ಡೈಸಿ ಬೆಕ್ಕು ಅಪಹರಣ ಕೇಸ್ : ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ : ಪ್ರಕರಣವೇ ರದ್ದು
ಬೆಂಗಳೂರು: ಡೈಸಿ ಬೆಕ್ಕು ಅಪಹರಣ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಲ್ಲದೇ ಅದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಪೊಲೀಸರ ಕ್ರಮದಿಂದ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವಾಗಿದೆ ಎಂದು ಗರಂ ಬೇಸರ ವ್ಯಕ್ತಪಡಿಸಿತು.
ಅಲ್ಲದೆ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಮತ್ತು ಅದರ ಸಂಬಂಧ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ನೆರೆಮನೆಯ ಬೆಕ್ಕನ್ನು ಅಪಹರಿಸಿದ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ.
ಡೈಸಿ ಬೆಕ್ಕಿನ ಅಪಹರಣ ಪ್ರಕರಣದಲ್ಲಿ ಪೊಲೀಸರು ನ್ಯಾಯದ ವಿಕ್ಷಿಪ್ತ ಅನ್ವೇಷಣೆಯಲ್ಲಿ ತಲ್ಲೀನರಾಗಿರುವ ಬಗ್ಗೆ ಹೈಕೋರ್ಟ್ ನ್ಯಾಯಪೀಠ ತೀವು ಬೇಸರ ವ್ಯಕ್ತಪಡಿಸಿತು.
2022ರಲ್ಲಿ ನಿಖಿತಾ ಅಂಜನಾ ಐಯ್ಯರ್ ಎಂಬವರು ಅನ್ವಯ ತಾಹ ಹುಸೇನ್ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಪೊಲೀಸರು ಹುಸೇನ್ ವಿರುದ್ಧ 428 ಮತ್ತು 429 ಅಡಿ ಪ್ರಕರಣ ದಾಖಲಿಸಿದ್ದರು. ಆ ಬಳಿಕ, ಐಪಿಸಿ ಸೆಕ್ಷನ್ 504, 506 ಮತ್ತು 509 ಅನ್ನು ಉಳಿಸಿಕೊಂಡಿದ್ದರು. ಇದೀಗ ಇಡೀ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ. ನಾಪತ್ತೆಯಾಗಿರುವ ಬೆಕ್ಕಿನ ಪ್ರಕರಣದಲ್ಲಿ ಇಡೀ ಪೊಲೀಸ್ ವ್ಯವಸ್ಥೆ ಭಾಗಿಯಾಗಿದ್ದು, ಸಿಸಿಟಿವಿ ತುಣುಕು ಪರಿಶೀಲಿಸಿ ಏನೂ ಸಿಗದಿದ್ದರೂ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ದೂರಿನಲ್ಲಿ ಇರದ ಅಂಶಗಳನ್ನೂ ಆರೋಪ ಪಟ್ಟಿ ಒಳಗೊಂಡಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ದೂರುದಾರೆಯನ್ನು ನಿಂದಿಸಿರುವುದು ಮತ್ತು ಲೈಂಗಿಕ ಸಂಜ್ಞೆಗಳನ್ನು ಮಾಡಿರುವುದು ಆರೋಪಪಟ್ಟಿ ಒಳಗೊಂಡಿದೆ. ಈ ಅಂಶಗಳು ದೂರಿನಲ್ಲಿ ಇಲ್ಲದಿದ್ದರೂ ಆರೋಪಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ಪೊಲೀಸರ ಕ್ರಮಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಡೈಸಿ ಬೆಕ್ಕು ಎಲ್ಲರ ಮತಿಗೆಡಿಸಿದೆ. ಇದಕ್ಕೆ ಕ್ರಿಮಿನಲ್ ನ್ಯಾಯದಾನದ ವ್ಯವಸ್ಥೆಯೂ ಹೊರತಾಗಿಲ್ಲ ಎಂದು ಟಿಪ್ಪಣಿ ಮಾಡಿದ ನ್ಯಾಯಪೀಠ, ಆರೋಪಿಯು ತಮ್ಮ ಮನೆಯಲ್ಲಿ ಬೆಕ್ಕನ್ನು ಇಟ್ಟುಕೊಂಡಿದ್ದಾರೆ ಎಂಬ ಆರೋಪದ ಹೊರತಾಗಿ ಬೇರಾವುದೇ ಆಪರಾಧ ಕಾಣುತ್ತಿಲ್ಲ ಎಂದು ಹೇಳಿತು.
ಏನಿದು ಪ್ರಕರಣ
ಪಕ್ಕದ ಮನೆಯ ಡೇಸಿ ಎಂಬ ಹೆಸರಿನ ಬೆಕ್ಕು ತಮ್ಮ ಮನೆಯಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಬೆಕ್ಕು ಸಾಕುತ್ತಿರುವ ನಿಖಿತಾ ಅಂಜನಾ ಅಯ್ಯಂಗಾರ್ ದಾಖಲಿಸಿದ್ದ ದೂರು ಆಧರಿಸಿ ಆನೇಕಲ್ ತಾಲೂಕಿನ ಶಿಕಾರಿಪಾಳ್ಯದ ಸಿರಾಜ್ ಬಡಾವಣೆಯ 2ನೇ ಅಡ್ಡರಸ್ತೆಯ ನಿವಾಸಿ ತಹ ಹುಸೈನ್ ವಿರುದ್ಧ ಹೆಬ್ಬಗೋಡಿ ಠಾಣಾ ಪೊಲೀಸರು ಜೀವ ಬೆದರಿಕೆ, ಶಾಂತಿಭಂಗ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು. ಬಳಿಕ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಆನೇಕಲ್ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯವು 2022ರ ಸೆ.2ರಂದು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ತಮ್ಮ ವಿರುದ್ದ ಪ್ರಕರಣ ರದ್ದು ಕೋರಿ ತಹ ಹುಸೈನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
