07/03/2026

Law Guide Kannada

Online Guide

ಸಾಕ್ಷಿ ರಹಿತ ವರದಕ್ಷಿಣೆ ಕಿರುಕುಳ ಆರೋಪ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಪತಿ ಹಾಗೂ ಅವರ ಕುಟುಂಬದ ವಿರುದ್ದ ಪತ್ನಿ ಮಾಡಿದ್ದ ಸಾಕ್ಷಿ ರಹಿತ ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣವನ್ನ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಯಾವುದೇ ಸಾಕ್ಷಾಧಾರಗಳು ಇಲ್ಲದೆ ಹಾಸಿಗೆ ಹಿಡಿದಿದ್ದ 80 ವರ್ಷದ ಮಹಿಳೆ ಸೇರಿದಂತೆ ಪತಿ ಹಾಗೂ ಅವರ ಕುಟುಂಬದ ಎಲ್ಲರ ವಿರುದ್ಧ ಪತ್ನಿ ದಾವಣಗೆರೆ ವಿಚಾರಣಾ ನ್ಯಾಯಾಲಯದಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು. ಈ ಮಧ್ಯೆ ಪತ್ನಿಯು ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಚಿತ್ರದುರ್ಗದ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣವನ್ನ ರದ್ದುಗೊಳಿಸಿದೆ. ದಾವಣಗೆರೆ ವಿಚಾರಣಾ ನ್ಯಾಯಾಲಯದಲ್ಲಿ ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಬೋಳು ಆರೋಪಗಳನ್ನು ಮಾತ್ರ ಮಾಡಲಾಗಿದೆ. ವರದಕ್ಷಿಣೆ ಕಿರುಕುಳಕ್ಕೆ ಸಾಕ್ಷ್ಯಗಳನ್ನು ನೀಡಿಲ್ಲ ಎಂಬುದನ್ನ ನ್ಯಾಯಪೀಠ ಗಮನಿಸಿತು.

ಈ ಪ್ರಕರಣದಲ್ಲಿ ನೋಟೀಸ್ ಜಾರಿ ಮಾಡಿದ್ದರೂ ಹೈಕೋರ್ಟ್ ವಿಚಾರಣೆಯಲ್ಲಿ ಪತ್ನಿ ಭಾಗಿಯಾಗಿಲ್ಲ. ವರದಕ್ಷಿಣೆ ತಡೆ ಕಾಯ್ದೆ-1961ರ ಸೆಕ್ಷನ್ 3 ಮತ್ತು 4ರಡಿ ದೂರು ಸಲ್ಲಿಸುವಾಗ ಪಶ್ಚಾತ್ ಪರಿಣಾಮದ ಬಗ್ಗೆ ಮಹಿಳೆ ಯಾವುದೇ ಯೋಚನೆಯನ್ನೂ ಮಾಡಿಲ್ಲ. ಇಂತಹ ಪ್ರಕರಣಗಳನ್ನು ಹೀಗೆಯೇ ಮುಂದುವರಿಯಲು ಬಿಟ್ಟರೆ ಕಾನೂನಿನ ದುರ್ಬಳೆಕಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪತ್ನಿ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.