾ ಬೋರಾ ಅವರು ಮಂಡಿ ಹೌಸ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಶಕ್ಕೆ ಪಡೆದ ಬಳಿಕ, ಅಕ್ಟೋಬರ್ 17ರಂದು ಈ ನೋಟಿಸ್ ನೀಡಲಾಗಿತ್ತು. ‘ಲೆಹರಾ ದೋ ತಿರಂಗಾ’ ಮೆರವಣಿಗೆಗೆ ಸಂಬಂಧಿಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 126 ಮತ್ತು 130ರ ಜೊತೆಗೆ ಸೆಕ್ಷನ್ 135(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿತ್ತು. ನೋಟಿಸ್ ಅಸ್ಪಷ್ಟವಾಗಿದೆ, ಅದರಲ್ಲಿನ ಅಂಶಗಳು ವಾಸ್ತವಕ್ಕೆ ವಿರುದ್ಧವಾಗಿವೆ ಹಾಗೂ ಶಾಂತಿಯುತ ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ನೇಹಾ ಬೋರಾ ಆಕ್ಷೇಪಿಸಿದ್ದರು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜಂತರ್ ಮಂತರ್ ಸಮೀಪ ಪದೇಪದೇ ಪ್ರತಿಭಟನೆ ನಡೆಸಿದ್ದು, ಘೋಷಣೆಗಳನ್ನು ಕೂಗಿದ್ದು ಹಾಗೂ ಕನಾಟ್ ಪ್ಲೇಸ್ ನಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಲು ಯತ್ನಿಸಿದ್ದು ಸೇರಿದಂತೆ ಹಲವು ಆರೋಪಗಳನ್ನು ಪೊಲೀಸರು ಉಲ್ಲೇಖಿಸಿದ್ದರು. ಮುಂಜಾಗ್ರತಾ ಕ್ರಮದ ಭಾಗವಾಗಿ ಕೈಗೊಂಡಿದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ಸಂಬಂಧಿತ ಕಾನೂನು ನಿಯಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಕಾನೂನುಬದ್ದ ಪ್ರಕ್ರಿಯೆ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್ ಗೆ ನಿರ್ದೇಶಿಸಿತು.   ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

Supreme Court

ಸುಪ್ರೀಂ ತೀರ್ಪಿನ ವಿರುದ್ದ ಪೋಸ್ಟರ್ ದ್ವೇಷ ಪ್ರಚೋದಿಸುವ ಅಪರಾಧವೆನಿಸಲ್ಲ- ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ನಮಗೆ ನ್ಯಾಯ ನಿರಾಕರಣೆಯಾಗಿದೆ. ನ್ಯಾಯಕ್ಕಾಗಿ ಧ್ವನಿ ಎತ್ತಿ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಪೋಸ್ಟರ್ ಗಳನ್ನು ರಸ್ತೆ ಬದಿಯ ಗೋಡೆಗಳಿಗೆ ಅಂಟಿಸಿರುವುದು ಕೋರ್ಟ್ ತೀರ್ಪಿಗೆ ಅಸಮ್ಮತಿಯೇ ಹೊರತು ದ್ವೇಷ ಅಥವಾ ಸೌಹಾರ್ದತೆ ಹಾಳು ಮಾಡುವ ಪ್ರಯತ್ನವಲ್ಲ. ದೇಶದ್ರೋಹ ಮತ್ತು ಅಶಾಂತಿ ಉಂಟು ಮಾಡಿದಂತೆಯೂ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಸ್ವಯಂಪ್ರೇರಿತ ಎಫ್ಐಅರ್ ರದ್ದುಪಡಿಸಲು ಕೋರಿ ಮಂಗಳೂರಿನ ಮೊಹಮದ್ ಹನೀಫ್ ಸೇರಿದಂತೆ ಒಟ್ಟು 13 ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ‘ಸಂವಿಧಾನ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಅನ್ಯಾಯವಾಗಿದೆ ಎಂಬ ಒಕ್ಕಣೆಯ ಪೋಸ್ಟರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ದ್ವೇಷ ಪ್ರಚೋದಿಸುವ ಅಪರಾಧ ಎಂದೆನಿಸುವುದಿಲ್ಲ ಎಂದು ತಿಳಿಸಿ ಪ್ರಕರಣವನ್ನ ರದ್ದುಗೊಳಿಸಿದೆ. ಅಂಟಿಸಿದ್ದ ‘ಪೋಸ್ಟರ್ ನಲ್ಲಿದ್ದ ಪದಗಳು ಸಂವಿಧಾನದ 19 ಮತ್ತು 21ನೇ ವಿಧಿಗಳ ಚೌಕಟ್ಟಿನಲ್ಲೇ ಇವೆ. ಯಾರೋ ಕೆಲವರು ಕೋಪಗೊಳ್ಳಬಹುದು ಎಂಬ ಕಾರಣಕ್ಕೆ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 153ಎ ಅಥವಾ 295ಎ ಅನ್ವಯಿಸಲು ಸಾಧ್ಯವಿಲ್ಲ. ಸಾರ್ವಜನಿಕ ಹೇಳಿಕೆ ಅಥವಾ ಪೋಸ್ಟರ್ ಗಳ ಪ್ರಭಾವವನ್ನು ಸಮಾಜದ ಸಾಮಾನ್ಯ ಮತ್ತು ವಿವೇಕಯುತ ಜನರ ದೃಷ್ಟಿಕೋನದಿಂದ ನೋಡಬೇಕು ಎಂದು ನ್ಯಾಯಪೀಠ ತಿಳಿಸಿದೆ. ಏನಿದು ಪ್ರಕರಣ: 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪೊಂದನ್ನು ವಿರೋಧಿಸಿ ಮಂಗಳೂರಿನ ರಸ್ತೆ ಬದಿಯ ಗೋಡೆಗಳ ಮೇಲೆ ನ್ಯಾಯದ ನಿರಾಕರಣೆ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಿ ಎಂದು ಕರೆ ನೀಡುವ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಈ ಸಂಬಂಧ ಮಂಗಳೂರು ದಕ್ಷಿಣ ಪಾಂಡೇಶ್ವರ ಠಾಣೆ ಪೊಲೀಸರು ಮೊಹಮದ್ ಹನೀಫ್ ಸೇರಿದಂತೆ ಒಟ್ಟು 13 ಜನರ ವಿರುದ್ಧ ಐಪಿಸಿ ಕಲಂ 153ಎ (ಗುಂಪುಗಳ ನಡುವೆ ವೈರತ್ವ ಪ್ರಚೋದನೆ), 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ), 120 ಬಿ (ಅಪರಾಧಿಕ ಸಂಚು) ಹಾಗೂ ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆ-1981ರ ಅಡಿ ಸ್ವಯಂಪ್ರೇರಿತ ಎಫ್ ಐಆರ್ ದಾಖಲಿಸಿದ್ದರು. ಪ್ರಕರಣವನ್ನ ರದ್ದುಗೊಳಿಸುವಂತೆ ಕೋರಿ ಮೊಹಮದ್ ಹನೀಫ್ ಸೇರಿದಂತೆ ಒಟ್ಟು 13 ಜನರ ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.   ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

High Court

ಪೊಲೀಸರು ಇನ್ಮುಂದೇ ಸಿಕ್ಕ ಸಿಕ್ಕಂತೆ FIR ಹಾಕುವಂತಿಲ್ಲ: ಹೊಸ ಗೈಡ್ ಲೈನ್ಸ್ ಹೊಡಿಸಿದ ಹೈಕೋರ್ಟ್

ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಮೆಕ್ಯಾನಿಕಲ್ ಅರೆಸ್ಟ್ ಮತ್ತು ಎಫ್ ಐಆರ್ ಕುರಿತಂತೆ ಪೊಲೀಸರ ವಿರುದ್ದ ಗರಂ ಆದ ಕರ್ನಾಟಕ ಹೈಕೋರ್ಟ್ ಆರೋಪ ಎದುರಾದ ಕೂಡಲೇ ಕ್ರಮ ತೆಗೆದುಕೊಳ್ಳದೇ, ಮೊದಲು, ದೂರನ್ನು ಮೇಲ್ನೋಟಕ್ಕೆ ಪರಿಶೀಲಿಸಿ. ಎಫ್ ಐಆರ್ ದಾಖಲಿಸುವ ಮುನ್ನ ಪ್ರಾಥಮಿಕ ತನಿಖೆಗೆ ಆದ್ಯತೆ ನೀಡಿ ಎಂದು ಸಲಹೆಗಳನ್ನ ನೀಡಿದೆ. ಒಂದು ಪೋಸ್ಟ್ ವಿರುದ್ದ ಪೊಲೀಸರು ಒಂದೇ ದಿನ ಏಳು ಎಫ್ ಐಆರ್ ಅನ್ನು ದಾಖಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠವು, ಕರ್ನಾಟಕ ಪೊಲೀಸರಿಗೆ ಹೊಸ ಐದು ಮಾರ್ಗಸೂಚಿಗಳನ್ನ ಹೊರಡಿಸಿದೆ. ಒಂದು ಪೋಸ್ಟ್ ವಿರುದ್ದ ಪೊಲೀಸರು ಒಂದೇ ದಿನ ಏಳು ಎಫ್ ಐಆರ್ ಅನ್ನು ದಾಖಲಿಸಿದ್ದರು. ಯಾರ ಮೇಲಾದರೂ, ಅಪರಾಧ ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧನ ನಡೆಯಬಾರದು ಎಂದು ಸೂಚಿಸಿರುವ ನ್ಯಾಯಪೀಠವು, ಸಾಮಾಜಿಕ ಜಾಲತಾಣದ ಪೋಸ್ಟಿಗೆ ಸಂಬಂಧಿಸಿದಂತೆ, ದೂರು ಸರಿಯಾಗಿ ಪರಿಶೀಲನೆಯಾಗದೇ ಬಂಧಿಸುವುದು ಮತ್ತು ಎಫ್ ಐಆರ್ ಹಾಕುವುದನ್ನು ತಡೆಯಲು, ಮಾರ್ಗಸೂಚಿಯನ್ನು ಅನುಸರಿಸುವಂತೆ, ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಪ್ರಕರಣದ ವಿವರ… ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎನ್ನುವಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ, ಅವರನ್ನು ಫಾಲೋ ಮಾಡಿದ ಆರೋಪದ ಮೇಲೆ ಆರು ಮಂದಿ ಯುವಕರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಸುದ್ದಿಯನ್ನು ‘ಕರ್ನಾಟಕ ಪೋರ್ಟ್ ಫೋಲಿಯೋ’ ಎನ್ನುವ ಎಕ್ಸ್ ಖಾತೆ ರಿಪೋಸ್ಟ್ ಮಾಡಿತ್ತು. ಇದಕ್ಕಾಗಿ, ಇವರ ಈ ಹ್ಯಾಂಡಲಿನ ಅಡ್ಮಿನ್ ವಿರುದ್ದ ಎಫ್ ಐಆರ್ ದಾಖಲಾಗಿತ್ತು. ಪ್ರತಿವಾದಿಗಳು, ಇವರು ಸುಳ್ಳು ಮಾಹಿತಿಯನ್ನು ಹರಡುತ್ತಾ, ಕೋಮುದ್ವೇಷಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಅವರ (ಕರ್ನಾಟಕ ಪೋರ್ಟ್ ಫೋಲಿಯೋ) ಮೇಲೆ, BNS 353(2) ಅಡಿಯಲ್ಲಿ ದೂರು ದಾಖಲಾಗಿತ್ತು. ಆದರೆ, ಪ್ರತಿವಾದಿಗಳ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಯಿಲ್ಲ ಮತ್ತು ಮತ್ತು ದುರುದ್ದೇಶ ಸಾಬೀತಾಗಿಲ್ಲ ಎಂದು ನ್ಯಾಯಪೀಠವು ಎಫ್ಐಆರ್ ಅನ್ನು ರದ್ದುಗೊಳಿಸಿತ್ತು. ಇದೀಗ ಈ ಕೇಸಿನ ವಿಚಾರಣೆಗೆ ಸಂಬಂಧಿಸಿದಂತೆ, ಹೈಕೋರ್ಟ್ ನ್ಯಾಯಪೀಠವು, ಕರ್ನಾಟಕ ಪೊಲೀಸರು ಪಾಲಿಸಬೇಕಾದ ಐದು ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದ್ದು ಅವುಗಳು ಈ ಕೆಳಕಂಡಂತಿದೆ,.. ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದಂತೆ, ಸುಪ್ರೀಂಕೋರ್ಟಿನ ಸತೇಂದರ್ ಕುಮಾರ್ ಅಂಟಿಲ್ ಮತ್ತು ತೆಲಂಗಾಣ ಹೈಕೋರ್ಟಿನ ಬಾಲು ಪ್ರಕರಣವನ್ನು ಉಲ್ಲೇಖಿಸಿ, ನ್ಯಾಯಪೀಠವು ಐದು ಮಾರ್ಗಸೂಚಿಯನ್ನು ಹೊರಡಿಸಿದೆ. 1. ಆರೋಪ ಎದುರಾದ ಕೂಡಲೇ ಕ್ರಮ ತೆಗೆದುಕೊಳ್ಳದೇ, ಮೊದಲು, ದೂರನ್ನು ಮೇಲ್ನೋಟಕ್ಕೆ ಪರಿಶೀಲಿಸಿ, ಏನು ಆರೋಪ ಮಾಡಲಾಗಿದೆಯೋ, ಆ ಅಪರಾಧದ ಅಂಶಗಳಿವೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಶಿಕ್ಷಾರ್ಹ ಕಾಯಿದೆಯ ನಿಯಮಗಳನ್ನು ನಕಲು ಮಾಡಬೇಡಿ. ಪೊಲೀಸರು ಇನ್ಮುಂದೇ ಸಿಕ್ಕ ಸಿಕ್ಕಂತೆ FIR ಹಾಕುವಂತಿಲ್ಲ: ಹೊಸ ಗೈಡ್ ಲೈನ್ಸ್ ಹೊಡಿಸಿದ ಹೈಕೋರ್ಟ್ 2. ಸತತ ಎಫ್ ಐಆರ್ ಗಳನ್ನು ಪರಿಶೀಲಿಸಬೇಕು. ಒಂದೇ, ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ ದೂರು ದಾಖಲಾಗಿದ್ದರೆ, ಮತ್ತೊಂದು ಹೊಸ ಎಫ್ ಐಆರ್ ದಾಖಲಿಸಬಾರದು. ದೂರುದಾರರು ಬೇರೆಯವರು ಆಗಿದ್ದರೂ, ಮತ್ತೊಂದು FIR ದಾಖಲಿಸಬಾರದು. 3. ಯಾವುದೇ ಬಂಧನ ಅಥವಾ ಎಫ್ಐಆರ್ ದಾಖಲಿಸುವ ಮುನ್ನ, BNS 173(3) ಅಡಿಯಲ್ಲಿ, ಅವಕಾಶ ಇರುವ ಕಡೆ, ಪ್ರಾಥಮಿಕ ತನಿಖೆಯನ್ನು ನಡೆಸುವುದಕ್ಕೆ ಆದ್ಯತೆಯನ್ನು ನೀಡಬೇಕು. ಪೊಲೀಸರು ಇನ್ಮುಂದೇ ಸಿಕ್ಕ ಸಿಕ್ಕಂತೆ FIR ಹಾಕುವಂತಿಲ್ಲ: ಹೊಸ ಗೈಡ್ ಲೈನ್ಸ್ ಹೊಡಿಸಿದ ಹೈಕೋರ್ಟ್ 4. ಕೇವಲ ಟೀಕೆ ಬಂಧನ/ ಎಫ್ಐಆರ್’ ಗೆ ಕಾರಣವಾಗಬಾರದು. BNS 353(2) ಅನ್ವಯವಾಗುವಂತೆ, ಪೋಸ್ಟಿನ ನೈಜ ಉದ್ದೇಶ ಸೇರಿದಂತೆ ನಿರ್ದಿಷ್ಟ ಅಂಶಗಳನ್ನು ಪರಿಶೀಲಿಸಬೇಕು. ಕೇವಲ ಟೀಕೆ ಟಿಪ್ಪಣಿಯನ್ನು ಈ ಕಾಯಿದೆಯಡಿಯಲ್ಲಿ ತರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಾಗಲಿ. 5. ಮೊದಲು ನೋಟಿಸ್ ನೀಡಿ ವಿಚಾರಣೆ ಮಾಡಿ . ಃಓS 35 ಮತ್ತು ಅರ್ನೇಶ್ ಕುಮಾರ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಬಂಧನದ ಅಗತ್ಯ ಇಲ್ಲದೇ ಇದ್ದಲ್ಲಿ ಸೆಕ್ಷನ್ 35(3) ನೋಟಿಸ್ ನೀಡಿ ವಿಚಾರಣೆಯನ್ನು ನಡೆಸಬಹುದು. ಎಫ್ ಐಆರ್ ದಾಖಲಾದ ಕೂಡಲೇ, ಬಂಧಿಸುವಂತಿಲ್ಲ. ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಈ ಮಾರ್ಗಸೂಚಿಯನ್ನು ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆಯ ಮುಖಾಂತರ ತಲುಪಿಸಿ ಎಂದು ನ್ಯಾಯಪೀಠ ಸೂಚಿಸಿದೆ.   ಎಚ್ ಎನ್ ವೆಂಕಟೇಶ್ ಗೌರವ ಸಂಪಾದಕರು ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಮೈಸೂರು

Scroll to Top